ಪಂಜ ಪಶುವೈದ್ಯ ಡಾ.ದೇವಿಪ್ರಸಾದ್ ಕಾನತ್ತೂರ್ ರವರನ್ನು ಸೇವೆಯಿಂದ ಅಮಾನತುಗೊಳಿಸಿ ಪಶು ಸಂಗೋಪನಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿರುವ ಘಟನೆ ಸೆಪ್ಟೆಂಬರ್ 10ರಂದು ಪಂಜದಿಂದ ವರದಿಯಾಗಿದೆ.
ದೇವಿಪ್ರಸಾದ್ ಕಾನತ್ತೂರ್ ರವರು 2017 ರಲ್ಲಿ ಕೇನ್ಯ ಕಾಯಂಬಾಡಿಯ ಮಹಿಳೆಯೊಬ್ಬರಿಗೆ ಜಾನುವಾರು ಸಾಗಾಟಕ್ಕೆ ಜಾನುವಾರು ಆರೋಗ್ಯ ದೃಢಪತ್ರದ ದಿನಾಂಕವನ್ನು ತಿದ್ದಿ 14.3.2020 ರಂದು ತನಗೆ ಅಧಿಕಾರವಿಲ್ಲದೆಯೂ ಸರ್ಟಿಫಿಕೇಟ್ ನೀಡಿದ್ದಾರೆಂದು ಪಶುವೈದ್ಯ ಸಂಘದಿಂದ ಸುಳ್ಳು ದೂರು ನೀಡಿ ನನ್ನ ಮೇಲೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಡಾ. ದೇವಿಪ್ರಸಾದ್ ಅಮರ ಸುಳ್ಯ ಸುದ್ದಿ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಇದರ ವಿರುದ್ಧ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇನೆ. ಸುಮಾರು 35 ವರ್ಷಗಳಿಂದ ನಾನು ನಿರಂತರವಾಗಿ ಪ್ರಾಮಾಣಿಕತೆಯಿಂದ ನನ್ನ ಸೇವೆಯನ್ನು ಮಾಡುತ್ತಿದ್ದು , ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ನನ್ನನ್ನು ತೊಡಗಿಸಿಕೊಂಡು ಸದಾ ಸಮಾಜದ ಹಿತಕ್ಕಾಗಿ ದುಡಿದಿದ್ದೇನೆ. ನನ್ನ ಈ ಸೇವೆಯನ್ನು ಸಹಿಸದ ಕೆಲವರು ನನ್ನ ಮೇಲೆ ಈ ರೀತಿಯ ಅಪವಾದಗಳನ್ನು ಮಾಡಿ ನನ್ನ ಮತ್ತು ನನ್ನ ವ್ಯಕ್ತಿತ್ವದ ತೇಜೋವಧೆಯನ್ನು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಇದರೊಂದಿಗೆ ಆಯುಕ್ತರು ಕೂಡ ಈ ವಿಷಯದ ಕುರಿತು ಯಾವುದೇ ವಿಚಾರಣೆ ಮಾಡದೇ ಅಮಾನತು ಮಾಡಿರುವುದು ತುಂಬಾ ನೋವಿನ ಸಂಗಾತಿ ಎಂದು ಹೇಳಿದ್ದಾರೆ. ಕನಿಷ್ಟ ಪಕ್ಷ ಮೂರು ದಶಕಗಳ ತನ್ನ ಸೇವೆಯನ್ನಾದರೂ ಪರಿಗಣಿಸಿ ವಿಚಾರಣೆಯನ್ನು ಮಾಡಬೇಕಾಗಿತ್ತು ಎಂದು ಅವರು ನೋವನ್ನು ಹಂಚಿಕೊಂಡಿದ್ದಾರೆ. ಪ್ರಕರಣ ಇದೀಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿಗೆ ತಲುಪಿದ್ದು , ಸಚಿವರು ಪಶುಸಂಗೋಪನಾ ಇಲಾಖೆಯ ಆಯುಕ್ತರನ್ನು ಸಂಪರ್ಕಿಸಿ ವಿವರಣೆ ಕೇಳಿದ್ದಾರೆಂದು ಗೊತ್ತಾಗಿದೆ . ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹಿಂತೆಗೆಯಲ್ಪಡುವ ಸಾಧ್ಯತೆಯಿದೆ ಎಂದೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಡಾ.ದೇವಿಪ್ರಸಾದರು ಪಶು ಅಭಿವೃದ್ಧಿ ಅಧಿಕಾರಿಯಾಗಿರುವಂತೆಯೇ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿಯೂ , ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಜಾನುವಾರು ಸಾಗಾಟಕ್ಕೆ ಪರವಾನಿಗೆಯನ್ನು ಪಡೆದಿದ್ದಾರೆ ಎನ್ನಲಾದ ಮನೆಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಡಾ. ದೇವಿಪ್ರಸಾದ್ ರವರು ಒಳ್ಳೆಯವರು, ಅವರಿಂದ ಯಾವುದೇ ತಪ್ಪು ನಡೆದಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.