ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃವೃತ್ತಿಯಲ್ಲಿ ಅತಿ ಪವಿತ್ರವಾದ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ.ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವಪೂರ್ಣವಾಗಿದೆ. ಹಿಂದೆ ಗುರು ಮುಂದೆ ಗುರಿ ಎಂಬ ಮಾತಿನಂತೆ ಒಬ್ಬ ವ್ಯಕ್ತಿ ತನ್ನ ಗುರಿಯನ್ನು ತಲುಪಲು ಆತನ ಪರಿಶ್ರಮ ಎಷ್ಟು ಮುಖ್ಯವೋ ಗುರುವಿನ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಅಷ್ಟೇ ಮುಖ್ಯ.ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ತನ್ನ ಎಲ್ಲಾ ಜ್ಞಾನವನ್ನು ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಕಲಿಸಿ ಕೊಡುವಂತಹ ಶಿಕ್ಷಕರಿಗೆ ಗೌರವ ಪೂರ್ಣವಾಗಿ ಅಭಿನಂದನೆ ಸಲ್ಲಿಸುವ ಸಲುವಾಗಿ ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಯಾಕೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕು?ಎಲ್ಲರಿಗೂ ತಾಯಿಯೇ ಮೊದಲ ಗುರು. ಆದರೆ ನಮ್ಮ ಜೀವನದ ಪಯಣದಲ್ಲಿ ಹಲವಾರು ಶಿಕ್ಷಕರು ನಮ್ಮನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿಸುತ್ತಾರೆ. ನಾವುಗಳು ತಾಯಿಯ ಋಣ ಹೇಗೆ ತೀರಿಸಲು ಸಾಧ್ಯವಿಲ್ಲವೋ ಹಾಗೆಯೇ ಗುರುಗಳ ಋಣವನ್ನು ತೀರಿಸಲು ಸಾಧ್ಯವಿಲ್ಲ.ಭಾರತದಾದ್ಯಂತ ಸೆಪ್ಟೆಂಬರ್ 5ರಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸೆಪ್ಟೆಂಬರ್ 5 ಭಾರತದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದಂತಹ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ.ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888 ರಲ್ಲಿ ತಮಿಳುನಾಡಿನ ತಿರುತ್ತಣಿ ಯಲ್ಲಿ ಸರ್ವಪಲ್ಲಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಇವರಿಗೆ ಶಿಕ್ಷಣದ ಬಗ್ಗೆ ಬಾಲ್ಯದಿಂದಲೇ ಅತೀವವಾದ ಪ್ರೀತಿ ಮತ್ತು ಗೌರವವಿತ್ತು. ಅಲ್ಲದೆ ತಾವು ಕೂಡ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತ ಕಂಡ ಕೆಲವು ಶ್ರೇಷ್ಠ ಶಿಕ್ಷಕರಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಕೂಡ ಒಬ್ಬರು.ಇವರು 1918 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು, ಅನಂತರ ಬೇರೆ ಬೇರೆ ಪತ್ರಿಕೆಗಳಲ್ಲಿ ಹಲವು ಲೇಖನಗಳನ್ನು ಬರೆಯುತ್ತಾ ಮುಂದೆ ‘ ದಿ ಫಿಲಾಸಫಿ ಆಫ್ ರವೀಂದ್ರನಾಥ ಠಾಗೋರ್’ ಎಂಬ ಪುಸ್ತಕವನ್ನು ಬರೆದರು.ಮೈಸೂರಿನಲ್ಲಿರುವ ರಸ್ತೆಯೊಂದಕ್ಕೆ ಗೌರವಪೂರ್ಣವಾಗಿ ಇವರ ಹೆಸರನ್ನು ಸಹ ಇಡಲಾಗಿದೆ.ರಾಷ್ಟ್ರದ ಮೊದಲ ಉಪರಾಷ್ಟ್ರಪತಿಯಾಗಿದ್ದ ಇವರಿಗೆ ಭಾರತ ಸರ್ಕಾರವು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾಗಿರುವ “ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದರ ಜೊತೆಗೆ ಹಲವಾರು ಬಿರುದುಗಳು ಸಹ ಇವರನ್ನು ಅರಸಿ ಬಂದಿವೆ.ಸರ್ವಪಲ್ಲಿ ರಾಧಾಕೃಷ್ಣನ್ 1975 ಏಪ್ರಿಲ್ 12 ರಂದು ಇಹಲೋಕ ತ್ಯಜಿಸಿದರು.ಬಂಡೆಯಂತಿರುವ ನಮ್ಮನ್ನು ಕೆತ್ತಿ ಅದ್ಭುತ ಶಿಲೆ ಯನ್ನಾಗಿ ಮಾಡುವ ಗುರುಗಳನ್ನು ಒಂದು ದಿನ ಮಾತ್ರ ಗೌರವಪೂರ್ಣವಾಗಿ ಕಾಣದೆ ಪ್ರತಿದಿನವೂ ಗೌರವಪೂರ್ಣವಾಗಿ ಕಾಣೋಣ . ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಸಂದೀಪ್ .ಎಸ್ . ಮಂಚಿಕಟ್ಟೆ, ದ್ವಿತೀಯ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜ್ ಪುತ್ತೂರು.
- Friday
- November 22nd, 2024