
ಭಾರತೀಯ ಜನತಾಪಾರ್ಟಿ ಸರಕಾರದ ಪ್ರಮಾಣವಚನ ಸ್ವೀಕಾರ ಸಭೆಗೆ ಈ ಹಿಂದೆ ಗರ್ಭಿಣಿಯರಿಗೆ, ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗೆ ನೀಡುತ್ತಿದ್ದ ಮೊಟ್ಟೆಯಲ್ಲಿ ಹಗರಣ ಮಾಡಿದ ಆರೋಪ ಹೊತ್ತ ಶಶಿಕಲಾ ಜೊಲ್ಲೆಯವರು ಜೀರೋ ಟ್ರಾಫಿಕ್ ಮೂಲಕ ಆಗಮಿಸಿದ್ದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಈ ವಿಚಾರವಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಕಟುವಾಗಿ ಟೀಕಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಅಂಧ ದರ್ಬಾರ್ ಗೆ ಇಂದಿನ ಪ್ರಮಾಣವಚನ ಕಾರ್ಯಕ್ರಮ ಸಾಕ್ಷಿಯಾಗಿದೆ. ಅಪೌಷ್ಟಿಕತೆಯ ನಿವಾರಣೆಗಾಗಿ ಗರ್ಭಿಣಿಯರಿಗೆ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ನಡೆಸಿದ ಶಶಿಕಲಾ ಜೊಲ್ಲೆಯನ್ನು ಜೀರೋ ಟ್ರಾಫಿಕ್ ಮೂಲಕ ಕೆಂಪುಹಾಸನ್ನು ಹಾಸಿ ಪ್ರಮಾಣವಚನಕ್ಕೆ ಕರೆದುಕೊಂಡು ಹೋಗಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಬಿಜೆಪಿ ನೀಡಿದ ಕಪ್ಪು ಚುಕ್ಕೆಯಾಗಿದೆ.ಹಗರಣ ನಡೆಸಿದವರಿಗೆ ರಾಜಮರ್ಯಾದೆಯ ಸ್ವಾಗತ ನೀಡುವ ಮೂಲಕ , ನಿಯತ್ತಿನ ರಾಜಕೀಯಕ್ಕೆ ಬಿಜೆಪಿ ಎಳ್ಳು ನೀರು ಬಿಟ್ಟಿದ್ದೇವೆ ಎಂದು ಜನರ ಮುಂದೆ ಹೇಳುವುದೊಂದೆ ಬಾಕಿ ಇರುವಂತಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.