ಬದಲಾದ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿ, ಸ್ವಾಭಿಮಾನಿ, ಸ್ವ ಸಾಮರ್ಥ್ಯದಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇದೇ ಸೆ.20ರಿಂದ 26 ರವರೆಗೆ ಒಂದು ವಾರಗಳ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುತ್ತಿಗಾರು ಪ್ರಾ.ಕೃ.ಪ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಹೇಳಿದರು.
ಅವರು ಗುತ್ತಿಗಾರು ಪ್ರಾ.ಕೃ.ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನುರಿತ ತರಬೇತುದಾರರಿಂದ ಕೃಷಿ ಯಂತ್ರೋಪಕರಣಗಳ ದುರಸ್ತಿ, ವಿದ್ಯುತ್ ಉಪಕರಣಗಳ ದುರಸ್ತಿ, ಹೈನುಗಾರಿಕೆ, ಜೇನು ಕೃಷಿ, ಪ್ಯಾಷನ್ ಡಿಸೈನಿಂಗ್, ಕಸಿ ಕಟ್ಟುವಿಕೆ, ಫುಡ್ ಟೆಕ್ನಾಲಜಿ, ಪ್ಲಂಬಿಂಗ್ ಮುಂತಾದ ವಿಷಯದಲ್ಲಿ ತರಬೇತಿ ನೀಡಲಾಗುತ್ತದೆ. ಪ್ರತೀ ತರಬೇತಿಗೂ 30 ಜನರಿಗೆ ಭಾಗವಹಿಸಲು ಅವಕಾಶವಿದೆ. ತರಬೇತಿ ಪಡೆದ ಪ್ರತಿಯೊಬ್ಬರಿಗೂ ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು’ ಎಂದರು. ಕಾರ್ಯಕ್ರಮವನ್ನು ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಉದ್ಘಾಟಿಸಲಿದ್ದು, ಗುತ್ತಿಗಾರು, ನಾಲ್ಕೂರು, ದೇವಚಳ್ಳ, ನೆಲ್ಲೂರು ಕೇಮ್ರಾಜೆ, ಮಡಪ್ಪಾಡಿ, ಮರ್ಕಂಜ ಗ್ರಾಮಗಳ ಗ್ರಾಮಸ್ಥರಿಗೆ ಭಾಗವಹಿಸಲು ಅವಕಾಶವಿದೆ. ಕಾರ್ಯಕ್ರಮ ವಳಲಂಬೆಯ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಗ್ರಾಮವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು(ರಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇವುಗಳ ಸಹಭಾಗಿತ್ವದಲ್ಲಿ ತರಬೇತಿ ನಡೆಯಲಿದ್ದು, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾರ್ಯಕ್ರಮ ಸಂಯೋಜನೆ ಮಾಡಲಿದೆ.
ಗೋಷ್ಠಿಯಲ್ಲಿ ಗುತ್ತಿಗಾರು ಪ್ರಾ, ಕೃ, ಸಂಘದ ನಿರ್ದೇಶಕ ಬಿ.ಕೆ ಬೆಳ್ಯಪ್ಪ, ನೈಪುಣ್ಯ ತರಬೇತಿ ಸಂಯೋಜಕರಾದ ಕಿಶೋರ್ ಕುಮಾರ್ ಪೈಕ, ಸಹ ಸಂಯೋಜಕ ಮುಕೇಶ್ ಪಡ್ಪು ಉಪಸ್ಥಿತರಿದ್ದರು.
- Friday
- November 22nd, 2024