ಕುಕ್ಕೆ ಸುಬ್ರಹ್ಮಣ್ಯದಲ್ಲಿ 24×7 ವೈದ್ಯರ ನೇಮಕಕ್ಕೆ 1 ಸಾವಿರ ಪತ್ರಗಳ ಚಳುವಳಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ 24×7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕವಾಗದಿರುವುದನ್ನು ಖಂಡಿಸಿ ಬುಧವಾರ ನಾಗರಿಕರು, ಭಕ್ತರು ಹಾಗೂ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 1 ಸಾವಿರ ಪತ್ರಗಳ ಚಳವಳಿ ನಡೆಯಿತು. ತುರ್ತು ಚಿಕಿತ್ಸಾ ಘಟಕಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಲಾಗಿದೆ. ಆದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು 1,000ಕ್ಕೂ ಅಧಿಕ ಪತ್ರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಚಳವಳಿ ನಡೆಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪ್ರಮುಖರು ಮಾತನಾಡಿ, “ಕುಕ್ಕೆ ಸುಬ್ರಹ್ಮಣ್ಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರತಿನಿತ್ಯ ಸ್ಥಳೀಯರು ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ತುರ್ತು ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ದೊರೆಯುವುದು ಅತ್ಯಗತ್ಯ. ವೈದ್ಯರ ಕೊರತೆಯಿಂದಾಗಿ ತುರ್ತು ಚಿಕಿತ್ಸೆಗೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಈ ವಿಚಾರವನ್ನು ತುರ್ತಾಗಿ ಪರಿಗಣಿಸಿ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು” ಎಂದು ಆಗ್ರಹಿಸಿದರು.

. . . . . . .

ಜನರ ಜೀವ ಉಳಿಸುವುದು ಆದ್ಯತೆಯಾಗಲಿ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಬಿ.ಎನ್. ಮಹೇಶ್ ಕುಮಾರ್ ಮಾತನಾಡಿ, “ಕುಕ್ಕೆ ಸುಬ್ರಹ್ಮಣ್ಯಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಸ್ನೇಹಿತನ ತಾಯಿ ಹೃದಯಾಘಾತಕ್ಕೊಳಗಾದಾಗ ಸ್ಥಳೀಯವಾಗಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಲಭ್ಯವಾಗದ ಘಟನೆ ನಡೆದಿದೆ” ಎಂದು ತಿಳಿಸಿದರು. “ಕುಕ್ಕೆ ಸುಬ್ರಹ್ಮಣ್ಯಕ್ಕೆ ವೃದ್ಧರು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ತುರ್ತು ಆರೋಗ್ಯ ಸೇವೆ ಅಗತ್ಯವಾಗಿದೆ. ಸ್ಥಳೀಯವಾಗಿ ಸೂಕ್ತ ಚಿಕಿತ್ಸೆ ದೊರೆಯುವ ವ್ಯವಸ್ಥೆ ಕಲ್ಪಿಸುವುದು ಜನರ ಜೀವ ರಕ್ಷಣೆಯ ದೃಷ್ಟಿಯಿಂದ ಪ್ರಮುಖವಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಧ್ಯವಿರುವ ಸಹಕಾರ ನೀಡಲು ಸಿದ್ಧರಿರುವುದಾಗಿ” ಅವರು ತಿಳಿಸಿದರು.

ಚಿಕಿತ್ಸೆ ಮೂಲಭೂತ ಸೌಕರ್ಯ : “ಚಿಕಿತ್ಸೆ ಪ್ರತಿಯೊಬ್ಬರಿಗೂ ಅಗತ್ಯವಾದ ಮೂಲಭೂತ ಸೌಕರ್ಯ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು. “ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದಾಗಿ ಹಿಂದೆ ರೋಗಿಗಳನ್ನು ದೂರದ ಮಂಗಳೂರು ಸೇರಿದಂತೆ ಇತರ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಭೇದ ಮರೆತು ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ 24×7 ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಬೇಕು” ಎಂದು ಒತ್ತಾಯಿಸಿದರು. “24×7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ 1,000 ಪತ್ರಗಳ ಚಳವಳಿ ನಡೆಸಲಾಗಿದ್ದು, ಪತ್ರಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು” ಎಂದು ಹೋರಾಟ ಸಮಿತಿ ತಿಳಿಸಿತು.

ವೈದ್ಯರ ನೇಮಕಕ್ಕೆ ವಿದ್ಯಾರ್ಥಿ ಪರಿಷತ್ ಆಗ್ರಹ : “ವೈದ್ಯರ ಕೊರತೆಯಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು” ಎಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿತು. “ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಪರಿಷತ್ ವತಿಯಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ 24×7 ಆಸ್ಪತ್ರೆ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸುಬ್ರಹ್ಮಣ್ಯ ಅತ್ಯಾಡಿ, ಡಾ. ರವಿ ಕಕ್ಕೆಪದವು, ಪವನ್ ಎಂ.ಡಿ., ದೀಪಕ್ ನಂಬಿಯಾರ್, ವಿಮಲಾ ರಂಗಯ್ಯ, ಗೋಪಾಲ್ ಎಣ್ಣೆಮಜಲು, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ ಸೇರಿದಂತೆ ಸ್ಥಳೀಯ ಗಣ್ಯರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading