“ಸಮಾಜದ ಏಳಿಗೆಗೆ ತನ್ನನ್ನು ತಾನೇ ಸಮರ್ಪಿಸಿಕೊಂಡು , ತನ್ನ ವ್ಯವಹಾರದ ಒತ್ತಡದ ನಡುವೆಯೂ ಸಮಾಜಕ್ಕಾಗಿ ಮಿಡಿತ-ತುಡಿತಗಳನ್ನು ಕೇಂದ್ರೀಕರಿಸಿದ ವ್ಯಕ್ತಿತ್ವ ಶ್ರೀ ಪ್ರೇಮನಾಥ ರೈಯವರದ್ದು. ನಿಷ್ಕಲ್ಮಶ ಮನಸ್ಸಿನ, ನಿಷ್ಕಂಳಕ ನಡತೆಯ, ಓರ್ವ ಪ್ರಾಮಾಣಿಕ, ಸಜ್ಜನ ವ್ಯಕ್ತಿಯ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪಾದರಸವನ್ನು ಮೀರಿ ನಿಂತ ಅವರ ಕ್ರಿಯಾಶೀಲತೆಗೆ ಮನಸೋಲದವರು ವಿರಳ”. ಎಂದು ಬೆಳಂದೂರು ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ನೆಟ್ಟಾರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಭಾವೈಕ್ಯ ಯುವಕ ಮಂಡಲ (ರಿ.) ಪೆರುವಾಜೆ ಇದರ ವತಿಯಿಂದ ಆಯೋಜಿಸಿದ್ದ ಯುವಕ ಮಂಡಲದ ಗೌರವಾಧ್ಯಕ್ಷರಾದ ಪ್ರೇಮನಾಥ ರೈಯವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಯುವಕ ಮಂಡಲದ ಕಾರ್ಯದರ್ಶಿ ರಜನೀಶ್ ಪಿ. ಯುವಕ ಮಂಡಲದ ಶ್ರೇಯೋಭಿವೃದ್ಧಿಗೆ ಪ್ರೇಮನಾಥ ರೈಯವರ ಸಲ್ಲಿಸಿದ ಕೊಡುಗೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಜಲದುರ್ಗಾದೇವಿ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರಾದ ವೆಂಕಟಕೃಷ್ಣ ರಾವ್, ನಂದಿ ಅಸೋಸಿಯೇಟ್ಸ್ ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಶ್ರೀ ಲಕ್ಷ್ಮೀನಾರಾಯಣ ಐವರ್ನಾಡು, ಭಕ್ತ ವೃಂದ ಪೆರುವಾಜೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ, ಪೆರುವಾಜೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ಗಣೇಶ ಅರ್ನಾಡಿ, ಯುವಕ ಮಂಡಲದ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ಹಾಗೂ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ವಾಸುದೇವ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು.