ಚಂದ್ರಶೇಖರ ಪೇರಾಲು ರವರಿಗೆ “ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡುವ ಈ ಬಾರಿಯ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”ಯು 119 ವ್ಯಕ್ತಿಗಳಿಗೆ ಹಾಗೂ 54 ಸಂಘ-ಸಂಸ್ಥೆಗಳಿಗೆ ಲಭಿಸಿದ್ದು, ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಚಂದ್ರಶೇಖರ ಪೇರಾಲು ರವರಿಗೆ ಈ ಬಾರಿಯ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ದೊರಕಿದೆ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೇರಾಲು ರಾಮಣ್ಣ ಗೌಡ ಹಾಗೂ ಶ್ರೀಮತಿ ಚಿನ್ನಮ್ಮ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೇರಾಲಿನಲ್ಲಿ ಪಡೆದು ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಸುಳ್ಯದಲ್ಲಿ ಪೂರೈಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಇವರು ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ಪದವಿಯನ್ನು ಪೂರೈಸಿ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 1999ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆ.ಇ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಪ್ರೊಬೇಷನರಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ನಂತರ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಯಾಗಿ, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಸುಳ್ಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಸುಳ್ಯ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾಗಿ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಭಾರ ಸಹಾಯಕ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಸರ್ಕಾರಿ ಸೇವೆಯಿಂದ ನಿವೃತ್ತರಾದರು. ನಂತರ 2021ರಿಂದ ಪ್ರಸ್ತುತ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಹಾಗೂ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಮಾಜಿಕವಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ರಾಜ್ಯ ಮಟ್ಟದ ಜೇಸಿ ತರಬೇತುದಾರರಾಗಿ 400ಕ್ಕೂ ಅಧಿಕ ತರಬೇತಿಗಳ ಆಯೋಜನೆ, ರಾಜ್ಯ ವಿಜ್ಞಾನ ಸಮಿತಿಯ ವತಿಯಿಂದ ಅದರ ಸಂಚಾಲಕರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 93 ಕಡೆಗಳಲ್ಲಿ ಚಿಣ್ಣರ ಮೇಳ ಕಾರ್ಯಕ್ರಮದ ಆಯೋಜನೆ, ನೆಲ್ಯಾಡಿ ಜೇಸಿಐ ಮತ್ತು ಸುಳ್ಯದ ಸುವಿಚಾರ ವೇದಿಕೆಯ ಅಧ್ಯಕ್ಷರಾಗಿ ಸೇವೆ ಹಾಗೂ ಕಳೆದ 18 ವರ್ಷಗಳಿಂದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗೌರವ ಕಾರ್ಯದರ್ಶಿಯಾಗಿ ಹಾಗೂ ಸದಸ್ಯರಾಗಿ ನಿರಂತರ ಸೇವೆ, 2021-22ರಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾಗಿ, 2022ರಲ್ಲಿ ಸುಳ್ಯದ ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸೇವಾ ಸಂಘದ ಅಧ್ಯಕ್ಷರಾಗಿ, 2001ರಿಂದ ಗಾಂಧಿ ಚಿಂತನಾ ವೇದಿಕೆಯ ಸಂಚಾಲಕರಾಗಿ ಹಾಗೂ ಸುಳ್ಯದ ಅಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷರಾಗಿ ಇವರು ಸೇವೆಯನ್ನು ಸಲ್ಲಿಸಿದ್ದಾರೆ. 2016 ರಿಂದ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು “ನಮ್ಮ ನಡೆ ವಿದ್ಯಾರ್ಥಿಗಳೆಡೆ” ಎಂಬ ಘೋಷಣೆಯೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಆಯೋಜಿಸಿ ಪ್ರತೀವರ್ಷ 5 ರಿಂದ 6 ಸಾವಿರ ವಿದ್ಯಾರ್ಥಿಗಳನ್ನು ತಲುಪಿರುವುದು, ಅದೇ ರೀತಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.100 ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಮೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ, ಗೌರವ ಕಾರ್ಯದರ್ಶಿಯಾಗಿ ಐದು ಸಾಹಿತ್ಯ ಸಮ್ಮೇಳನ ಹಾಗೂ ಅಧ್ಯಕ್ಷರಾಗಿ ಮೂರು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿರುವ ಇವರು ಎರಡು ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಒಂದು ಹೋಬಳಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ್ದಾರೆ. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಭಕ್ತಿಗೀತೆ ಗಾಯನ ಆಗಿನ ಸಚಿವರಾದ ಸುನೀಲ್ ಕುಮಾರ್ ಅವರಿಂದ ಉದ್ಘಾಟನೆ, ಮಳೆ ಹಾಡುಗಳ ಕಲರವ ಅಭಿಯಾನ, 12 ಶಾಲೆಗಳಲ್ಲಿ ಪರಿಸರ ಜಾಗೃತಿ ಅಭಿಯಾನ ಹಾಗೂ ಖ್ಯಾತ ಪರಿಸರವಾದಿಗಳಿಂದ ಉಪನ್ಯಾಸ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯ ಕಾರ್ಯಕ್ರಮ ಹಾಗೂ ತಾಲೂಕಿನ 115 ಶಾಲೆಗಳಿಗೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ವಿತರಣೆ, ಅಗಲಿದ ಸಾಹಿತಿಗಳಿಗೆ ನುಡಿ ನಮನ, ಶಿಕ್ಷಕರ ದಿನಾಚರಣೆಯಂದು ಶಿಕ್ಷಕ ಸಾಹಿತಿಗಳಿಗೆ ಸನ್ಮಾನ, ತಾಲೂಕು ಮಟ್ಟದ ಹಸ್ತಪ್ರತಿ ಮತ್ತು ಅಕ್ಷರ ಕೈತೋಟ ಸ್ಪರ್ಧೆ ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿರುವ ಪೇರಾಲುರವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸಿದ್ದು, ಇವರ ಪರಿಕಲ್ಪನೆಯಲ್ಲಿ 6 ಗಡಿನಾಡ ಅರೆಭಾಷೆ ಉತ್ಸವಗಳು, ಶಾಲಾ-ಕಾಲೇಜುಗಳಲ್ಲಿ ಅರೆಭಾಷೆ ಸಂಘ ಸ್ಥಾಪನೆ ಹಾಗೂ ಕಾರ್ಯಕ್ರಮ ಆಯೋಜನೆ, ಐನ್‌ಮನೆ ಅಧ್ಯಯನ ಪ್ರವಾಸ ಆಯೋಜನೆ, ಜಾತಿ ಗಣತಿ ಆಂದೋಲನ ಆರಂಭ, ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜನೆ, ಪಂಜದಲ್ಲಿ ಬೃಹತ್ ಆಟಿ ಉತ್ಸವ ಆಯೋಜನೆ, ಅರೆಭಾಷೆ ಸಾಹಿತ್ಯ ಅಕಾಡೆಮಿಯ ಹಿಂಗಾರ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ 09 ಪತ್ರಿಕೆಗಳ ಬಿಡುಗಡೆ, ಅರೆಭಾಷೆ ಅಕಾಡೆಮಿಯ ಪುಸ್ತಕ ಸಮಿತಿಯ ಸದಸ್ಯರಾಗಿ 12 ಸಂಶೋಧನಾ ಗ್ರಂಥ ಹಾಗೂ 20ಕ್ಕೂ ಅಧಿಕ ಪುಸ್ತಕಗಳ ಪ್ರಕಟಣೆ, ಅಕಾಡೆಮಿ ವತಿಯಿಂದ ನಡೆಸಿದ ಲೋಕೇಶ್ ಊರುಬೈಲು ನಿರ್ದೇಶನದ ಅಪ್ಪ ಅರೆಭಾಷೆ ನಾಟಕದ 11 ಕಡೆ ಪ್ರದರ್ಶನದ ಸಂಚಾಲಕರಾಗಿ ಹಾಗೂ ನಟರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ರೋಟರಿ ಕ್ಲಬ್ ನಲ್ಲಿ ಸೇವೆ ಸಲ್ಲಿಸಿರುವ ಇವರು ಅಂಗವಿಕಲ ವ್ಯಕ್ತಿಗೆ ಗೃಹ ನಿರ್ಮಾಣ, 50 ಶಾಲಾ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ, ಗಾನಕುಂಚ ಕಾರ್ಯಕ್ರಮ, ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಮಾಡಿದ್ದು, ಗಾಂಧಿ ಚಿಂತನಾ ವೇದಿಕೆಯ ಸಂಚಾಲಕರಾಗಿ ಪ್ರತೀ ವರ್ಷ ಗಾಂಧಿ ನಡಿಗೆ ಆಯೋಜನೆ, ಗಾಂಧಿ ಸ್ಮೃತಿ ಕಾರ್ಯಕ್ರಮ ಹಾಗೂ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಸಂಘಟಿಸಿರುವ ಪೇರಾಲುರವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸಮನ್ವಯ ಅಧಿಕಾರಿ ಪ್ರಶಸ್ತಿ, ಮಲೆನಾಡಸಿರಿ ಶಿಕ್ಷಕ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಯೆನೆಪೋಯ ಶಿಕ್ಷಕ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಡಾ. ಕಯ್ಯಾರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ 2026, ಸುಳ್ಯ ತಾಲೂಕು ಸಾರ್ವಜನಿಕ ಸನ್ಮಾನ 2022, ಜಿ.ಎಲ್ ಆಚಾರ್ಯ ಪುರಸ್ಕಾರ 2026, ಸಾರ್ವಜನಿಕ ಸಂಘಸಂಸ್ಥೆಗಳ ಅಭಿನಂದನೆ 2026, ಸಾರ್ವಜನಿಕ ಸಂಘಸಂಸ್ಥೆಗಳಿಂದ ಅಭಿನಂದನೆ 2026, ಚಂದನ ಸಾಹಿತ್ಯ ಪ್ರಶಸ್ತಿ, ರೋಟರಿ ಶಿಕ್ಷಕ ಪ್ರಶಸ್ತಿ, ಜೇಸಿಐ ಸುಳ್ಯ ಇವರಿಂದ ಸನ್ಮಾನ, ಸಿಸಿಆರ್‌ಟಿ ಬಳಗದಿಂದ ಸನ್ಮಾನ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಸಂಘದಿಂದ ಸನ್ಮಾನ ಹಾಗೂ ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ವತಿಯಿಂದ ಗೌರವ ಸನ್ಮಾನ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇದೀಗ ಇವರ ಈ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು, ನ.01 ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading