“ಯುವ ಜನರಲ್ಲಿ ಜಾತಿ ಧರ್ಮದ ಬಿರುಕು ನಿವಾರಿಸಿ, ಐಕ್ಯತೆ ಬೆಳೆಸುವುದೇ ಭಾರತ್ ಜೋಡೋ ಯುವ ಸಂಘದ ಉದ್ದೇಶ” : ಸುಭಾಶ್ಚಂದ್ರ ಶೆಟ್ಟಿ

ಸುಳ್ಯ : “ಹಿಂದೆ ಯುವ ಸಂಘಗಳ ಮೂಲಕ ಯುವ ಜನರು ಪರಸ್ಪರ ಒಗ್ಗಟ್ಟಿನಿಂದಿದ್ದು, ಜಾತಿ–ಧರ್ಮದ ಭೇದವಿಲ್ಲದೆ ಎಲ್ಲರೂ ಜೊತೆಯಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬಿರುಕು ಮೂಡುತ್ತಿರುವುದು ವಿಷಾದನೀಯ. ಯುವಕರಲ್ಲಿ ಮತ್ತೆ ಐಕ್ಯತೆ, ಸಹಬಾಳ್ವೆ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಉದ್ದೇಶದಿಂದ ಸರಕಾರದ ವತಿಯಿಂದ ‘ಭಾರತ್ ಜೋಡೋ ಯುವ ಸಂಘ’ ರಚನೆ ಕಾರ್ಯ ಈಗಾಗಲೇ ಆರಂಭಗೊಂಡಿದೆ” ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಭಾರತ್ ಜೋಡೋ ಯುವ ಸಂಘ ರಚನೆಯ ಜಿಲ್ಲಾ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಹೇಳಿದರು.

. . . . . . . . .

ಸುಳ್ಯದ ಪತ್ರಿಕಾಭವನದಲ್ಲಿ ಆ.31ರಂದು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಗ್ರಾಮ ಮಟ್ಟದಿಂದಲೇ ಯುವ ಜನರನ್ನು ಸಂಘಟಿಸಿ, ಅವರಲ್ಲಿ ಒಗ್ಗಟ್ಟು ಮತ್ತು ರಾಷ್ಟ್ರದ ಬಗ್ಗೆ ಜಾಗೃತಿ ಮೂಡಿಸುವುದು ಭಾರತ್ ಜೋಡೋ ಯುವ ಸಂಘದ ಪ್ರಮುಖ ಉದ್ದೇಶವಾಗಿದೆ. ಪಂಚಾಯತ್ ಮಟ್ಟದಲ್ಲಿ ಒಂದು ಸಂಘದಂತೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 4 ಸಾವಿರ, ಪುರಸಭೆಯಲ್ಲಿ 6 ಸಾವಿರ, ನಗರಸಭೆಯಲ್ಲಿ 8 ಸಾವಿರ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಸಂಘಗಳನ್ನು ರಚಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ” ಎಂದು ಅವರು ತಿಳಿಸಿದರು.

. . . . . . .

“16ರಿಂದ 35 ವರ್ಷದೊಳಗಿನ ಯುವಕ–ಯುವತಿಯರು ಸಂಘಕ್ಕೆ ಸೇರ್ಪಡೆಗೊಳ್ಳಲು ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಆನ್ಲೈನ್ ವ್ಯವಸ್ಥೆಯ ಬದಲಾಗಿ ಸ್ಥಳೀಯ ಅಧಿಕಾರಿಗಳ ಮೂಲಕ ಅರ್ಜಿ ನಮೂನೆ ಪಡೆದು ಸಲ್ಲಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಂಘದ ಸಮಿತಿ ರಚನೆಯಾದ ಬಳಿಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಇದು ಯುವಕರ ಪ್ರತಿಭೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವುದಕ್ಕೂ ಸಂಘ ವೇದಿಕೆಯಾಗಲಿದೆ” ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ, “ಗ್ರಾಮೀಣ ಭಾಗದ ಸಾಕಷ್ಟು ಜನರು ಗ್ಯಾಸ್ ಬುಕ್ಕಿಂಗ್ ಹಾಗೂ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಸಂಸದರು ಲೋಕಸಭೆಯಲ್ಲಿ ಚರ್ಚಿಸಿ ಕೇಂದ್ರ ಸರಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು. ಈ ಕುರಿತು ಪತ್ರ ಬರೆದು ಉಸ್ತುವಾರಿ ಸಚಿವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾರತ್ ಜೋಡೋ ಯುವ ಸಂಘದ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ಭಂಡಾರಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್, ಸೂಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ರಂಜಿತ್ ಮೇನಾಲ ಹಾಗೂ ಕಾಂಗ್ರೆಸ್ ಮುಖಂಡ ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading