ಅಬ್ಬಾ ಒಂದು ದಿನ ಕರೆಂಟಿಲ್ಲ ಅಂದರೆ ಸಾಕು ನಮ್ಮ ದಿನಚರಿಯೇ ಉಲ್ಟಾ ಆಗಿ ಬಿಡುತ್ತದೆ. ಪಂಪ್ ವರ್ಕ್ ಆಗಲ್ಲ, ಮಿಕ್ಸಿ , ಟಿವಿ ಉಪಯೋಗಿಸಲು ಆಗೋದಿಲ್ಲ, ಮೊಬೈಲ್ ಹೆಚ್ಚು ಒತ್ತಲು ಆಗುವುದಿಲ್ಲ. ಇಲ್ಲದೆ ಕತ್ತಲೆಯಲ್ಲಿ ಬದುಕು ನೂಕುತ್ತಿರುವ ಕುಟುಂಬ, ಕಡಬ ತಾಲೂಕಿನ ಬಳ್ಪ ಗ್ರಾಮದ ಅರ್ಗುಡಿ ಎಂಬಲ್ಲಿ ವಾಸವಾಗಿರುವ ಕುಶಾಲಪ್ಪ ಗೌಡ ಅವರ ಕುಟುಂಬ. ಇವರ ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದು ಕುಶಾಲಪ್ಪ ಗೌಡ ಪತ್ನಿ ಕಮಲ ಹಾಗೂ ಮಕ್ಕಳಾದ ನಿತೀಶ್ ಮತ್ತು ಮೋಕ್ಷಿತ್ ಅವರ ಜೊತೆ ಬದುಕುತ್ತಿದ್ದಾರೆ.
ಕುಶಾಲಪ್ಪ ಗೌಡ ಅವರು ಕೂಲಿ ಮಾಡಿಕೊಂಡು, ಅವರ ಪತ್ನಿ ಕಳೆದ 17 ವರ್ಷಗಳಿಂದ ಬೀಡಿ ಕಟ್ಟಿಕೊಂಡು ಇಬ್ಬರು ಸೇರಿ ತಮ್ಮ ಮನೆಯ ನಡೆಸುತ್ತಿದ್ದಾರೆ. ಇವರಿಗೆ ತಿಂಗಳಿಗೆ 6 ಲೀ ಡಿಸೀಲಿನ ಅವಶ್ಯಕತೆ ಇದೆ. ಪ್ರಸ್ತುತ ದಿನಗಳಲ್ಲಿ ಡಿಸೀಲ್‌ನ ಬೆಲೆ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಕೊಂಡುಕೊಳ್ಳುವುದು ಕಷ್ಟವಾಗುತ್ತಿದೆ.
ಹಲವು ಬಾರಿ ವಿದ್ಯುತ್ಗಾಗಿ ಮನವಿ ಕೊಟ್ಟರೂ ವಿದ್ಯುತ್ ಸಂಪರ್ಕ ಆಗಿಲ್ಲ. ಕರೆಂಟ್ ಲೈನ್ ಗಾಗಿ ಅಲ್ಲಿ ಇಲ್ಲಿ ಅಲೆದಾಡಿದ್ದು ಮಾತ್ರ ಆಯ್ತಲ್ಲದೆ ವಿದ್ಯುತ್ ಸಿಗಲಿಲ್ಲ. ಆದರೆ ವಿದ್ಯುತ್ ಮೀಟರ್ ಬಂದಿದೆ. ಇದಕ್ಕಾಗಿ 1200 ರೂ ಗಳನ್ನು ಹದಿನೈದು ವರ್ಷಗಳ ಹಿಂದೆಯೇ ಪಾವತಿ ಮಾಡಿದ್ದಾರೆ.
ವಿದ್ಯುತ್ ಲೈನ್ ಎಳೆಯಲು ಸ್ಥಳೀಯರು ಆಕ್ಷೇಪ
ಕುಶಾಲಪ್ಪ ಗೌಡ ಅವರ 75 ಸೆನ್ಸ್ ರೆಕಾರ್ಡ್ ಜಾಗದ ಸುತ್ತ ಲಿಂಗಪ್ಪ ರೈ ಮತ್ತು ವಿಶ್ವನಾಥ ರೈ ಅವರ ತೋಟದಿಂದ ಸುತ್ತುವರೆದಿದೆ. ಇವರಿಬ್ಬರ ತೋಟದವರೆಗೂ ವಿದ್ಯುತ್ ಕಂಬ ಇದ್ದು ಅಲ್ಲಿಂದ ಕುಶಾಲಪ್ಪ ಅವರ ಮನೆಗೆ 4 ವಿದ್ಯುತ್ ಕಂಬಗಳ ಅವಶ್ಯಕತೆ ಇದೆ. ತಮ್ಮ ತೋಟದ ಮೂಲಕ ವಿದ್ಯುತ್ ಲೈನ್ ಕೊಡುವುದಿಲ್ಲ ಎಂದು ವಿಶ್ವನಾಥ್ ರೈ ಮತ್ತು ಲಿಂಗಪ್ಪ ರೈ ಹೇಳುತ್ತಿದ್ದಾರೆ.
ರಾತ್ರಿ ಹೊತ್ತಲ್ಲಿ ಚಿಮಿಣಿ ದೀಪದ ಮುಂದೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಸೊಸೈಟಿಗಳಲ್ಲಿ ಸೀಮೆಎಣ್ಣೆ ಕೂಡ ಸಿಗದೇ ಇರುವ ಕಾರಣ ಡೀಸೆಲ್ ಉಪಯೋಗಿಸಿ ಚಿಮಿಣಿ ದೀಪವನ್ನು ಸುತ್ತಿದ್ದೇವೆ. ದೀಪದಿಂದ ಬರುವ ಹೊಗೆ ನಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ದೀಪದ ಮುಂದೆ ಬಗ್ಗೆ ಕುಳಿತು ಓದುವುದು ತುಂಬಾ ಕಷ್ಟವಾಗುತ್ತದೆ. ನಮ್ಮದು ಆದರ್ಶ ಗ್ರಾಮ ಅಂತೆ. ನಮ್ಮ ಸುತ್ತಮುತ್ತಲಿನಲ್ಲಿ ಎಲ್ಲ ಮನೆಗಳಲ್ಲಿ ವಿದ್ಯುತ್ ಸೌಕರ್ಯವಿದೆ. ಆದರೆ ನಮ್ಮ ಮನೇಲಿ ಮಾತ್ರ ವಿದ್ಯುತ್ ಸೌಕರ್ಯವಿಲ್ಲ ಎಂಬುದು ತುಂಬಾ ಬೇಸರವಾಗುತ್ತದೆ. ಲಾಕ್ ಡೌನ್ ಸಂದರ್ಭದಲ್ಲಂತೂ ನಮ್ಮ ಪರಿಸ್ಥಿತಿ ಹೇಳತೀರದು. ಆನ್ಲೈನ್ ಕ್ಲಾಸ್ ಗಳಿಗಾಗಿ ಮೊಬೈಲನ್ನು ಬೇರೆ ಬೇರೆ ಮನೆಗಳಲ್ಲಿ ಚಾರ್ಜ್ ಇಡುತ್ತಿದ್ದೆ. ಅಥವಾ ಅಪ್ಪ ಕೆಲಸಕ್ಕೆ ಹೋಗುವಾಗ ಅಲ್ಲಿ ಚಾರ್ಜ್ ಮಾಡಿ ಬರುತ್ತಾರೆ. ಇದೇ ವರ್ಷ ಜೂನ್ ನಲ್ಲಿ ಪಬ್ಲಿಕ್ ಪರೀಕ್ಷೆ ಇದ್ದು ಇದರಲ್ಲಿ ಉತ್ತಮ ಅಂಕ ಪಡೆದು ಕೊಳ್ಳಬೇಕೆಂಬ ಹಠ ಇದೆ . ಇದಕ್ಕೆ ವಿದ್ಯುತ್ ತುಂಬಾ ಅವಶ್ಯಕತೆ ಹಾಗಾಗಿ ಅಧಿಕಾರಿಗಳು ಆದಷ್ಟು ಬೇಗ ನಮಗೆ ಸಮಸ್ಯೆಗೆ ಪರಿಹಾರ ನೀಡಿ ಎಂದು ಕುಶಾಲಪ್ಪ ಗೌಡರ ಮಕ್ಕಳಾದ ನಿತೀಶ್ ಮತ್ತು ಮೋಕ್ಷಿತ ಹೇಳುತ್ತಾರೆ