
ರಾಜ್ಯದ ಅತಿವೃಷ್ಟಿ- ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಮಲೆನಾಡು ಪ್ರದೇಶವಾದ ಸುಳ್ಯ ತಾಲೂಕನ್ನು ಕೈಬಿಟ್ಟಿರುವ ಇಲಾಖೆಯ ಅಧಿಕಾರಿಗಳ ನಡೆಯನ್ನ ಮಲೆನಾಡು ಹಿತರಕ್ಷಣಾ ವೇದಿಕೆ ಖಂಡಿಸಿದ್ದು, ಈ ಬಗ್ಗೆ ಸರಕಾರ ಗಮನವಹಿಸದಿದ್ದಲ್ಲಿ ತಾಲೂಕು ಕೇಂದ್ರದ ಎದುರು ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದೆ. ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಸೆ.18 ರಂದು ಜರಗಿದ ವೇದಿಕೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ತಾಲೂಕನ್ನು ಅನೇಕ ಬಾರಿ ಈ ರೀತಿ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲೆಯಲ್ಲಿ ಅಧಿಕ ಮಳೆ ಹಾನಿ ಪೀಡಿತ ಪ್ರದೇಶವಾಗಿ ಸುಳ್ಯವು ರೂಪುಗೊಂಡಿದೆ. ಈ ಬಗ್ಗೆ ಸರಕಾರ ಗಮನಹರಿಸಿ ಅತಿವೃಷ್ಟಿ ಪೀಡಿತ ಪ್ರದೇಶವಾಗಿ ಸೇರ್ಪಡೆ ಗೊಳಿಸಬೇಕು. ಈ ಕುರಿತು ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ವೇದಿಕೆ ಸಭೆ ನಿರ್ಣಯಿಸಿದೆ.
ಉಳಿದಂತೆ ಸಂಘಟನೆಯ ರೂಪುರೇಷೆ, ಸಹಕಾರಿ ಕ್ಷ ತ್ರದಲ್ಲಿ ಆಯ್ಕೆಯಾಗಿರುವ ವೇದಿಕೆಯ ಕಾರ್ಯಕರ್ತರಿಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ತರಬೇತಿ ಮತ್ತಿತರ ವಿಚಾರಗಳನ್ನ ಚರ್ಚಿಸಲಾಯಿತು.
ಸಭೆಯಲ್ಲಿ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಸದಸ್ಯರುಗಳಾದ ಜಯಪ್ರಕಾಶ್ ಕೂಜುಗೋಡು, ರವೀಂದ್ರ ರುದ್ರಪ್ಪಾದ, ಪ್ರದೀಪ್ ಕುಮಾರ್ ಕರಿಕೆ, ಅಭಿಲಾಷ್ ದುಗ್ಗಲಡ್ಕ, ಲಿಖಿನ್ ಪೆರುಮುಂಡ, ಭರತ್ ಕನ್ನಡ್ಕ, ಭಾನುಪ್ರಕಾಶ್ ಪೆರುಮುಂಡ, ಅಭಿಷೇಕ್, ಅಚ್ಚುತ ಗೌಡ, ಟಿ.ಎನ್. ಸತೀಶ್ ಕಲ್ಮಕಾರು, ಚಂದ್ರಶೇಖರ ಕೊಲ್ಲಮೊಗ್ರು, ಬಸಪ್ಪ ಕೊಲ್ಲಮೊಗ್ರು, ಶೇಖರಪ್ಪ ಬೆಂಡೋಡಿ, ಉಮೇಶ್ ಕಜ್ಜೋಡಿ ಉಪಸ್ಥಿತರಿದ್ದರು.