Ad Widget

ಬಿಟ್ಟುಬಿಡಿ ಪ್ರಾಮಾಣಿಕತೆಯ ಕನಸು – ಇಲ್ಲಿ ನೆಗೆಟಿವ್‌ ಹರಡೋರೇ ಫೇಮಸ್ಸು!

ಇತ್ತೀಚೆಗಷ್ಟೇ ಗಂಡನನ್ನು ತ್ಯಜಿಸಿ ಬೇರೊಬ್ಬನೊಂದಿಗೆ ತೆರಳಿ, ಮರಳಿ ಗಂಡನನ್ನು ಸೇರಿದ ಮಹಿಳೆ ಮತ್ತು ಆಕೆಯೇ ಬೇಕೆಂದು ಅತ್ತೂ ಕರೆದ ಆಕೆಯ ಗಂಡ ಇಬ್ಬರೂ ಸಖತ್‌ ಸುದ್ದಿಯಾದರು. ಕೊನೆಗೂ ಸುದ್ದಿ ವಾಹಿನಿಯೊಂದರ ಮುಂದಾಳತ್ವದಲ್ಲಿ ಅವರಿಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ಮರು ಮದುವೆಯಾಗಿದ್ದು, ಆನಂತರ ಆಕೆ ಗಂಡನೊಂದಿಗೆ ತೆರಳಿದ್ದು ಎಲ್ಲವೂ ಈಗ ಹಳೆಯದು. ಇದೀಗ ಇದೇ ಜೋಡಿಗೆ ಟ್ರಾವೆಲ್‌ ಏಜೆನ್ಸಿಯೊಂದು ಪ್ರೊಮೋಶನ್‌ಗೆ ಅವಕಾಶ ನೀಡಿದೆ.
ಅವರಿಗೆ ಪ್ರೊಮೋಶನ್‌ ಅವಕಾಶ ಸಿಕ್ಕಿರುವುದಕ್ಕಾಗಲೀ ಯಾವುದೇ ತಕರಾರುಗಳಿಲ್ಲ. ಆದರೆ, ಸಮಾಜದ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬುದೇ ವಿಪರ್ಯಾಸ. ಈ ಸೋಶಿಯಲ್‌ ಮೀಡಿಯಾದ ಯುಗಾರಂಭವಾದ ಮೇಲೆ ಬರಿಯ ಕೆಟ್ಟದ್ದೇ ಮೇಳೈಸುತ್ತಿದೆ, ಒಳ್ಳೆಯತನಗಳೆಲ್ಲಾ ಮೂಲೆಗುಂಪಾಗುತ್ತಿದೆ. ಹಗಲು ರಾತ್ರಿ ಕಷ್ಟಪಟ್ಟು ದುಡಿಯುವವರಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇನ್ನೊಬ್ಬರನ್ನು ವ್ಯಂಗ್ಯ ಮಾಡುತ್ತಾ, ಧರ್ಮ-ಧರ್ಮಗಳ ನಡುವೆ ಕತ್ತಿ ಮಸೆಯುತ್ತಾ ಸೋಶಿಯಲ್‌ ಮೀಡಿಯಾದಲ್ಲಿ ದಿನ ಕಳೆಯುವವರು ಮೆರೆಯುತ್ತಾರೆ. ಅಹಿತವಾದವುಗಳನ್ನು ಮಾಡಿದವರು ಫೇಮಸ್‌ ಆಗುತ್ತಿದ್ದಾರೆ. ರಾಗ, ತಾಳ, ಶ್ರುತಿಗಳೇ ಇಲ್ಲದ ಹಾಡುಗಳು ಜನಮನ್ನಣೆ ಗಳಿಸಿ ಬಿರುದು ಸಮ್ಮಾನ ಗಳಿಸುವಲ್ಲಿವರೆಗೆ ಕೊಂಡೊಯ್ಯುತ್ತದೆ. ಅದೇ ಒಳ್ಳೆಯ ಹಾಡುಗಾರ ಮೂಲೆಗುಂಪಾಗುತ್ತಾನೆ. ಹುಚ್ಚುಹುಚ್ಚಾಗಿ ರೀಲ್ಸ್‌ ಮಾಡುವವರಿಗೆ ಟಿವಿ ಚಾನೆಲ್‌ಗಳಲ್ಲಿ ಅವಕಾಶ ಸಿಗುತ್ತದೆ, ಮಿಲಿಯನ್‌ ಗಟ್ಟಲೆ ಫಾಲೋವರ್ಸ್‌ ಸಿಗುತ್ತಾರೆ. ಅದೇ ಕಷ್ಟಪಟ್ಟು ನಾಲ್ಕು ಕಾಸು ಸಂಪಾದನೆ ಮಾಡುತ್ತೇನೆಂದು ಸಂಪಾದನೆಗೆ ದಾರಿ ಹುಡುಕುವವರಿಗೆ ಇದೇ ಸೋಶಿಯಲ್‌ ಮೀಡಿಯಾದಿಂದ ಏನೂ ಸಿಗುವುದಿಲ್ಲ.
ಸೋಶಿಯಲ್‌ ಮೀಡಿಯಾಗಳಷ್ಟೇ ಅಲ್ಲ, 24*7 ನ್ಯೂಸ್‌ ಚಾನೆಲ್‌ಗಳದ್ದೂ ಇದರಲ್ಲಿ ಸಿಂಹಪಾಲು. ನೆಗೆಟಿವ್‌ ತೋರಿಸಿದರೆ ಜನ ನೋಡುತ್ತಾರೆ, ಸಾಧಕರ ಪರಿಚಯವೋ ಕಷ್ಟದಿಂದ ಮೇಲೆದ್ದು ಬದುಕು ಕಟ್ಟಿಕೊಂಡವರ ಪರಿಚಯವನ್ನೋ ಸುಮ್ಮನೆ ಸ್ಕ್ರಾಲ್‌ ಮಾಡಿ ಹೋಗುತ್ತಾರೆ. ಇಲ್ಲಿ ಮೇಳೈಸುವುದು ಋಣಾತ್ಮಕ ಸುದ್ದಿಗಳಷ್ಟೇ. 
ಯಾವುದೇ ಸಾಧನೆ ಮಾಡದೆ ಕೇವಲ ನೆಗೆಟಿವ್‌ ಅಂಶಗಳೇ ಹಣ ಮಾಡಲು ದಾರಿಯಾದರೆ ಭವಿಷ್ಯದ ಸಮಾಜದ ಕುರಿತು ಸಹಜವಾಗಿಯೇ ಆತಂಕವಾಗುತ್ತದೆ. ಗಂಡ-ಹೆಂಡತಿ ವೈಮನಸ್ಯದಿಂದ ಫೇಮಸ್‌ ಆದವರಿಗೆ, ಹುಚ್ಚುಚ್ಚು ರೀಲ್ಸ್‌ ಮಾಡಿಕೊಂಡು ಫಾಲೋವರ್ಸ್‌ ಸಂಖ್ಯೆ ಏರಿಸಿಕೊಂಡವರಿಗೆಲ್ಲಾ ಪ್ರೊಮೋಶನ್‌ಗೆ ಅವಕಾಶ ಸಿಗುವುದಾದರೆ ಮುಂದಿನ ದಿನಗಳಲ್ಲಿ ಸುಲಭವಾಗಿ ಹಣ ಮಾಡಲು ಮಕ್ಕಳು ಅದೇ ದಾರಿ ಹಿಡಿಯುವುದಲ್ಲಿ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಫೇಮಸ್‌ ಆಗಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಬೇಕು, ಯಾವ ದಾರಿ ಹಿಡಿದರೇನು ಎಂಬ ಮನಸ್ಥಿತಿ ಮಕ್ಕಳಲ್ಲಿ ಮನೆ ಮಾಡುವುದಂತೂ ಸ್ಪಷ್ಟ.
ಸಾಮಾನ್ಯವಾಗಿ ಕಲಿಕೆಯ ಅಂತಿಮ ಗುರಿ ಗಳಿಕೆಯೇ. ಜ್ಞಾನ ಸಂಪಾದನೆ ಕಲಿಕೆಯ ಉದ್ದೇಶವಾದರೂ ಜೀವನಕ್ಕೆ ಬೇಕಾದ ಹಣ ಸಂಪಾದನೆ ಮಾಡುವುದು ಇದರ ಅಂತಿಮ ಹಂತ ಆಗಿರುತ್ತದೆ. ಚೆನ್ನಾಗಿ ಕಲಿತು, ಒಳ್ಳೇ ಉದ್ಯೋಗ ಗಿಟ್ಟಿಸಿಕೊಂಡು ಜೀವನದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಪ್ರತಿಯೊಬ್ಬ ಮನುಷ್ಯನ ಕನಸು. ಆದರೆ ಈಗ ಕೆಟ್ಟದ್ದಕ್ಕೇ ಬೆಲೆ ಜಾಸ್ತಿ ಸಿಗುವುದಾದರೆ, ಕೆಟ್ಟವುಗಳಿಂದಲೇ ಫೇಮಸ್‌ ಆಗುವುದಾದರೆ ಮತ್ತು ಅವುಗಳಿಂದಲೇ ಪ್ರೊಮೋಶನ್‌ಗಳು, ಬಿರುದು ಸಮ್ಮಾನಗಳು ಸಿಗುವುದಾದರೆ ಒಳ್ಳೆಯದನ್ನು ಮಾಡಲು ಯಾಕೆ ಹೋಗಬೇಕು? ಉದ್ಯೋಗಕ್ಕಾಗಿ ಜೀವನದ 15-20 ವರ್ಷಗಳನ್ನು ಯಾಕೆ ಓದಿನಲ್ಲಿ ಸವೆಸಬೇಕು ಎಂಬ ಮನಸ್ಥಿತಿಯನ್ನು ಖಂಡಿತಾ ಮಕ್ಕಳು ಬೆಳೆಸಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ.
ಪ್ರತಿಭೆ ಎಂಬುದು ಪ್ರತಿ ಮನುಷ್ಯನ ಆಸ್ತಿ. ಪ್ರತಿಭೆಗಳಿಂದಲೇ ಗಳಿಸುತ್ತಿರುವವರು ಹಲವರಿದ್ದಾರೆ. ಸಾಮಾಜಿಕ ಜಾಲತಾಣಗಳಿಂದಲೂ ಈ ಪ್ರತಿಭೆಗಳಿಗೆ ಜನಮನ್ನಣೆ ಒದಗಿದೆ. ಆದರೆ ನಿಜವಾದ ಪ್ರತಿಭೆಗಳು ರಾತ್ರೋರಾತ್ರಿ ಫೇಮಸ್‌ ಆಗಿ ಬಿಡುವುದಿಲ್ಲ. ಪ್ರತಿಭೆ ವ್ಯಕ್ತಿಗತವಾಗಿದ್ದರೂ ಅದೇ ಪ್ರತಿಭೆಗೆ ಜನಮೆಚ್ಚುಗೆ ಪಡೆಯಲು ಆ ವ್ಯಕ್ತಿ ಜೀವನದುದ್ದಕ್ಕೂ ಕಷ್ಟಪಟ್ಟಿರುತ್ತಾನೆ. ಪ್ರತಿಭೆಯನ್ನು ವ್ಯಕ್ತಪಡಿಸಲು ವೇದಿಕೆ ಸಿಗುವುದೇ ಅಪರೂಪ. ಸಿಕ್ಕಿದ ಅವಕಾಶವನ್ನು ಜತನದಿಂದ ಕಾಯ್ದುಕೊಳ್ಳುವುದೂ ಆ ವ್ಯಕ್ತಿಗೊಂದು ತಪಸ್ಸಿದ್ದಂತೆ. ಆದರೆ ಈಗಿನ ಸಮಾಜದಲ್ಲಿ ಅಂತಹವುಗಳಿಗೆ ಬೆಲೆಯೇ ಕಡಿಮೆ ಮತ್ತು ಅನಗತ್ಯ ವಿವಾದಕ್ಕೊಳಗಾದವರಿಗಷ್ಟೆ ಬೆಲೆ ಎನ್ನುವಂತಾದರೆ ನಿಜವಾದ ಪ್ರತಿಭಾವಂತನಿಗೆ ಮೋಸವಾದಂತಲ್ಲವೇ? ಇರುವ ಪ್ರತಿಭೆಗೆ ಮನ್ನಣೆ ಸಿಗದೇ ನೆಗೆಟಿವ್‌ ಅಂಶಗಳಿಂದಲೇ ಫೇಮಸ್‌ ಆದವರಿಗೆ ಮನ್ನಣೆ ಸಿಗುವುದಾದರೆ ಜೀವನದಲ್ಲಿ ಹೋರಾಟವಾದರೂ ಏಕೆ? ನೆಗೆಟಿವ್‌ ಅಂಶಗಳಿಗೇ ಬೆಲೆ ಎಂದಾದರೆ ಹಾಗೆಯೇ ಮುಂದುವರಿದು ಬದುಕೋಣ ಎಂಬುದು ಈಗಿನ ಮಕ್ಕಳ ತಲೆಗೆ ಹೋಗುವುದು ನಿಶ್ಚಿತ. ಮೊಬೈಲ್‌ ಎಂಬ ಮಾಯಾಪೆಟ್ಟಿಗೆ ಬೆರಳ ತುದಿಯಲ್ಲಿರುವಾಗ ಇದನ್ನೆಲ್ಲಾ ಕಲಿತುಕೊಳ್ಳಲು ಮಕ್ಕಳಿಗೆ ಸಮಯವೂ ಬೇಕಿಲ್ಲ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading