ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿಶೋರ್ ಕುಮಾರ್ ಕೆ. ಅವರ ಪರಿಚಯ

ಆರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಆರಂತೋಡಿನ ಸಹ ಶಿಕ್ಷಕ ಕಿಶೋರ್ ಕುಮಾರ್ ಕೆ. ಅವರು ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

. . . . . . . . .


ಆರಂತೋಡು ಗ್ರಾಮದ ಕಿರ್ಲಾಯ ನಿವಾಸಿಯಾಗಿರುವ ಕಿಶೋರ್ ಕುಮಾರ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದರು. 1980ರಲ್ಲಿ ಆರಂತೋಡು ನೆಹರು ಸ್ಮಾರಕ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಪದವಿ ಪೂರ್ವ ಶಿಕ್ಷಣದ ಬಳಿಕ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಸೇವೆ ಸಲ್ಲಿಸಿದ ಅವರು ಶಿಕ್ಷಕರಾಗಬೇಕೆಂಬ ಆಶಯದಿಂದ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಬಳಿಕ ಮಂಗಳೂರಿನಲ್ಲಿ ಬಿ.ಎಡ್. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ವಿಷಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ಶಿಕ್ಷಣದ ಜೊತೆಗೆ ರಂಗಭೂಮಿಯಲ್ಲೂ ವಿಶೇಷ ಆಸಕ್ತಿ ಹೊಂದಿರುವ ಅವರು ಖ್ಯಾತ ನಟ ಹಾಗೂ ನಿರ್ದೇಶಕ ಧ್ರುವರಾಜ್ ದೇಶಪಾಂಡೆ ಅವರಿಂದ ಒಂದು ವರ್ಷ ರಂಗ ತರಬೇತಿ ಪಡೆದು ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸುಳ್ಯದ ‘ಅಭಿನಯ’ ನಾಟಕ ಸಂಸ್ಥೆಯ ಸಕ್ರಿಯ ಸದಸ್ಯರಾಗಿ ಸುಮಾರು ಹತ್ತು ವರ್ಷ ಸೇವೆ ಸಲ್ಲಿಸಿದ್ದು, ಜೂಲಿಯಸ್ ಸೀಸರ್, ಕತ್ತಲೆ ದಾರಿ ದೂರ, ಮಧುಮಕ್ಕಿ, ಅಲೆಮಾರಿಗಳು, ದೃಷ್ಟಿ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಜಾಲ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಗೌರವ ಶಿಕ್ಷಕರಾಗಿ ಹಾಗೂ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಮೂರು ವರ್ಷ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಳಿಕ 12-06-1995ರಿಂದ ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಮಾತೃ ಸಂಸ್ಥೆಯಲ್ಲಿನ ಸೇವಾವಧಿಯಲ್ಲಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ಕಿಶೋರ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕೋಲಾಟ, ನೃತ್ಯ, ಜಾನಪದ ಗೀತೆ, ಭಾವಗೀತೆ, ಲಾವಣಿ, ಗಝಲ್, ಕವ್ವಾಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ತರಬೇತಿ ನೀಡಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸಂಸ್ಥೆಯ ಹೆಸರನ್ನು ರಾಜ್ಯಮಟ್ಟದವರೆಗೆ ಕೊಂಡೊಯ್ಯಲು ಶ್ರಮಿಸಿದ್ದಾರೆ.
ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ನಾಟಕಗಳನ್ನು ನಿರ್ದೇಶಿಸುತ್ತಿರುವ ಅವರು ಕೆರೆಗೆ ಹಾರ, ಹಕ್ಕಿ ಕಥೆ, ಮಾರನಾಯಕನ ದೃಷ್ಟಾಂತ, ಸಾಹೇಬರು ಬರುತ್ತಾರೆ, ಸಾಕ್ಷಿ ಕಲ್ಲು, ಮಿಸ್ ಸೇವಂತಿ, ಗೊಂಬೆಯಾಟ, ನಾಗಮಂಡಲ, ಕತ್ತಲೆ ದಾರಿ ದೂರ, ಊರುಬಂಗ, ಮಧ್ಯಮ ವ್ಯಾಯೋಗ ಸೇರಿದಂತೆ ಹಲವು ನಾಟಕಗಳನ್ನು ರಂಗಕ್ಕೆ ತಂದಿದ್ದಾರೆ. ಅವರ ನಿರ್ದೇಶನದ ಸಾಕ್ಷಿ ಕಲ್ಲು ನಾಟಕ ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದು, ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿನಿ ‘ಶ್ರೇಷ್ಠ ನಟಿ’ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸ್ವರಚಿತ ವಿಜ್ಞಾನ ನಾಟಕ ಬೆಳಕು ಕೂಡ ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ.
ಸ್ಕೌಟ್ ಶಿಕ್ಷಕರಾಗಿ ತರಬೇತಿ ಪಡೆದು ಸಂಸ್ಥೆಯಲ್ಲಿ ಸ್ಕೌಟ್ ದಳವನ್ನು ಸ್ಥಾಪಿಸಿ ಉತ್ತಮ ಸ್ಕೌಟ್ ಬ್ಯಾಂಡ್ ತಂಡವನ್ನು ರೂಪಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ಮತ್ತು ವಿವಿಧ ಜಾಂಬೂರಿಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ.
ಯುವಜನ ಮೇಳ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ತೀರ್ಪುಗಾರ ಹಾಗೂ ನಿರ್ಣಾಯಕರಾಗಿ ಸೇವೆ ಸಲ್ಲಿಸಿರುವ ಅವರು, ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ರಾಹಕ ಕ್ಲಬ್ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, 2017 ಮತ್ತು 2018ರಲ್ಲಿ ಸತತ ಎರಡು ವರ್ಷ ‘ಬೆಸ್ಟ್ ಕ್ಲಬ್’ ಹಾಗೂ ‘ಬೆಸ್ಟ್ ಕೋ-ಆರ್ಡಿನೇಟರ್’ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವೃತ್ತಿ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಹೈನುಗಾರಿಕೆ, ಕೋಳಿ ಸಾಕಣೆ, ಆಡು-ಕುರಿ ಸಾಕಣೆ, ಕುಂಬಾರಿಕೆ, ಜೇನು ಸಾಕಣೆ ಸೇರಿದಂತೆ ವಿವಿಧ ಸ್ವಾವಲಂಬಿ ವೃತ್ತಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಮೂಲಕ ಕಥೆ, ಪ್ರಬಂಧ ಹಾಗೂ ಕವಿತೆ ಬರವಣಿಗೆಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ಕಾರ್ಯಕ್ರಮ ನಿರೂಪಣೆಯಲ್ಲಿಯೂ ವಿಶೇಷ ಪ್ರತಿಭೆ ಹೊಂದಿರುವ ಕಿಶೋರ್ ಕುಮಾರ್ ಅವರು ಶಿಕ್ಷಕ ವೃತ್ತಿಗೆ ಸೇರಿದ ಬಳಿಕ ಶಾಲೆ ಹಾಗೂ ಸಮಾಜದ ವಿವಿಧ ಸಂಘಟನೆಗಳ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸ್ಪಷ್ಟ ಉಚ್ಚಾರಣೆ, ಉತ್ತಮ ಸ್ವರಭಾರ ಹಾಗೂ ಸಮಯೋಚಿತ ನಿರೂಪಣಾ ಕೌಶಲ್ಯ ಅವರ ವಿಶೇಷತೆ.
ತರಬೇತಿದಾರರಾಗಿಯೂ ಸೇವೆ ಸಲ್ಲಿಸಿರುವ ಅವರು ಮಾನಸಿಕ ಆರೋಗ್ಯ, ಹದಿಹರೆಯದ ಸಮಸ್ಯೆಗಳ ನಿರ್ವಹಣೆ, ಒತ್ತಡ ನಿರ್ವಹಣೆ, ನಾಯಕತ್ವ ಹಾಗೂ ಪರಿಣಾಮಕಾರಿ ಬೋಧನೆ ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದ್ದಾರೆ. ಸಮಸ್ಯಾತ್ಮಕ ಮಕ್ಕಳಿಗೆ ಆಪ್ತ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನೆರವಾಗಿದ್ದಾರೆ. ಮಕ್ಕಳಿಗೆ ರಂಗ ತರಬೇತಿ ನೀಡುವುದು ಅವರ ನೆಚ್ಚಿನ ಕಾರ್ಯವಾಗಿದೆ.
ಶೈಕ್ಷಣಿಕವಾಗಿ ಸಮಾಜ ವಿಜ್ಞಾನ ಹಾಗೂ ಹಿಂದಿ ಬೋಧಿಸುತ್ತಿರುವ ಅವರು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಂಸ್ಥೆಗೆ ಶೇ.100ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ದೊರೆತಿರುವುದು ಅವರ ಶೈಕ್ಷಣಿಕ ಬದ್ಧತೆಗೆ ಸಾಕ್ಷಿಯಾಗಿದೆ. ವೃತ್ತಿ ಮಾರ್ಗದರ್ಶನದ ಮೂಲಕ ಅವರ ಅನೇಕ ಹಿರಿಯ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗ ಪಡೆದು ಸಂಸ್ಥೆ ಹಾಗೂ ತಮ್ಮ ಗುರುಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಿರುವುದು ಅವರ ಸೇವೆಯ ಸಾರ್ಥಕತೆಯನ್ನು ತೋರಿಸುತ್ತದೆ.
31 ವರ್ಷಗಳ ಸಾರ್ಥಕ ಶಿಕ್ಷಕ ಸೇವೆ, ಶಿಕ್ಷಣದೊಂದಿಗೆ ಕಲೆ-ಸಾಹಿತ್ಯ-ಸಂಸ್ಕೃತಿ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕಿಶೋರ್ ಕುಮಾರ್ ಕೆ. ಅವರನ್ನು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆರಂತೋಡು ನೆಹರು ಸ್ಮಾರಕ ಶಿಕ್ಷಣ ಸಂಸ್ಥೆಗೆ ಹಾಗೂ ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading