Ad Widget

ಲೇಖನ : “ಬಂಗಾರ” ಜನಸಾಮಾನ್ಯರ ಪಾಲಿಗೆ “ಬಲುಭಾರ”

ಅದೊಂದು ಕಾಲವಿತ್ತು ಬಡವರು, ಮಧ್ಯಮವರ್ಗದವರು ಸೇರಿದಂತೆ ಜನಸಾಮಾನ್ಯರಾದ ಪ್ರತಿಯೊಬ್ಬರೂ ಸಹ ಪ್ರತೀವರ್ಷವೂ ಕೂಡ ತಾವು ವರ್ಷಪೂರ್ತಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಅಷ್ಟೋ-ಇಷ್ಟೋ ಉಳಿಸಿ ಕೂಡಿಟ್ಟು ಆ ಕೂಡಿಟ್ಟ ಹಣದಲ್ಲಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ವರ್ಷಕ್ಕೊಮ್ಮೆಯಾದರೂ ತಮ್ಮಿಂದಾದಷ್ಟರ ಮಟ್ಟಿಗೆ ಚಿನ್ನವನ್ನು ಖರೀದಿ ಮಾಡುತ್ತಾ “ಇಂದು ನಾವು ಅನುಭವಿಸುತ್ತಿರುವ ಕಷ್ಟಗಳನ್ನು, ನೋವುಗಳನ್ನು ಮುಂದೆ ನಮ್ಮ ಮಕ್ಕಳು ಅನುಭವಿಸಬಾರದು, ಅವರು ಸುಖ-ಸಂತೋಷ ಹಾಗೂ ನೆಮ್ಮದಿಯಿಂದ ಜೀವನ ನಡೆಸಬೇಕು” ಎನ್ನುವ ಮಹದಾಸೆಯನ್ನು ಹೊತ್ತು ಮಕ್ಕಳ ಭವಿಷ್ಯದ ಬದುಕನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ವರ್ಷವಿಡೀ ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ ಉಳಿಕೆ ಮಾಡುತ್ತಿದ್ದರು. ಹಾಗೆ ಅವರು ಪ್ರತೀ ವರ್ಷವೂ ಕೂಡ ತಾವು ಸಂಪಾದಿಸಿದ ಹಣದಲ್ಲಿ ತಮ್ಮ ಖರ್ಚುಗಳನ್ನು ಕಳೆದು ಚಿನ್ನ ಖರೀದಿಸಬೇಕು ಎನ್ನುವ ಕನಸಿಗಾಗಿ ಕೂಡಿರಿಸಿದ ಹಣದಲ್ಲಿ ಹೆಚ್ಚೇನೂ ಅಲ್ಲದಿದ್ದರೂ ಕೂಡ ಚಿಕ್ಕದಾಗಿ ಸರ, ಕಿವಿಯೋಲೆ ಅಥವಾ ಉಂಗುರ ಹೀಗೆ ಏನನ್ನಾದರೂ ಖರೀದಿಸುತ್ತಿದ್ದರು. “ಹನಿ-ಹನಿಗೂಡಿದರೆ ಹಳ್ಳ” ಎಂಬ ಗಾದೆಮಾತಿನಂತೆ ಪ್ರತೀವರ್ಷವೂ ಕೂಡ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಚಿಕ್ಕಪುಟ್ಟ ಚಿನ್ನವನ್ನು ಖರೀದಿಸಿದರೆ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎನ್ನುವ ನಂಬಿಕೆ ಅವರದ್ದು. “ಇಂದು ಅವರು ಖರೀದಿಸಿದ ಆ ಚಿನ್ನ ಮುಂದೆ ಅವರ ಮಕ್ಕಳ ಮದುವೆಯ ಸಂದರ್ಭದಲ್ಲೋ, ಓದಿನ ಸಲುವಾಗಿಯೋ ಅಥವಾ ಅವರ ಬದುಕಿಗೆ ಅನಿರೀಕ್ಷಿತವಾಗಿ ಏನಾದರೂ ಒಂದು ಬಹುದೊಡ್ಡ ಕಷ್ಟಗಳು ಬಂದಾಗ ಉಪಯೋಗವಾಗಬಹುದು” ಎನ್ನುವಂತಹ ನಂಬಿಕೆ ಹಾಗೂ ಮುಂದಾಲೋಚನೆ ಅವರಲ್ಲಿತ್ತು. ಜೀವನದಲ್ಲಿ “ಹಣ ಇವತ್ತು ಬರುತ್ತದೆ-ನಾಳೆ ಹೊರಟು ಹೋಗುತ್ತದೆ. ಆದರೆ ನಾವು ಅದೇ ಹಣವನ್ನು ಜಾಗರೂಕತೆಯಿಂದ ಉಳಿಕೆ ಮಾಡಿ ವರ್ಷಕ್ಕೊಮ್ಮೆ ಚಿಕ್ಕ ಚಿಕ್ಕದಾದ ಚಿನ್ನದ ಆಭರಣವನ್ನು ಖರೀದಿಸಿದರೆ ಅದು ಶಾಶ್ವತವಾಗಿ ನಮ್ಮೊಂದಿಗೆ ಉಳಿಯುತ್ತದೆ ಹಾಗೂ ಭವಿಷ್ಯದಲ್ಲಿ ಅದು ನಮಗೆ ಸಂಪೂರ್ಣ ಸಹಕಾರಿಯಾಗುತ್ತದೆ” ಎನ್ನುವಂತಹ ಕನಸು, ಯೋಚನೆ ಹಾಗೂ ಭರವಸೆ ಅವರ ಮನಸ್ಸಿನಲ್ಲಿತ್ತು. ಆ ಉದ್ದೇಶದಿಂದಲೇ “ವರ್ಷಕ್ಕೊಂದು ಬಾರಿಯಾದರೂ ನಮ್ಮ ಉಳಿಕೆಯಿಂದ ಸಣ್ಣದೇನಾದರೂ ಚಿನ್ನದ ಆಭರಣವನ್ನು ಖರೀದಿಸಬೇಕು” ಎನ್ನುವುದು ಪ್ರತೀ ಮಧ್ಯಮ ಅಥವಾ ಸಾಮಾನ್ಯ ವರ್ಗದ ಕುಟುಂಬಗಳ ಕನಸಾಗಿರುತ್ತಿತ್ತು, ಹಿಂದೆ ಈ ಕನಸು ನನಸಾಗುತ್ತಿತ್ತು. ಏಕೆಂದರೆ ಕಳೆದ ನಾಲ್ಕೈದು ವರ್ಷಗಳ ಹಿಂದಿನವರೆಗೂ ಈ ಚಿನ್ನದ ಬೆಲೆ ತುಂಬಾ ಕಡಿಮೆ ಅಲ್ಲದಿದ್ದರೂ ಕೂಡ ಕಷ್ಟಪಟ್ಟ ಕೈಗಳಿಗೆ ಕೊಂಚವಾದರೂ ನೆಮ್ಮದಿ ನೀಡುವಷ್ಟರ ಮಟ್ಟಿಗೆ ಕಡಿಮೆ ಇತ್ತು. ಆದರೆ “ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ” ಎನ್ನುವ ಮಾತಿದೆಯಲ್ಲ, ಹಾಗೆಯೇ ಇಂದು ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೂ ಕೂಡ ಮೊದಲಿನಂತಿಲ್ಲ, ಎಲ್ಲವೂ ಬದಲಾಗಿದೆ. ಚಿನ್ನದ ಬೆಲೆಯೂ ಕೂಡ ಆಗಸವನ್ನು ದಾಟಿ ಮತ್ತಷ್ಟು ಮುಂದೆ ಸಾಗುತ್ತಿದೆ. ಕೆಲವೇ ಕೆಲವು ವರ್ಷಗಳ ಹಿಂದೆ ಸಾವಿರಾರು ರೂಪಾಯಿಗಳ ಲೆಕ್ಕದಲ್ಲಿದ್ದ ಒಂದು ಪವನ್ ಚಿನ್ನದ ಬೆಲೆ ಇದೀಗ ಲಕ್ಷಗಳ ಲೆಕ್ಕಕ್ಕೆ ತಲುಪಿದೆ. ಅಂದು ಪ್ರತಿದಿನವೂ ಅಲ್ಪಪ್ರಮಾಣದಲ್ಲಿ ಏರಿಳಿತವಾಗುತ್ತಾ ಅಪರೂಪಕ್ಕೊಮ್ಮೆ ಹೆಚ್ಚು ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದು ಪ್ರತಿದಿನವೂ ಹೆಚ್ಚೆಚ್ಚು ಏರಿಕೆಯ ಹಾದಿಯತ್ತಲೇ ಸಾಗುತ್ತಿದೆ. ಹಾಗೆ ಸಾಗುತ್ತಾ ಸಾಗುತ್ತಾ ಚಿನ್ನ ತನ್ನ ಇಳಿಕೆಯ ಹಾದಿಯನ್ನೇ ಮರೆತಿದೆ ಎಂದೆನಿಸುತ್ತಿದೆ. ಅದಕ್ಕಾಗಿಯೇ ನಮ್ಮ ಹಿರಿಯರು ಹೇಳಿದ್ದು “ಕಳೆದುಹೋದ ಭೂತಕಾಲದ ಜೀವನವೇ ಅದೆಷ್ಟೋ ಚೆನ್ನಾಗಿತ್ತು, ಮುಂಬರುವ ಭವಿಷ್ಯದ ಬದುಕು ಅದು ಹೇಗೋ ಏನೋ ಆ ದೇವರಿಗೆ ಗೊತ್ತು” ಎಂದು… ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading