ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿಯ ವಿರುದ್ಧ ಪ್ರತಿಭಟನೆ ; 7ನೇ ಕರಡು ಅಧಿಸೂಚನೆ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಕೆ

ಕಸ್ತೂರಿ ರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮವಲಯ ಘೋಷಣೆಯ ವಿರುದ್ಧ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಗ್ರಾಮಸ್ಥರು ಸೆ.09ರಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ ಕೊಲ್ಲಮೊಗ್ರು ಗ್ರಾಮ ಆಡಳಿತ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಸಲ್ಲಿಕೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಮಾತನಾಡುತ್ತಾ “ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮವಲಯ ಘೋಷಣೆಯಿಂದ ಭೂಮಾಲೀಕರು ಹಾಗೂ ಗ್ರಾಮಸ್ಥರ ಜೀವನೋಪಾಯಕ್ಕೆ ತೊಂದರೆ ಆಗದಂತೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. “ರೈತರ ಹಕ್ಕು, ಭೂಮಿ ಹಾಗೂ ಬದುಕಿನ ರಕ್ಷಣೆಗೆ ಕಾನೂನುಬದ್ಧ ಮತ್ತು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟವನ್ನು ಮುಂದುವರಿಸಲಾಗುವುದು” ಎಂದರು. “ಪಶ್ಚಿಮ ಘಟ್ಟಗಳ ಗಡಿಯನ್ನು ವೈಜ್ಞಾನಿಕವಾಗಿ ಹಾಗೂ ಸ್ಪಷ್ಟವಾಗಿ ಗುರುತಿಸಿ ಜನವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಗಳಿಗೆ ಅನಗತ್ಯ ನಿರ್ಬಂಧಗಳು ಬಾರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಮಲೆನಾಡಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಪ್ರತಿಭಟನೆಯಲ್ಲಿ ಗಮನ ಸೆಳೆಯಲಾಯಿತು. ಕಾಡುಪ್ರಾಣಿಗಳಿಂದ ಕೃಷಿ ಬೆಳೆಗಳಿಗೆ ಆಗುತ್ತಿರುವಂತಹ ನಷ್ಟಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವುದರ ಜೊತೆಗೆ ರೈತರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಲಾಯಿತು. “ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮವಲಯ ಘೋಷಣೆಯ ವಿಚಾರದಲ್ಲಿ ಸ್ಥಳೀಯ ಜನರ ಅಭಿಪ್ರಾಯಗಳನ್ನು ಪರಿಗಣಿಸಬೇಕು. ಕೃಷಿಕರು, ಭೂಮಾಲಿಕರು ಹಾಗೂ ಗ್ರಾಮಸ್ಥರ ಹಿತಾಸಕ್ತಿಯನ್ನು ರಕ್ಷಿಸಿದ ನಂತರವೇ ಇತರೆ ನಿರ್ಧಾರಗಳನ್ನು ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹರೀಶ್ ಬಳ್ಳಡ್ಕ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ಮಿಲನ್ ಬಾಳಿಕಳ ಹಾಗೂ ಪ್ರಮುಖರಾದ ಸತೀಶ್.ಟಿ.ಎನ್, ಶೇಖರ್ ಅಂಬೆಕಲ್ಲು, ಕಮಲಾಕ್ಷ ಮುಳ್ಳುಬಾಗಿಲು, ವೆಂಕಟೇಶ್ವರ ಭಟ್ ಪನ್ನೆ, ವೇದಾವತಿ ಮುಳ್ಳುಬಾಗಿಲು, ದಿನೇಶ್ ಮಡ್ತಿಲ, ಮಾಧವ ಚಾಂತಾಳ, ವೆಂಕಟ್ರಮಣ ಭಟ್ ಚನಿಲ, ಬೆಳ್ಯಪ್ಪ ಮಣಿಯಾನಮನೆ, ಹರೀಶ್ಚಂದ್ರ ಜಾಲುಮನೆ, ಗಣೇಶ್ ಭಟ್ ಪನ್ನೆ, ರಾಕೇಶ್ ಮುಳ್ಳುಬಾಗಿಲು, ಪ್ರತೀಕ್ ಬಿಳಿನೆಲೆ, ಶೇಖರ್ ಕೊಂದಾಳ, ಸುಮಿತ್ರಾ ಚಾಂತಾಳ, ಭವಿತ್ ಕೊಪ್ಪಡ್ಕ, ಪ್ರಶಾಂತ್ ಆಲ್ಕಬೆ ಹಾಗೂ ಹೂವಪ್ಪ ಸಂಪ್ಯಾಡಿ ಸೇರಿದಂತೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading