ಸುಳ್ಯ – ಸಂಪಾಜೆ ಫೀಡರ್ ನಲ್ಲಿ ಅಸಮರ್ಪಕ ವಿದ್ಯುತ್ ಕಡಿತ ಸಮಸ್ಯೆ ಪರಿಹರಿಸಲು ಸಾಮಾಜಿಕ ಕಾರ್ಯಕರ್ತ ಅಶ್ರಫ್ ಗುಂಡಿಯವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸುಳ್ಯ ತಾಲೂಕು ಮೀಸಲು ವಿಧಾನ ಸಭಾ ಕ್ಷೇತ್ರವಾಗಿದ್ದು, ಇದೀಗ ಅಭಿವೃದ್ದಿ ಹೊಂದುತ್ತಾ ಇರುವ ತಾಲೂಕು ಆಗಿದೆ. ಪೂಜ್ಯ ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಿಂದಾಗಿ ಹೆಸರು ವಾಸಿಯಾಗಿದೆ. ಆದರೆ ೧೯೪೭ ರ ಸ್ವಾತಂತ್ರದ ನಂತರ ಈ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಮುಗಿಯದ ಅದ್ಯಾಯವಾಗಿರುತ್ತದೆ. ಅನೇಕ ಕಡೆ ವಿದ್ಯುತ್ ಶಾಖಾ ಕೇಂದ್ರಗಳು , ಸ್ಟೇಷನ್ ಗಳು ಆದರೂ ಸುಳ್ಯ ತಾಲೂಕಿಗೆ ವಿದ್ಯುತ್ ಸಮಸ್ಯೆ ಒಂದು ಶಾಪವಾಗಿ ಪರಿಣಮಿಸಿದೆ. ಅದರಲ್ಲಿಯೂ ಸುಳ್ಯ – ಸಂಪಾಜೆ ಫೀಡರ್ ನಲ್ಲಿ ದಿನ ನಿತ್ಯ ಅಸಮರ್ಪಕ ವಿದ್ಯುತ್ ಸಮಸ್ಯೆಯಿಂದ ಜನರೋಸಿ ಹೋಗಿದ್ದಾರೆ. ಬೇಸಿಗೆ ಕಾಲದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಆದರೆ ಇದೀಗ ಮಳೆಗಾಲ ಸಮಯದಲ್ಲಿಯೂ ಕನಿಷ್ಟ ೪ ಗಂಟೆಯಾದರು ಸಮರ್ಪಕ ವಿದ್ಯುತ್ ನೀಡಲು ಮೆಸ್ಕಾಂ ವಿಫಲವಾಗಿದೆ. ಅರಂತೋಡು ಶಾಖಾ ಕೇಂದ್ರಕ್ಕೆ ಒಳಪಟ್ಟ ಅರಂತೋಡು ,ಸಂಪಾಜೆ , ತೊಡಿಕಾನ ,ಪೆರಾಜೆ , ಮರ್ಕಂಜ ಗ್ರಾಮಗಳಲ್ಲಿ ಹಗಲು ಮತ್ತು ರಾತ್ರಿಯಲ್ಲಿ ವಿದ್ಯುತ್ ಕಡಿತವಾಗುತ್ತಿರುತ್ತದೆ. ಬ್ಯಾಂಕ್, ಸರಕಾರಿ ಕಛೇರಿಗಳಿಗೆ ನೆಟ್ವರ್ಕ್ ಸಮಸ್ಯೆ, ಸರಕಾರಿ ನೌಕರಿಗೆ,ಕೂಲಿಕೆಲಸಕ್ಕೆ ಹೋಗುವರಿಗೆ ಆಹಾರದ ಸಮಸ್ಯೆ, ಪ್ರತೀ ೫ ನಿಮಿಷಕ್ಕೆ ವಿದ್ಯುತ್ ಟ್ರಿಪ್ ಆಗುವುದರಿಂದ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ,ಪ್ರತೀ ಮಂಗಳವಾರ ದುರಸ್ಥಿ ಬಗ್ಗೆ ಕಡಿತವಾಗುವುದರಿಂದ ಸಾರ್ವಜನಿಕರು ಪ್ರಯಾಸಪಡುತ್ತಿದ್ದಾರೆ.ಈಗಾಗಲೇ ಈ ಪ್ರದೇಶದಲ್ಲಿ ಬರುವ ಲೈನ್ ಗಳು ಕಾಡು ಪ್ರದೇಶದಿಂದ ರಸ್ತೆ ಬದಿಗೆ ಬದಲಾಯಿಸಲಾಗಿದೆ. ಪ್ರತಿ ಪ್ರದೇಶದಲ್ಲಿ ಹೊಸ ಟಿ.ಸಿ ಗಳನ್ನು ಅಳವಡಿಸಲಾಗಿದೆ. ಆದರು ಈ ಪ್ರದೇಶದಲ್ಲಿ ಅಸಮರ್ಪಕ ವಿದ್ಯುತ್ ಕಡಿತ ಮಾಡುತ್ತಿರುವುದು ಖೇದಕರ. ನಮ್ಮ ಗ್ರಾಮದ ಸಮೀಪ ಇರುವ ಸಂಪಾಜೆ ಗ್ರಾಮಕ್ಕೆ ಕೊಡಗು ಜಿಲ್ಲೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜುವಿನಿಂದ ದಿನದ ೨೪ ಗಂಟೆ ವಿದ್ಯುತ್ ಇರುತ್ತದೆ. ಅಲ್ಲದೆ ನೆರೆ ತಾಲೂಕು ಗಳಾದ ಪುತ್ತೂರು, ಬಂಟ್ವಾಳ ತಾಲೂಕಿಗೆ ಉತ್ತಮ ಗುಣ ಮಟ್ಟದ ವಿದ್ಯುತ್ ಸರಬರಾಜು ಆಗುತ್ತದೆ. ಸುಳ್ಯ ತಾಲೂಕಿಗೆ ಏಕೆ ಸರಬರಾಜು ಆಗುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಶೀಲಿಸಿ ಸುಳ್ಯ ತಾಲೂಕಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಮತ್ತು ಸಂಪಾಜೆ ಫೀಡರ್ ನಲ್ಲಿ ದಿನದ ೨೪ ಗಂಟೆ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಶ್ರಫ್ ಗುಂಡಿಯವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.