Ad Widget

“ಅಮರ ಸುದ್ದಿ ವಿಶೇಷ ವರದಿ”

ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ರಾಜ್ಯ ಸರ್ಕಾರದ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ”ಗೆ ತೊಡಕು…!

ಸರ್ಕಾರದ ನಿರ್ಲಕ್ಷ್ಯದಿಂದ ವರ್ಷಗಳಿಂದ ಜನರು ಅನುಭವಿಸುತ್ತಿರುವ ನೆಟ್ ವರ್ಕ್ ಸಮಸ್ಯೆ ಇಂದು ಸರ್ಕಾರದ ಕೆಲಸಕ್ಕೂ ಅಡ್ಡಿಯಾಯಿತೇ…!?

“ಮೊದಲು ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಿ, ನಂತರ ಸಮೀಕ್ಷೆ ನಡೆಸಿ” : ಗ್ರಾಮೀಣ ಪ್ರದೇಶದ ಜನರ ಆಗ್ರಹ

✍️ಉಲ್ಲಾಸ್ ಕಜ್ಜೋಡಿ

“ನೆಟ್ ವರ್ಕ್ ಸಮಸ್ಯೆ” ಇದು ಕೇವಲ ನಮ್ಮ-ನಿಮ್ಮ ಸಮಸ್ಯೆ ಅಷ್ಟೇ ಅಲ್ಲ. ಇದು ರಾಜ್ಯದ ಹಾಗೂ ದೇಶದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಸಿಗುವಂತಹ ಒಂದು ಭೀಕರ ಸಮಸ್ಯೆ…
ಈಗ ನಾನು ಒಬ್ಬ ಗ್ರಾಮೀಣ ಪ್ರದೇಶದ ನಿವಾಸಿಯಾಗಿ ಹೇಳುವುದಾದರೆ ನಮ್ಮ ಗ್ರಾಮೀಣ ಭಾಗಗಳ ಅಥವಾ ಗ್ರಾಮೀಣ ಪ್ರದೇಶಗಳ ಜನರ ಪರಿಸ್ಥಿತಿ ಹೇಗಿದೆ ಎಂದರೆ ಹತ್ತಾರು ವರ್ಷಗಳಿಂದಲೂ ನಿರಂತರವಾಗಿ ನಾವುಗಳು ಈ ನೆಟ್ ವರ್ಕ್ ಸಮಸ್ಯೆಯನ್ನು ಅನುಭವಿಸಿ ಅನುಭವಿಸಿ ಒಂದು ರೀತಿಯಲ್ಲಿ ಈ ಸಮಸ್ಯೆಗೆ ಒಗ್ಗಿ ಹೋಗಿದ್ದೇವೆ.
ಗ್ರಾಮೀಣ ಪ್ರದೇಶಗಳಲ್ಲಿ ನಾವುಗಳು ಪ್ರತೀದಿನ ಸಾಮಾನ್ಯವಾಗಿ ಕೇಳುವ ಒಂದು ಮಾತು ಎಂದರೆ “ನಮ್ಮಲ್ಲಿ ನೆಟ್ ವರ್ಕ್ ಇಲ್ಲ, ಇದ್ದರೂ ಸರಿಯಾಗಿ ಸಿಗುವುದಿಲ್ಲ, ಕರೆಂಟ್ ಇಲ್ಲದಿದ್ದರಂತೂ ನೆಟ್ ವರ್ಕ್ ಇಲ್ಲವೇ ಇಲ್ಲ…” ಎನ್ನುವಂತಹದ್ದು…!
ಈಗಿನ ಈ ಯಾಂತ್ರೀಕೃತ ಜಗತ್ತು ದಿನದಿನಕ್ಕೂ ಅದೆಷ್ಟು ಮುಂದುವರಿಯುತ್ತಿದೆ ಎಂದರೆ ದೇಶದ ಹಾಗೂ ರಾಜ್ಯಗಳ ಪ್ರತಿಯೊಂದು ಪೇಟೆ-ಪಟ್ಟಣಗಳಲ್ಲಿಯೂ ಕೂಡ 3G, 4G, 5G ಅಷ್ಟೇ ಅಲ್ಲದೇ ಇನ್ನೇನು ಕೆಲವೇ ಸಮಯಗಳಲ್ಲಿ 6G ನೆಟ್ ವರ್ಕ್ ಹಾಗೂ ಇಂಟರ್ನೆಟ್ ಜನರಿಗೆ ದೊರಕುತ್ತದೆ. ಆದರೆ ಅದೇ ಹೆಚ್ಚಿನ ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಜನರು ಇಂದಿಗೂ ಕೂಡ ಸ್ಮಾರ್ಟ್ ಫೋನ್ ಬಿಡಿ ಒಂದು ಸಾಮಾನ್ಯ ಕೀಪ್ಯಾಡ್ ಮೊಬೈಲ್ ನಲ್ಲಿ ಯಾರಿಗಾದರೂ ಕರೆ ಮಾಡಬೇಕು, ಏನೋ ಒಂದು ತುರ್ತು ಸಂದರ್ಭದಲ್ಲಿ ಯಾರನ್ನಾದರೂ ಫೋನ್ ಮಾಡಿ ಕರೆಯಬೇಕು ಎಂದರೆ ನೆಟ್ ವರ್ಕ್ ಹುಡುಕುತ್ತಾ ಗುಡ್ಡ-ಕಾಡುಗಳಲ್ಲಿ ಅಲೆದಾಡಬೇಕು. ಇನ್ನು ಹೈಸ್ಪೀಡ್ ಇಂಟರ್ನೆಟ್ ಅಂತೂ ನಮ್ಮ ಗ್ರಾಮೀಣ ಅಥವಾ ಹಳ್ಳಿ ಪ್ರದೇಶಗಳ ಜನರಿಗೆ ಕನಸಿನ ಮಾತು, ಕೈಗೆಟುಕದ ನಕ್ಷತ್ರದ ರೀತಿ ಆಗಿದೆ…!
ಇಡೀ ಜಗತ್ತು 6G ಹಿಂದೆ ಓಡುವ ಸಮಯ ಬರುತ್ತಿರುವ ಈ ಕಾಲಘಟ್ಟದಲ್ಲಿ ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳ ಜನರುಗಳಾದ ನಾವುಗಳು ಇನ್ನೂ ಕೂಡ 2G ಇಂಟರ್ನೆಟ್ ಹಾಗೂ ನೆಟ್ ವರ್ಕ್ ಅನ್ನು ಹುಡುಕುತ್ತಾ ಕಾಡು-ಗುಡ್ಡಗಳಲ್ಲಿ ಅಲೆದಾಡುತ್ತಿದ್ದೇವೆ. ಈ ಅಲೆದಾಟ ಇಂದು ನಿನ್ನೆಯದಲ್ಲ, ಇದು ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಇನ್ನೆಷ್ಟು ವರ್ಷಗಳ ಕಾಲ ಈ ಸಮಸ್ಯೆ ಸಮಸ್ಯೆಯಾಗಿ ಉಳಿದಿರುತ್ತದೆಯೋ, ನೆಟ್ ವರ್ಕ್ ಅನ್ನು ಹುಡುಕುತ್ತಾ ಗ್ರಾಮೀಣ ಪ್ರದೇಶಗಳ ಜನರ ಅಲೆದಾಟ ಅದೆಷ್ಟು ವರ್ಷಗಳ ಕಾಲ ಹೀಗೆಯೇ ನಡೆಯುತ್ತದೆಯೋ ಗೊತ್ತಿಲ್ಲ. ಆದರೆ “ನಾವು ನಮ್ಮ ಅಮೂಲ್ಯವಾದ ಮತವನ್ನು ನೀಡಿ ಕಳುಹಿಸಿದ ನಮ್ಮ ಜನಪ್ರತಿನಿಧಿಗಳು, ನಮ್ಮ ಅತ್ಯಮೂಲ್ಯವಾದ ಮತಗಳಿಂದ ನಾವು ನಿರ್ಮಿಸಿದಂತಹ ನಮ್ಮ ಸರ್ಕಾರಗಳು ಇಂದಲ್ಲಾ ನಾಳೆ ನಮ್ಮ ಈ ನೆಟ್ ವರ್ಕ್ ಸಮಸ್ಯೆಗೆ ಸ್ಪಂದಿಸಿ ಗ್ರಾಮೀಣ ಪ್ರದೇಶಗಳ ಪ್ರತೀ ಮನೆ-ಮನೆಗಳಿಗೂ ಯಾವುದೇ ಅಡೆ-ತಡೆಯಿಲ್ಲದಂತೆ ಹೈಸ್ಪೀಡ್ ನೆಟ್ ವರ್ಕ್ ಹಾಗೂ ಇಂಟರ್ನೆಟ್ ಸೌಲಭ್ಯ ದೊರಕುವಂತೆ ಮಾಡುತ್ತವೆ” ಎನ್ನುವಂತಹ ಒಂದು ಚಿಕ್ಕ ನಂಬಿಕೆ ವರ್ಷಗಳಿಂದಲೂ ನಮ್ಮ ಮನಸ್ಸಿನೊಳಗಿದೆ. “ಆದರೆ ಈ ನಂಬಿಕೆ ಯಾವಾಗ ನಿಜವಾಗುವುದೋ ಕಾದು ನೋಡಬೇಕಾಗಿದೆ…!”
ಆದರೆ ಈಗ ಇಲ್ಲಿ ಬಹುಮುಖ್ಯ ವಿಷಯ ಏನೆಂದರೆ ಕರ್ನಾಟಕ ರಾಜ್ಯ ಸರ್ಕಾರ ಇದೀಗ ರಾಜ್ಯದಾದ್ಯಂತ “ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ”ಯನ್ನು ನಡೆಸುತ್ತಿದೆ. ಆದರೆ ಸರ್ಕಾರಗಳ ನಿರ್ಲಕ್ಷ್ಯದಿಂದಲೋ ಅಥವಾ ಸರ್ಕಾರಗಳ ಗಮನಕ್ಕೆ ಬಾರದೆಯೋ ಏನೋ ಹತ್ತಾರು ವರ್ಷಗಳಿಂದ ಗ್ರಾಮೀಣ ಅಥವಾ ಹಳ್ಳಿ ಪ್ರದೇಶಗಳ ಜನರು ಅನುಭವಿಸುತ್ತಿರುವ ಈ ನೆಟ್ ವರ್ಕ್ ಸಮಸ್ಯೆ ಇದೀಗ ಸರ್ಕಾರ ನಡೆಸುತ್ತಿರುವ ಈ ಸಮೀಕ್ಷೆಗೂ ತಟ್ಟಿದೆ ಎಂದರೆ ತಪ್ಪಾಗಲಾರದು…! ಏಕೆಂದರೆ ಸರ್ಕಾರದ ನಿಯಮದ ಪ್ರಕಾರ ರಾಜ್ಯದಾದ್ಯಂತ ಸಮೀಕ್ಷೆ ನಡೆಸುವವರು ರಾಜ್ಯದ ಜನರ ಪ್ರತೀ ಮನೆ-ಮನೆಗಳಿಗೂ ತೆರಳಿ ಸಮೀಕ್ಷೆ ಕಾರ್ಯವನ್ನು ನಡೆಸಬೇಕು ಎಂದು ತಿಳಿಸಲಾಗಿದೆ. ಆದರೆ ಇದೀಗ ಗ್ರಾಮೀಣ ಭಾಗಗಳಲ್ಲಿರುವ ಈ ನೆಟ್ ವರ್ಕ್ ಹಾಗೂ ಇಂಟರ್ನೆಟ್ ಸಮಸ್ಯೆಯಿಂದಾಗಿ ಈ ಸಮೀಕ್ಷಾ ಕಾರ್ಯಕ್ಕೆ ನಿರಂತರವಾಗಿ ಅಡ್ಡಿ ಉಂಟಾಗುತ್ತಿದೆ. ಸರ್ಕಾರಗಳು ಮನಸ್ಸು ಮಾಡಿದರೆ ಯಾವತ್ತೋ ಬಗೆಹರಿಸಬಹುದಾಗಿದ್ದ ಈ ನೆಟ್ ವರ್ಕ್ ಸಮಸ್ಯೆ ಇದೀಗ ಸರ್ಕಾರದ ಕೆಲಸಕ್ಕೆ ಅಡ್ಡಿಯಾಗುತ್ತಿದೆ ಎನ್ನುವುದು ವಿಪರ್ಯಾಸವೇ ಸರಿ…!
ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು ನಮ್ಮ ಈ ಗ್ರಾಮೀಣ ಪ್ರದೇಶಗಳನ್ನು ಅಥವಾ ಹಳ್ಳಿ ಪ್ರದೇಶಗಳನ್ನು ಹಲವಾರು ವರ್ಷಗಳಿಂದ ಕಾಡುತ್ತಿರುವಂತಹ ಈ ನೆಟ್ ವರ್ಕ್ ಸಮಸ್ಯೆಯನ್ನು ಪರಿಹರಿಸುತ್ತಾರೆಯೋ ಎಂದು ಕಾದುನೋಡಬೇಕಾಗಿದೆ. ಏಕೆಂದರೆ “ಈ ಪೇಟೆ-ಪಟ್ಟಣಗಳು ಹಾಗೂ ಗ್ರಾಮೀಣ ಅಥವಾ ಹಳ್ಳಿ ಪ್ರದೇಶಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ” ಇವೆರಡೂ ಸೇರಿದಾಗ ಮಾತ್ರ ತಾಲೂಕುಗಳು, ಜಿಲ್ಲೆಗಳು, ರಾಜ್ಯಗಳು ಹಾಗೂ ಒಂದು ದೇಶ ನಿರ್ಮಾಣಗೊಳ್ಳಲು ಸಾಧ್ಯ. ಹಾಗಾಗಿ ಇವೆರಡು ಒಂದೇ ಅಂದಮೇಲೆ ಪೇಟೆ-ಪಟ್ಟಣಗಳಿಗೆ ದೊರೆಯುವಂತಹ ಹೈಸ್ಪೀಡ್ ನೆಟ್ ವರ್ಕ್, ಇಂಟರ್ನೆಟ್ ಸಂಪರ್ಕ ಹಾಗೂ ಪ್ರತಿಯೊಂದು ಮೂಲಭೂತ ಸೌಕರ್ಯಗಳೂ ಕೂಡ ಗ್ರಾಮೀಣ ಅಥವಾ ಹಳ್ಳಿ ಪ್ರದೇಶಗಳಲ್ಲಿಯೂ ಕೂಡ ಸರಿಸಮಾನವಾಗಿ ದೊರೆಯಬೇಕು ಅಲ್ಲವೇ…!?✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading