ಸುಳ್ಯ : ವಿಜೃಂಭಣೆಯಿಂದ ನಡೆದ “ಮೊಸರು ಕುಡಿಕೆ ಉತ್ಸವ” ; “ಶ್ರೀ ಕೃಷ್ಣನಂತೆಯೇ ವಿಶ್ವ ಹಿಂದೂ ಪರಿಷತ್ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿದೆ” – ಅರುಣ್ ಉಳ್ಳಾಲ್ ; “ಸಂಘಟನೆಗಳನ್ನು ರಾಜಕೀಯೇತರವಾಗಿ ಬೆಳೆಸಿದಾಗ ಇನ್ನಷ್ಟೂ ಬಲ ಬರುತ್ತದೆ” – ರಾಜೇಶ್ ನಾಥ್ ಜೀ

“ಶ್ರೀ ಕೃಷ್ಣ ಹಿಂದೆ ಧರ್ಮರಕ್ಷಣೆಯ ಕಾರ್ಯ ಮಾಡಿದರೆ ಇಂದು ವಿಶ್ವ ಹಿಂದೂ ಪರಿಷತ್ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿದೆ.‌ ಇದರಿಂದಾಗಿ ಹಿಂದೂ ಸಮಾಜ ನೆಮ್ಮದಿಯಲ್ಲಿದೆ” ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮಂಗಳೂರಿನ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಹೇಳಿದರು. ಅವರು ಸೆ.08 ರಂದು ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಭಜರಂಗದಳ, ಸ್ತ್ರೀ ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ನಡೆದ “13ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ”ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. “ಮನುಷ್ಯ ಮನುಷ್ಯರನ್ನು ತಲುಪದೇ ದೇವರನ್ನು ತಲುಪಲು ಸಾಧ್ಯವಿಲ್ಲ. ಹಿಂದೂ ಸಮಾಜದ ಪ್ರತಿಯೊಬ್ಬರನ್ನು ಕೂಡ ಸಮಾನವಾಗಿ ಕಾಣಬೇಕು.‌ ಸಮಾನತೆಗೆ ಒಪ್ಪದವರನ್ನು ಹೊರಗಿಡಬೇಕು. ನಮ್ಮ ಮನೆಯ ಮಕ್ಕಳಿಗೆ ಧರ್ಮ ಶಿಕ್ಷಣದ ಅಗತ್ಯತೆಯಿದ್ದು, ಫೋಷಕರು ಈ ಬಗ್ಗೆ ಗಮನಹರಿಸಬೇಕು. ಮನೆಯ ಸಂಸ್ಕಾರ ಸರಿ ಇದ್ದರೆ ಮಾತ್ರ ಮಕ್ಕಳು ಸಮಾಜದಲ್ಲಿ ಸಂಸ್ಕಾರಯುತರಾಗುತ್ತಾರೆ. ಹಿರಿಯರನ್ನು ಆಶ್ರಮಕ್ಕೆ ಕಳುಹಿಸದೇ ಗೌರವದಿಂದ ನೋಡಿಕೊಳ್ಳುವ ಕಾರ್ಯ ಆಗಬೇಕು. ಮಕ್ಕಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ದೇವಸ್ಥಾನಕ್ಕೆ ಕಳುಹಿಸುವುದರ ಜತೆಗೆ ಧರ್ಮ ಶಿಕ್ಷಣ ನೀಡುವ ಮೂಲಕ ನಮ್ಮತನವನ್ನು ಜಾಗೃತಗೊಳಿಸಬೇಕಿದೆ” ಎಂದರು.

. . . . . . . . .

ಯೋಗೀಶ್ವರ ಸಿದ್ಧಮಠ ಮರ್ಕಂಜದ ಧರ್ಮದರ್ಶಿ ಹಾಗೂ ಅಖಂಡ ಭಾರತ ಸನಾತನ ಸಂತ ಸಮಿತಿ ಕರ್ನಾಟಕದ ರಾಷ್ಟ್ರೀಯ ಉಪಾಧ್ಯಕ್ಷ ಔಘಡ್ ಪೀರ್ ಯೋಗಿ ರಾಜೇಶ್ ನಾಥ್ ಜೀ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ವಿ.ಹಿಂ.ಪ ಸಂಘಟನೆ ಹಿಂದೂ ಸಮಾಜಕ್ಕೆ ಶಕ್ತಿ ನೀಡಿದೆ. ರಾಜಕೀಯೇತರವಾಗಿ ಸಂಘಟನೆಗಳನ್ನು ಬೆಳೆಸಿದಾಗ ಸಂಘಟನೆ ಇನ್ನಷ್ಟು ಬಲ ಬರುತ್ತದೆ. ಸಂಘಟನೆಗಳು ಗಟ್ಟಿಯಾಗಲು ಎಲ್ಲಾ ಹಿಂದುಗಳು ಕೈ ಜೋಡಿಸಬೇಕು. ಹಿರಿಯರನ್ನು ಗೌರವಿಸುವ ಕೆಲಸವನ್ನು ಮಾಡಿ, ನಾವು ಯಾರಿಗೂ ತೊಂದರೆ ನೀಡಬಾರದು ಆದರೆ ಹಿಂದೂ ಸಮಾಜಕ್ಕೆ ತೊಂದರೆಯಾದಾಗ ಬೆಂಕಿಯಂತೆ ಪ್ರಜ್ವಲಿಸಬೇಕು.‌ ಜಾತಿ ಭೇಧ ಮರೆತು ಎಲ್ಲಾ ಹಿಂದುಗಳು ಭಾರತೀಯರು ಎಂಬ ಭಾವನೆಯಿಂದು ಸಂಘಟಿತವಾಗಬೇಕು. ಗೋವು, ಪ್ರಕೃತಿ, ಭೂಮಿಯ ಜತೆಗೆ ನಮ್ಮ ಆರೋಗ್ಯ ಕಾಪಾಡುವ ಕೆಲಸವನ್ಮು ಸಮಾಜ ಮಾಡಬೇಕು” ಎಂದರು.

. . . . . . .

ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಜಿಲ್ಲಾ ಭಜರಂಗದಳ ಸಂಯೋಜಕ ನವೀನ್ ಮೂಡುಶೆಡ್ಡೆ, ಪುತ್ತೂರು ಜಿಲ್ಲಾ ಭಜರಂಗದಳ ಸಹ ಸಂಯೋಜಕ ಪ್ರವೀಣ್ ಕಲ್ಲೇಗ ಹಾಗೂ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಿ.ಆರ್. ಪಲ್ಲತ್ತಡ್ಕ ಆಗಮಿಸಿದ್ದರು.

ಈ ಸಂದರ್ಭದಲ್ಲಿ ದೈವ ನರ್ತಕ ರಾಜೇಶ್ ಪಣಿಕ್ಕರ್ ಮೇನಾಲ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್, ಉತ್ಸವ ಸಮಿತಿಯ ಗೌರವ ಸಲಹೆಗಾರ ತೀರ್ಥಕುಮಾರ್ ಕುಂಚಡ್ಕ, ಕೋಶಾಧಿಕಾರಿ ನವೀನ್ ಎಲಿಮಲೆ ಹಾಗೂ ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ ಉಪಸ್ಥಿತರಿದ್ದರು.ವರ್ಷಿತ್ ಚೊಕ್ಕಾಡಿ ಸ್ವಾಗತಿಸಿ, ಭಜರಂಗದಳ ಸಂಯೋಜಕ ವಂದಿಸಿದರು. ಉಪನ್ಯಾಸಕಿ ಕು.ಬೇಬಿ ವಿದ್ಯಾ ಹಾಗೂ ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು. ಕು. ಮೌಲ್ಯ ಡಿ.ಸಿ. ಪ್ರಾರ್ಥಿಸಿದರು.ಸೆ. 8ರಂದು ಮಧ್ಯಾಹ್ನ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಶೋಭಾಯಾತ್ರೆಯನ್ನು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿದರು. ಶೋಭಾಯಾತ್ರೆಯಲ್ಲಿ ವೀರ ಯುವಕರಿಂದ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಕಾರ್ಯಕ್ರಮ ನಡೆಯಿತು. ಶೋಭಾಯಾತ್ರೆಯು ಶ್ರೀ ಚೆನ್ನಕೇಶವ ದೇವಸ್ಥಾನದಿಂದ ಎಪಿಎಂಸಿ, ಆಯುರ್ವೇದ ಕಾಲೇಜು ಮುಂಭಾಗ, ಕುರುಂಜಿಭಾಗ್, ಕೆಇಬಿ ಬಳಿಯ ವೇದಶ್ರೀ ಕಾಂಪ್ಲೆಕ್ಸ್, ಅಂಬೆಟಡ್ಕ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಶಾಸ್ತ್ರೀ ವೃತ್ತ, ಪಂಚಾಯತ್ ಬಸ್ ನಿಲ್ದಾಣ, ಗಾಂಧಿನಗರ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕೊನೆಗೆ ಚೆನ್ನಕೇಶವ ದೇವಸ್ಥಾನದ ಮೈದಾನದ ಬಳಿ ಅಟ್ಟಿ ಮಡಿಕೆ ಒಡೆಯಲಾಯಿತು.‌


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading