ವಿನಯ್ ಕಂದಡ್ಕ ಹೇಳಿಕೆಗೆ ತಾಲೂಕು ಮೀಲಾದ್ ಸಮಿತಿ ತೀವ್ರ ಖಂಡನೆ | ಸೌಹಾರ್ದತೆಗೆ ಧಕ್ಕೆ ತರುವ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸುವಂತೆ ಆಗ್ರಹ

ಸೆ.11ರಂದು ಸುಳ್ಯ ನಗರದಲ್ಲಿ ತಾಲೂಕು ಮೀಲಾದ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈದ್ ಮಿಲಾದ್ ಮೆರವಣಿಗೆ ಕುರಿತು ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕಂದಡ ನೀಡಿರುವ ಹೇಳಿಕೆಯನ್ನು ತಾಲೂಕು ಮೀಲಾದ್ ಸಮಿತಿ ತೀವ್ರವಾಗಿ ಖಂಡಿಸಿದೆ ಎಂದು ಮಿಲಾದ್ ಸಮಿತಿ ಪದಾಧಿಕಾರಿಗಳು ಹೇಳಿದರು.

. . . . . . . . .

ಸೆ.15ರಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಮೀಲಾದ್ ಸಮಿತಿ ಅಧ್ಯಕ್ಷ ಮುನಾಫರ್ ನಾವೂರು, ಶಾಂತಿ, ಸಾಮರಸ್ಯಕ್ಕೆ ಹೆಸರಾದ ಸುಳ್ಯದ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸುವ ಹಾಗೂ ರಾಜಕೀಯ ಲಾಭಕ್ಕಾಗಿ ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿದರು.

. . . . . . .

ಸುಳ್ಯ ನಗರದಲ್ಲಿ ಕಳೆದ ಹಲವು ದಶಕಗಳಿಂದ ಎಲ್ಲಾ ಧರ್ಮೀಯರು ಪರಸ್ಪರ ಸಹೋದರತ್ವದಿಂದ ತಮ್ಮ ಹಬ್ಬ-ಹರಿದಿನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ತಾಲೂಕು ಮೀಲಾದ್ ಸಮಿತಿ ವತಿಯಿಂದ ಈದ್ ಮಿಲಾದ್ ಜಾಥಾವನ್ನು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆಯ ಅನುಮತಿಯೊಂದಿಗೆ ನಿಯಮಾನುಸಾರ ಮತ್ತು ಶಾಂತಿಯುತವಾಗಿ ನಡೆಸಲಾಗುತ್ತಿದೆ. ಜಾಥಾದ ಸಂದರ್ಭದಲ್ಲಿ ಯಾವುದೇ ವಾಹನಗಳನ್ನು ಸಂಘಟಕರು ಅಥವಾ ಭಾಗವಹಿಸಿದವರು ತಡೆದು ನಿಲ್ಲಿಸಿಲ್ಲ. ಸಂಚಾರ ನಿಯಂತ್ರಣವನ್ನು ಪೊಲೀಸ್ ಇಲಾಖೆಯೇ ಸಮರ್ಪಕವಾಗಿ ನಿರ್ವಹಿಸಿದೆ ಎಂದು ಅವರು ಹೇಳಿದರು.

ಸುಳ್ಯ ನಗರವು ಮಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಹೊಂದಿದ್ದು, ಬೈಪಾಸ್ ಅಥವಾ ಪರ್ಯಾಯ ರಸ್ತೆಗಳ ಕೊರತೆಯಿದೆ. ವಿವಿಧ ಸಂಘಟನೆಗಳ ಮೆರವಣಿಗೆ, ಜಾಥಾ ಹಾಗೂ ಪ್ರತಿಭಟನೆಗಳ ಸಂದರ್ಭದಲ್ಲಿಯೂ ಇದೇ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಯಾಣಿಕರು ಸಂಕಷ್ಟ ಅನುಭವಿಸಿರುವ ಘಟನೆಗಳಿವೆ. ಆದರೆ ಈದ್ ಮಿಲಾದ್ ಜಾಥಾದ ವಿಚಾರದಲ್ಲಿ ಮಾತ್ರ ಅಸಹಿಷ್ಣುತೆ ತೋರುವುದು ಸರಿಯಲ್ಲ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಇತ್ತೀಚೆಗೆ ನಡೆದ ಈದ್ ಮಿಲಾದ್ ಜಾಥಾ ಸಂದರ್ಭದಲ್ಲಿ ನಗರದ ವಿವಿಧೆಡೆ ಹಿಂದೂ ಧರ್ಮದ ಆಟೋ ಚಾಲಕರು ಸಂಚಾರ ನಿಯಂತ್ರಣಕ್ಕೆ ಸಹಕರಿಸಿ ಜಾಥಾ ಸುಗಮವಾಗಿ ಸಾಗಲು ನೆರವಾದರು. ಜಾಥಾ ವೀಕ್ಷಿಸಲು ರಸ್ತೆಯ ಬದಿಯಲ್ಲಿ ನಿಂತಿದ್ದ ಮುಸ್ಲಿಂ ಮಹಿಳೆಯರಿಗೆ ಹಿಂದೂ ಅಂಗಡಿ ಮಾಲಕರು ಕುರ್ಚಿ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದು ಸುಳ್ಯದ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಮುನಾಫರ್ ನಾವೂರು ಹೇಳಿದರು.

ವಿನಯ್ ಕಂದಡ್ಕ ಅವರು ನಗರ ಪಂಚಾಯತ್ ಅಧ್ಯಕ್ಷರಾಗಿದ್ದ ಅವಧಿಯ ಆಡಳಿತ ಹಾಗೂ ನಗರದಲ್ಲಿನ ನೀರು ಸರಬರಾಜು ಮಹಾಯೋಜನೆಯ ಅನುಷ್ಠಾನದ ಕುರಿತು ಕೂಡ ಸಮಿತಿ ಟೀಕಿಸಿತು. ಮುಂಬರುವ ನಗರ ಪಂಚಾಯತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯವಾಗಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವ ಉದ್ದೇಶದಿಂದ ಕೋಮು ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ.

ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಸಂಪ್ರದಾಯ, ಆಚರಣೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲೆಗಳಿದ್ದು, ಅವುಗಳನ್ನು ಆಚರಿಸುವ ಮತ್ತು ಪ್ರದರ್ಶಿಸುವ ಹಕ್ಕು ಸಂವಿಧಾನಬದ್ಧವಾಗಿದೆ. ನಿರ್ದಿಷ್ಟ ಧರ್ಮದ ಆಚರಣೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿರುವ ಮೀಲಾದ್ ಜಾಥಾವನ್ನು ತುಚ್ಛವಾಗಿ ವಿಮರ್ಶಿಸುವುದು ಅಕ್ಷಮ್ಯ ಮತ್ತು ಖಂಡನೀಯ ಎಂದು ಅವರು ಹೇಳಿದರು.

ಕ್ಷಮೆಯಾಚಿಸಲು ಆಗ್ರಹ
ತಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆದು ವಿನಯ್ ಕಂದಡ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ತಾಲೂಕು ಮೀಲಾದ್ ಸಮಿತಿ ಆಗ್ರಹಿಸಿದೆ. ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಪ್ರಯತ್ನಗಳ ವಿರುದ್ಧ ಪೊಲೀಸ್ ಇಲಾಖೆ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುಳ್ಯದ ಸರ್ವಧರ್ಮೀಯರು ಪ್ರಚೋದನಕಾರಿ ಹಾಗೂ ವಿಭಜಕ ಹೇಳಿಕೆಗಳಿಗೆ ಕಿವಿಗೊಡದೆ ತಮ್ಮ ಸೌಹಾರ್ದತೆ ಮತ್ತು ಸಹೋದರತ್ವವನ್ನು ಮುಂದುವರಿಸಬೇಕು ಎಂದು ಸಮಿತಿ ಮನವಿ ಮಾಡಿದೆ. ವಿನಯ್ ಕಂದಡ ಅವರು ತಕ್ಷಣ ಕ್ಷಮೆಯಾಚಿಸದಿದ್ದರೆ ಮುಂದಿನ ಹಂತದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಸುಹೈಲ್, ಕೆ.ಎಸ್., ರಶೀದ್ ಜಟ್ಟಿಪಳ್ಳ,  ಉಮ್ಮರ್, ಕಾರ್ಯದರ್ಶಿ ಇಕ್ಬಾಲ್, ಜತೆ ಕಾರ್ಯದರ್ಶಿ ಅಶ್ರಫ್ ನಾವೂರು ಹಾಗೂ ಕೋಶಾಧಿಕಾರಿ ಖಲಂದರ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading