ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಚರಂಡಿಯ ಕಾಮಗಾರಿ ನಡೆಯುತ್ತಿದೆ.ಈ ಪರಿಸರದಲ್ಲಿ ದಿನ ನಿತ್ಯ ನೂರಾರು ಸಾರ್ವಜನಿಕರು ವಿವಿಧ ಕೆಲಸ ಕಾರ್ಯದ ನಿಮಿತ್ತ ಬರುತ್ತಿದ್ದು, ವಿವಿಧ ಸಭೆ ಸಮಾರಂಭಗಳು ನಡೆಯುವ ಲಯನ್ಸ್ ಸಭಾ ಭವನ ಇರುದರಿಂದ ವಾಹನ ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ವಾಹನ ಪಾರ್ಕಿಂಗ್‌ಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯ ಅಂಗಡಿ ಮಾಲಕರು ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈಶ ಎಲೆಕ್ಟ್ರಿಕಲ್ ಸಂಸ್ಥೆಯ ಮಾಲಕ ರಾಜೇಶ್ ಶೆಟ್ಟಿ ಮೇನಾಲರವರ ನೇತೃತ್ವದಲ್ಲಿ ಈ ಮನವಿಯನ್ನು ಮಾಡಲಾಗಿದ್ದು ಆ ರಸ್ತೆಯಲ್ಲಿರುವ ಅಂಗಡಿ ಮಾಲಕ, ಸಂಘ ಸಂಸ್ಥೆಗಳ ಮುಖ್ಯಸ್ಥರ ಸಹಿ ಸಂಗ್ರಹ ಮಾಡಿ ಚರಂಡಿ ನಿರ್ಮಾಣದೊಂದಿಗೆ ವಾಹನ ನಿಲುಗಡೆ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಚರಂಡಿಯ ಎತ್ತರವನ್ನು ತಗ್ಗಿಸಿ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಸುಳ್ಯ ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲದೆ ಖಾಸಗಿ ಹಾಗೂ ಸರಕಾರಿ ವಾಹನಗಳ ನಿಲುಗಡೆಗೆ ಸ್ಥಳದ ಕೊರತೆಯೇ ದೊಡ್ಡ ಸಮಸ್ಯೆಯಾಗಿರುತ್ತದೆ. ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಮಹಿಳಾ ಸಮಾಜದ ಮುಂಭಾಗದಲ್ಲಿ ರಸ್ತೆ ಅಗಲವಾಗಿದ್ದು ವಾಹನ ಪಾರ್ಕಿಂಗ್ ಮಾಡಲು ಅನುಕೂಲಕರ ವ್ಯವಸ್ಥೆ ಇದ್ದು, ಇಲ್ಲಿ ಜೇನು ಸೊಸೈಟಿ, ಲ್ಯಾಂಪ್ ಸೊಸೈಟಿ ಮತ್ತು ಲಯನ್ಸ್ ಕ್ಲಬ್ ಸಭಾಭವನದ ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆ, ಸಾರ್ವಜನಿಕರಿಗೆ ಮೀನು ಮಾರುಕಟ್ಟೆ ಗ್ರಾಹಕರಿಗೆ ಈ ಪ್ರದೇಶದಲ್ಲಿ ವಾಹನ ನಿಲುಗಡೆ ಬಳಕೆಗೆ ತುಂಬಾ ಅನುಕೂಲವಾಗಿದೆ.
