ಸುಳ್ಯ ನಗರ ಪಂಚಾಯತ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ವಿಚಾರದಲ್ಲಿ ತೀವ್ರ ಚರ್ಚೆ ನಡೆದು ಕೆಲ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೋಗುವ ಪ್ರಯತ್ನ ಗದ್ದಲ ಗಲಾಟೆ ಆದ ಬಳಿಕ ವಾಪಾಸು ಸಭೆಯಲ್ಲಿ ಭಾಗವಹಿಸಿದ ಹೈಡ್ರಾಮ ನಡೆಯಿತು.
ನ.ಪಂ. ನಲ್ಲಿ ಆಗಸ್ಟ್ 7 ರಂದು ವಿಶೇಷ ಸಭೆಯನ್ನು ಕರೆಯಲಾಗಿತ್ತು.ನಗರದಲ್ಲಿನ ಕೊಳೆಗೇರಿ ನಿರ್ವಹಣೆ, ಕುಡಿಯುವ ನೀರು, ಒಳಚರಂಡಿ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು. ಆದರೆ ಸ್ಮಶಾನ, ಕಸ, ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಚರ್ಚೆ, ಗದ್ದಲವಾಗುತ್ತಲೇ ಸಭೆ ಮುಕ್ತಾಯ ಕಂಡಿತು.
ಕಸವನ್ನು ಎಲ್ಲಾ ಕಡೆ ಎಸೆಯಲಾಗುತ್ತಿದೆ. ವಾರ್ಡ್ ಸದಸ್ಯರು ಈ ಕುರಿತು ಕೊಂಚ ಜಾಗೃತಿ ಮೂಡಿಸಬೇಕು ಎಂದು ನ.ಪಂ.ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಹೇಳಿದರು. ಇದಕ್ಕೆ ಪರೊಹಾರವಾಗಿ ಒಟ್ಟು 20 ಸಿಸಿ ಕ್ಯಾಮರಾ ಖರೀದಿಸಿ ಅಳವಡಿಸುವುದು ಉತ್ತಮ ಎಂದು ಕೆ.ಎಸ್. ಉಮ್ಮರ್ ಸಲಹೆ ನೀಡಿದರು. ಇದಕ್ಕೆ ಅಧ್ಯಕ್ಷರು ಮಾತನಾಡಿ ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳಲು ಸಿಸಿ ಕ್ಯಾಮರದಿಂದ ಮಾತ್ರ ಸಾಧ್ಯವಿಲ್ಲ. ಅದು ಜನರ ಮನಸ್ಸಿನಿಂದ ಬರಬೇಕು.
ಕಾಂತಮಂಗಲದಲ್ಲಿ ಸಿಸಿ ಕ್ಯಾಮರಾದ ಬುಡದಲ್ಲೇ ಕಸ ಇದೆ ಎಂದರು. ಈ ಮಾತಿಗೆ ಆಕ್ರೋಶಗೊಂಡರು. ನಮ್ಮ ಸಲಹೆಗಳು ನಿಮಗೆ ಸಮಸ್ಯೆಯಾಗಿ ಕಂಡುಬಂದರೆ ನಮಗೆ ಈ ಸಭೆಯೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ಬೊಬ್ಬೆಹೊಡೆಯುತ್ತಾ ಸಭೆಯಿಂದ ಹೊರಹೋಗಲು ಮುಂದಾದರು. ಸ್ವಲ್ಪ ಹೊತ್ತಿನ ಮಾತಿನ ಚಕಮಕಿಯ ಬಳಿಕ ಸಭೆ ಶಾಂತವಾಯಿತು.
ಸ್ಮಶಾನದ ನಿರ್ವಹಣೆಯನ್ನು ಸರಿಯಾಗಿ ಮಾಡಲಾಗುತ್ತಿಲ್ಲ. ಕೇರ್ಪಳದ ಸ್ಮಶಾನ ಸರಿ ಮಾಡಿದರೆ ನಗರದವರು ಕೊಡಿಯಾಲ ಬೈಲಿಗೆ ಹೋಗಬೇಕಾಗಿಲ್ಲ. ಆದರೆ ಕೇರ್ಪಳ ಸ್ಮಶಾನವನ್ನು ಅಭಿವೃದ್ಧಿ ಮಾಡಲು ನ.ಪಂ. ಮನಸು ಮಾಡದೇ ಸ್ಮಶಾನ ಮುಚ್ಚಲು ಮನಸು ಮಾಡುತ್ತಿದೆ ಎಂದು ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಆರೋಪಿಸಿದರು.
ಇದಕ್ಕೆ ವಿನಯ್ ಕುಮಾರ್ ಕಂದಡ್ಕ ಮಾತನಾಡಿ ಸ್ಮಶಾನ ಮುಚ್ಚಿದ್ದೇವೆ ಎಂದು ವಿಪಕ್ಷ ಮಾತ್ರ ಹೇಳುತ್ತಿದೆ. ಆದರೆ ಅಲ್ಲಿ ಶವ ಸಂಸ್ಕಾರ ಈಮೊದಲಿನಂತೇ ನಡೆಯುತ್ತಿದೆ ಎಂದರು. ಅದರಲ್ಲಿನ ಈಗಿನ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು.
ಇದಲ್ಲದೇ ನ.ಪಂ. ನಲ್ಲಿನ ಕುಡಿಯುವ ನೀರು, ಒಳಚರಂಡಿ, ಕೊಳೆಗೇರಿ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ಸಣ್ಣಗೆ ಚರ್ಚೆಗಳಾದವು.
ಈ ಸಂದರ್ಭ ನ.ಪಂ.ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಆಧ್ಯಕ್ಷ ಬುದ್ದನಾಯ್ಕ ಮೊದಲಾದವರು ಉಪಸ್ಥಿತರಿದ್ದರು.