
ಗುತ್ತಿಗಾರು ಗ್ರಾಮವನ್ನು ಕೇಂದ್ರವಾಗಿರಿಸಿ ಹತ್ತು ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರ ಶಾಶ್ವತ ಅನುಕೂಲಕ್ಕಾಗಿ ಟ್ರಸ್ಟ್ ಮುಖಾಂತರ ದೇಣಿಗೆ ಸಂಗ್ರಹಣೆ ಮಾಡಿ ಅಂಬ್ಯುಲೆನ್ಸ್ ಖರೀದಿ ಮಾಡಿ ಮಿತ ದರದಲ್ಲಿ ಸೇವೆ ಒದಗಿಸುವ ಬಗ್ಗೆ ಸಭೆ ನಡೆಸಲಾಯಿತು. ಲಾಕ್ ಡೌನ್ ಮುಗಿದ ತಕ್ಷಣವೇ ಸದ್ರಿ ಯೋಜನೆಯನ್ನು ಅನುಷ್ಟಾನಗೊಳಿಸುವುದು ಮತ್ತು ದಾನಿಗಳು ಅಥವಾ ಸಂಸ್ಥೆಯೊಂದು ಅಂಬ್ಯುಲೆನ್ಸ್ ವಾಹನದ ಸಂಪೂರ್ಣ ವೆಚ್ಚವನ್ನು ಕೊಡುಗೆಯಾಗಿ ನೀಡಿದ್ದಲ್ಲಿ ಪಡೆದುಕೊಳ್ಳುವುದು ಹಾಗೂ ಅದರ ನಿರ್ವಹಣೆ ಮತ್ತು ಸೇವೆಯನ್ನು ಟ್ರಸ್ಟ್ ವತಿಯಿಂದ ಮಾಡುವುದು ಹಾಗೂ ಈ ಕುರಿತು ಗಣ್ಯರ ಸಂಪರ್ಕ ಮಾಡುವುದೆಂದು ತೀರ್ಮಾನಕ್ಕೆ ಬರಲಾಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ಪದಾಧಿಕಾರಿಗಳು, ವಕೀಲರು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ವರ್ತಕ ಸಂಘದ ಸದಸ್ಯರು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಅಯ್ಯಪ್ಪ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.