ಆದರೆ ಇದೀಗ ನಗರ ಪಂಚಾಯತ್ ವತಿಯಿಂದ ಈ ರಸ್ತೆ ಬದಿಯ ಚರಂಡಿಯನ್ನು ರಸ್ತೆ ಲೆವೆಲ್‌ಗಿಂತ ಎತ್ತರಿಸುವ ದುರಸ್ಥಿ ಕಾಮಗಾರಿ ನಡೆಯುತ್ತಿದ್ದು ಇದರಿಂದ ಈ ಪ್ರದೇಶದಲ್ಲಿ ವಾಹನ ಪಾರ್ಕಿಂಗ್‌ಗೆ ತುಂಬಾ ಅಡಚಣೆಯಾಗಿರತ್ತದೆ. ಆದ್ದರಿಂದ ಸಾರ್ವಜನಿಕ ವಾಹನಗಳ ಪಾರ್ಕಿಂಗ್ ಸೌಲಭ್ಯದ ದೃಷ್ಠಿಯಿಂದ ಚರಂಡಿ ಎತ್ತರಿಸುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಈ ಹಿಂದಿನಂತೆಯೇ ವಾಹನ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಮನವಿಯ ಪ್ರತಿಯನ್ನು ಸಂಸದರು, ಶಾಸಕರು, ಸಹಾಯಕ ಕಮಿಷನರ್‌ರಿಗೆ ಕಳುಹಿಸಿರುವುದಾಗಿ ರಾಜೇಶ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ . ಈ ವಿಷಯದ ಕುರಿತು ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿ ಮತ್ತಡಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಕಾಮಗಾರಿಯ ಕೆಲಸಗಳು ಈಗಾಗಲೇ ಪೂರ್ಣಗೊಳ್ಳುತ್ತಿದ್ದು ಯಾವುದೇ ರೀತಿಯ ಅವೈಜ್ಞಾನಿಕವಾಗಿ ನಡೆದು ಬಂದಿರುವುದಿಲ್ಲ. ಸ್ಥಳೀಯ ವ್ಯಾಪಾರ ಕೇಂದ್ರಗಳಿಗೆ ಪಾರ್ಕಿಂಗ್ ಗಳ ಅವಶ್ಯಕತೆ ಇದ್ದಲ್ಲಿ ಅವರವರ ಸಂಸ್ಥೆಯ ಮುಂಭಾಗದಲ್ಲಿ ಅವರೇ ಅದನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಅದಲ್ಲದೆ ಈಗಾಗಲೇ ಮಂಜೂರು ಗೊಂಡಿರುವ ಈ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಪತ್ರಿಕೆಗೆ ಹೇಳಿಕೆಯನ್ನು ನೀಡಿರುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೂರುದಾರರಾದ ರಾಜೇಶ್ ಶೆಟ್ಟಿ ಮೇನಾಲ ವ್ಯಾಪಾರ ಕೇಂದ್ರಗಳು ರಸ್ತೆಯವರೆಗೆ ನಿರ್ಮಾಣಗೊಳ್ಳಬೇಕಾದರೆ ಇದೇ ನಗರಪಂಚಾಯತ್ ನವರು ಕಟ್ಟಡಗಳನ್ನು ಕಟ್ಟುವ ಸಂದರ್ಭದಲ್ಲಿ ತಡೆಯಬೇಕಾಗಿತ್ತು. ಇದೀಗ ಸಾರ್ವಜನಿಕರ ಸ್ಪಂದನೆಗೆ ಸ್ಪಂದಿಸದೆ ನಗರದ ಅಭಿವೃದ್ಧಿಯ ಬಗ್ಗೆ ಚಿಂತಿಸದೆ ಕಾಮಗಾರಿಯನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವುದು ಸರಿಯಾದ ರೀತಿಯಲ್ಲಿ ಎಂದು ಹೇಳಿದ್ದಾರೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿದ್ದು ಬೇಕಾದಲ್ಲಿ ಪ್ರತಿಭಟನೆ ನಡೆಸಲು ಸಿದ್ಧರಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಅಭಿವೃದ್ಧಿ ಯೋಜನೆ ಯೊಂದಿಗೆ ಸಾರ್ವಜನಿಕರ ಮತ್ತು ವ್ಯಾಪಾರೋದ್ಯಮ ಕೇಂದ್ರಗಳ ಸೌಕರ್ಯಗಳನ್ನು ಗಣನೆಗೆ ತೆಗೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
- Friday
- November 22nd, 2024