Ad Widget

“ಅಮರ ಸುದ್ದಿ ವಿಶೇಷ ವರದಿ”

ಕೃಷಿ ತೋಟಗಳಿಗೆ ಆನೆ ಹಾಗೂ ಇತರೆ ಕಾಡುಪ್ರಾಣಿಗಳ ನಿರಂತರ ದಾಳಿಯಿಂದ ಕಂಗೆಟ್ಟಿರುವ ಸುಳ್ಯ ತಾಲೂಕಿನ ಕೃಷಿಕರು

ಒಂದೆಡೆ ಅಡಿಕೆಗೆ ಹಳದಿ ಎಲೆಚುಕ್ಕೆ ರೋಗವಾದರೆ ಇನ್ನೊಂದೆಡೆ ಕೃಷಿ ತೋಟಗಳಿಗೆ ಕಾಡುಪ್ರಾಣಿಗಳ ನಿರಂತರ ದಾಳಿ ; “ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ” ಎಂಬಂತಾಗಿದೆ ತಾಲೂಕಿನ ಕೃಷಿಕರ ಪರಿಸ್ಥಿತಿ

✍️ಉಲ್ಲಾಸ್ ಕಜ್ಜೋಡಿ

“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬ ಗಾದೆ ಮಾತಿದೆ. ಇಂದು ಈ ಗಾದೆಮಾತು ಅದೇಕೋ ಅಡಿಕೆ ಬೆಳೆಯನ್ನು ಮುಖ್ಯ ಬೆಳೆಯನ್ನಾಗಿ ಹಾಗೂ ತೆಂಗು, ಬಾಳೆ, ಕಾಳುಮೆಣಸು, ಕೊಕ್ಕೊ ಹಾಗೂ ರಬ್ಬರ್ ಸೇರಿದಂತೆ ಇನ್ನಿತರ ಕೆಲವು ಬೆಳೆಗಳನ್ನು ಉಪಬೆಳೆಗಳಾಗಿ ಬೆಳೆಯುತ್ತಿರುವ, ಇದರಿಂದಲೇ ತಮ್ಮ ಬದುಕನ್ನು ನಡೆಸುತ್ತಿರುವ ಸುಳ್ಯ ತಾಲೂಕಿನ ಕೃಷಿಕರ ಬದುಕಿನಲ್ಲಿ ನಿಜವಾಗುತ್ತಿದೆ ಎಂದೆನಿಸುತ್ತಿದೆ. ಏಕೆಂದರೆ ಸುಳ್ಯ ತಾಲೂಕಿನ ಕೃಷಿಕರ ಪರಿಸ್ಥಿತಿ ಇಂದು ಆ ರೀತಿ ಆಗಿದೆ, ತಲೆತಲಾಂತರಗಳಿಂದ ಈ ಭಾಗದ ಕೃಷಿಕರ ಮುಖ್ಯ ಅಥವಾ ಪ್ರಮುಖ ಬೆಳೆಯಾಗಿರುವ ಅಡಿಕೆಯು ಇದೀಗ ಹಳದಿ ಎಲೆಚುಕ್ಕೆ ರೋಗ ಹಾಗೂ ನುಸಿರೋಗ ಸೇರಿದಂತೆ ವಿವಿಧ ರೀತಿಯ ರೋಗಗಳಿಂದ ನಾಶವಾಗುತ್ತಾ ಬರುತ್ತಿದ್ದು, ಇನ್ನೇನು ಹತ್ತರಿಂದ ಹದಿನೈದು ವರ್ಷಗಳಲ್ಲಿ ಸುಳ್ಯ ತಾಲೂಕಿನಾದ್ಯಂತ ಸಂಪೂರ್ಣ ಅಡಿಕೆ ಕೃಷಿ ನಾಶವಾಗುವ ಹಂತಕ್ಕೆ ತಲುಪುವ ಸಾಧ್ಯತೆ ಎದ್ದು ಕಾಣುತ್ತಿದೆ. ಹಾಗೆಯೇ ಉಪಬೆಳೆಗಳಾದ ತೆಂಗು, ಬಾಳೆ, ಕಾಳುಮೆಣಸು, ಕೊಕ್ಕೊ ಹಾಗೂ ರಬ್ಬರ್ ಬೆಳೆಗಳಿಗೂ ಕೂಡ ವಿವಿಧ ರೀತಿಯ ರೋಗಗಳು ಆಕ್ರಮಿಸುತ್ತಿದ್ದು, ಈ ಏಟುಗಳಿಂದ ಈಗಾಗಲೇ ಕುಸಿದುಹೋಗಿರುವ ಈ ಭಾಗದ ಕೃಷಿಕರು ಭವಿಷ್ಯದ ಬದುಕಿನ ಚಿಂತೆಯಲ್ಲಿ ಕಣ್ಣೀರಾಗಿದ್ದಾರೆ. ಆದರೂ “ತಾವು ಬೆಳೆದಂತಹ ಅರ್ಧ ಬೆಳೆ ಈ ಎಲ್ಲಾ ಸಮಸ್ಯೆಗಳಿಂದ ಮಣ್ಣುಪಾಲಾದರೂ ಕೂಡ ಸಧ್ಯಕ್ಕೆ ಇನ್ನರ್ಧ ಬೆಳೆಯಾದರೂ ನಮ್ಮ ಕೈ ಸೇರುತ್ತಿದೆಯಲ್ಲಾ, ಭವಿಷ್ಯದ ಬದುಕಿನ ಚಿಂತೆ ನಮ್ಮ ಮನಸ್ಸನ್ನು ಸುಡುತ್ತಿದ್ದರೂ ಕೂಡ ಪ್ರಸ್ತುತ ಬದುಕು ಅಳಿದುಳಿದು ಕೈಸೇರಿದ ಬೆಳೆಗಳಿಂದ ಹೇಗೋ ಸಾಗುತ್ತಿದೆಯಲ್ಲಾ” ಎಂದು ಕೊಂಚ ನಿಟ್ಟುಸಿರು ಬಿಡುವಷ್ಟರಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಆ ಬಿಟ್ಟ ನಿಟ್ಟುಸಿರನ್ನೂ ಕೂಡ ಕಟ್ಟಿಹಾಕುತ್ತಿರುವುದು ಇದೀಗ ಕೆಲವು ಸಮಯಗಳಿಂದ ತಾಲೂಕಿನಾದ್ಯಂತ ವಿಪರೀತವಾಗಿ ಕೃಷಿಕರ ತೋಟಗಳ ಮೇಲೆ ನಡೆಯುತ್ತಿರುವಂತಹ ಆನೆ ದಾಳಿ. ಹೌದು, ಅದೇಕೋ ಗೊತ್ತಿಲ್ಲ, ಕೆಲವೊಮ್ಮೆ ಯೋಚಿಸಿದಾಗ ಕೃಷಿಕರ ಬದುಕು ನೆಮ್ಮದಿಯನ್ನು ಕಾಣುವುದು ಆ ದೇವರಿಗೂ ಇಷ್ಟವಿಲ್ಲ ಎಂದೆನಿಸುತ್ತದೆ. ಏಕೆಂದರೆ ಹೀಗೆ ಮೇಲಿನಿಂದ ಮೇಲೆ ಒಂದಲ್ಲಾ ಒಂದು ರೀತಿಯ ಹೊಡೆತಗಳನ್ನು ಆನುಭವಿಸುತ್ತಲೇ ಇದ್ದಾರೆ ಈ ಭಾಗದ ಕೃಷಿಕರು. ಒಂದೆಡೆ ಈ ವಿವಿಧ ರೀತಿಯ ರೋಗಗಳು ಕೃಷಿಕರು ಬೆಳೆದ ಬೆಳೆಗಳನ್ನು ಕಚ್ಚಿ ಕಚ್ಚಿ ತಿನ್ನುತ್ತಿದ್ದರೆ ಇನ್ನೊಂದೆಡೆ ಈ ಆನೆಗಳು ಆ ಬೆಳೆಗಳನ್ನು ಮೆಟ್ಟಿ ಮೆಟ್ಟಿ ಮುರಿಯುತ್ತಿವೆ. ರೋಗಗಳಿಂದ ಬೆಳೆಗಳು ನಾಶವಾದರೆ ಈ ಆನೆ ದಾಳಿಗಳಿಂದ ಬೆಳೆಗಳೊಂದಿಗೆ ಆ ಬೆಳೆಗಳಿಗೆ ನೀರಿನ ವ್ಯವಸ್ಥೆಗಾಗಿ ಅಳವಡಿಸಿದಂತಹ ಪೈಪ್ ಲೈನ್ ಗಳು, ಸ್ಪಿಂಕ್ಲರ್ ಪಾಯಿಂಟ್ ಗಳು ಸೇರಿದಂತೆ ಕೃಷಿ ತೋಟಗಳಲ್ಲಿ ಕಾಲಕೆಳಗೆ ಸಿಗುವಂತಹ, ಕಣ್ಣೆದುರಿಗೆ ಕಾಣಿಸುವಂತಹ ಎಲ್ಲವನ್ನೂ ಕೂಡ ಕಾಲುಗಳಿಂದ ತುಳಿದು, ಸೊಂಡಿಲಿನಿಂದ ಎಳೆದು ನಾಶ ಮಾಡುತ್ತಿವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಸ್ವಲ್ಪ ದಿವಸಗಳ ಹಿಂದೆ ಸಂಪಾಜೆಯ ಚೆಂಬು ಎಂಬಲ್ಲಿ ರಾತ್ರಿ ಸಮಯದಲ್ಲಿ ತೋಟಕ್ಕೆ ಆನೆ ಬಂದಿದೆ ಎನ್ನುವ ಕಾರಣಕ್ಕೆ ಕೃಷಿಕರೊಬ್ಬರು ಅದನ್ನು ಓಡಿಸುವ ಸಲುವಾಗಿ ತೋಟಕ್ಕೆ ತೆರಳಿದ್ದು, ಅವರು ಆನೆಯ ದಾಳಿಗೆ ಸಿಲುಕಿ ಮೃತಪಟ್ಟ ಘಟನೆಯೂ ನಡೆದಿತ್ತು. ಕೇವಲ ಆನೆಗಳಷ್ಟೇ ಅಲ್ಲ, ಕಡವೆ, ಕಾಡುಹಂದಿ ಸೇರಿದಂತೆ ಇತರೆ ಕೆಲವು ಕಾಡುಪ್ರಾಣಿಗಳು ಕೂಡ ರಾತ್ರಿ ಆಗುವಷ್ಟರಲ್ಲಿ ಕೃಷಿಕರ ತೋಟಗಳಿಗೆ ನುಗ್ಗಿ ಬೆಳಗಾಗುವಷ್ಟರಲ್ಲಿ ಬಹಳಷ್ಟು ಬೆಳೆಗಳನ್ನು ನಾಶಪಡಿಸಿರುತ್ತವೆ. ಈ ಭಾಗದ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ಕೇವಲ ರಾತ್ರಿಯ ಸಂದರ್ಭದಲ್ಲಷ್ಟೇ ಅಲ್ಲ, ರಾತ್ರಿ ಸಮಯದಲ್ಲಿ ಆನೆ, ಕಡವೆ ಹಾಗೂ ಕಾಡುಹಂದಿಗಳ ಹಾವಳಿಯಾದರೆ ಬೆಳಗಾಗುವಷ್ಟರಲ್ಲಿ ಕೋತಿಗಳ ಹಿಂಡು ತೋಟಗಳಿಗೆ ಲಗ್ಗೆ ಇಟ್ಟಿರುತ್ತವೆ, ಬೆಳಗಿನಿಂದ ಸಂಜೆಯವರೆಗೂ ಅಡಿಕೆ, ಕೊಕ್ಕೊ ಸೇರಿದಂತೆ ಇನ್ನಿತರ ಬೆಳೆಗಳನ್ನು ಹಾಳುಗೆಡವುತ್ತಲೇ ಇರುತ್ತವೆ. ಕಾಡುಪ್ರಾಣಿಗಳ ಈ ಸಮಸ್ಯೆ ಸುಳ್ಯ ತಾಲೂಕಿನ ಕೃಷಿಕರ ದಿನನಿತ್ಯದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ರಾತ್ರಿ ಹಗಲೆನ್ನದೇ ನಡೆಯುತ್ತಲೇ ಇರುತ್ತದೆ. ಈ ರೀತಿ ಇತ್ತೀಚಿನ ವರ್ಷಗಳಲ್ಲಿ ಕೃಷಿಕರ ಬೆಳೆಗಳ ಮೇಲೆ, ಕೃಷಿ ಭೂಮಿಗಳ ಮೇಲೆ, ಕೃಷಿಕರ ಬದುಕಿನ ಮೇಲೆ, ದುರಾದೃಷ್ಟ ಎಂಬಂತೆ ಕೊನೆಗೆ ಕೃಷಿಕರ ಪ್ರಾಣದ ಮೇಲೂ ಒಂದಲ್ಲಾ ಒಂದು ರೀತಿಯಲ್ಲಿ ಈ ಕಾಡುಪ್ರಾಣಿಗಳಿಂದ ದಾಳಿಗಳು ನಡೆಯುತ್ತಲೇ ಇವೆ. ಕೃಷಿಕರು ಒಂದು ಕಡೆಯಿಂದ ಈ ಕಾಡುಪ್ರಾಣಿಗಳೊಂದಿಗೆ, ಮತ್ತೊಂದು ಕಡೆಯಿಂದ ಕೃಷಿ ಬೆಳೆಗಳಿಗೆ ಬರುತ್ತಿರುವಂತಹ ವಿವಿಧ ರೋಗಗಳೊಂದಿಗೆ ಸಂಘರ್ಷವನ್ನು ಮಾಡುತ್ತಾ ಮಾಡುತ್ತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೋವುಗಳನ್ನು ತಿನ್ನುತ್ತಾ ತಿನ್ನುತ್ತಾ ಭವಿಷ್ಯದ ಬದುಕಿನ ಚಿಂತೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಾಗೆಂದು ನಾವು ಕಾಡುಪ್ರಾಣಿಗಳನ್ನು ಬೈದು ಪ್ರಯೋಜನವಿಲ್ಲ, ಏಕೆಂದರೆ ಅವುಗಳು ತಮ್ಮ ದಿನನಿತ್ಯದ ಆಹಾರವನ್ನು ಅರಸಿ ಕಾಡನ್ನು ಬಿಟ್ಟು ತೋಟಗಳಿಗೆ ಬರುತ್ತವೆಯೇ ಹೊರತು ಇನ್ನಾವುದೇ ದುರುದ್ದೇಶವನ್ನು ಹೊತ್ತುಕೊಂಡು ಬರುವುದಿಲ್ಲ. ಹಸಿದ ಹೊಟ್ಟೆಗಾಗಿ ಮನುಷ್ಯನೇ ಬದುಕಿನಲ್ಲಿ ತಿಳಿದೂ ತಿಳಿದೂ ಹಲವಾರು ತಪ್ಪು ಕೆಲಸಗಳನ್ನು ಮಾಡುತ್ತಿರಬೇಕಾದರೆ ಏನೂ ಅರಿಯದ ಆ ಕಾಡುಪ್ರಾಣಿಗಳು ಕೇವಲ ಆಹಾರವನ್ನಷ್ಟೇ ಪಡೆದುಕೊಳ್ಳಲು ಬರುತ್ತವೆ. ಪಾಪ ಅವುಗಳಿಗೇನು ಗೊತ್ತು ಅವುಗಳು ಕೃಷಿ ತೋಟಗಳಿಗೆ ಬಂದು ಸೇವಿಸುವ ಅಥವಾ ಹಾಳುಗೆಡವುವ ಆಹಾರ ಒಬ್ಬ ಕೃಷಿಕ ತನ್ನ ಹಾಗೂ ತನ್ನ ಕುಟುಂಬದ ನಾಳೆಗಳಿಗಾಗಿ, ಭವಿಷ್ಯದ ಬದುಕಿಗಾಗಿ ಹಗಲು ರಾತ್ರಿ ಕಷ್ಟಪಟ್ಟು, ಸಾಲಸೋಲ ಮಾಡಿ ಬೆಳೆದಂತಹ ಬೆಳೆ ಎಂದು, ಅವನು ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾನೆ ಎಂದು. ಹಾಗಾಗಿ ನಾವುಗಳು ಕಾಡುಪ್ರಾಣಿಗಳ ಮೇಲೆ ಅಪವಾದವನ್ನು ಹೊರೆಸಿ ಪ್ರಯೋಜನವಿಲ್ಲ, ಬದಲಾಗಿ ಕೃಷಿಕರ ಸಮಸ್ಯೆಗಳ ಬಗ್ಗೆ ಅರಿವಿರುವಂತಹ ಸರ್ಕಾರ, ಜನನಾಯಕರು ಹಾಗೂ ಸಂಬಂಧಪಟ್ಟ ಇಲಾಖೆಗಳು ಕೃಷಿಕರ ಈ ಸಮಸ್ಯೆಗಳನ್ನು ಪರಿಹರಿಸಿ ಕಾಡುಪ್ರಾಣಿಗಳು ಆಹಾರಕ್ಕಾಗಿ ಕೃಷಿ ತೋಟಗಳಿಗೆ ಬಾರದಂತೆ ಮಾಡುವುದರೊಂದಿಗೆ, ಕೃಷಿಕರ ಕೃಷಿಗೆ ಬಂದಿರುವಂತಹ ವಿವಿಧ ರೀತಿಯ ರೋಗಗಳನ್ನು ತಡೆಗಟ್ಟುವ ಔಷಧಿಗಳನ್ನು ಅಥವಾ ಪರಿಹಾರಗಳನ್ನು ಕಂಡುಹಿಡಿದು ಕೃಷಿಕರ ಬದುಕಿಗೆ ಆಧಾರಸ್ತಂಭವಾಗಬೇಕಾಗಿದೆ. ಏಕೆಂದರೆ ಪ್ರತೀ ಐದು ವರ್ಷಗಳಿಗೊಮ್ಮೆ ನಾವು ಮಾಡುವಂತಹ ಮತದಾನ ನಮ್ಮ ನಾಳೆಗಳು ಚೆನ್ನಾಗಿರುತ್ತವೆ, ನಾವು ಆರಿಸಿರುವ ಜನನಾಯಕರು ನಮ್ಮ ಸಮಸ್ಯೆಗಳನ್ನು ನಾವು ತಿಳಿಸುವ ಮೊದಲೇ ತಿಳಿದುಕೊಂಡು ಪರಿಹರಿಸುತ್ತಾರೆ ಎಂಬ ನಂಬಿಕೆಯಿಂದ ಮಾಡುತ್ತಿರುತ್ತೇವೆ. ಈಗಲೂ ಕೂಡ ಅದೇ ನಂಬಿಕೆಯಿಂದ ಕಾಯುತ್ತಿದ್ದೇವೆ… ದಯವಿಟ್ಟು ಅಡಿಕೆ ಸೇರಿದಂತೆ ಇನ್ನಿತರ ಕೃಷಿ ಬೆಳೆಗಳಿಗೆ ಹಿಡಿದಿರುವಂತಹ ವಿವಿಧ ರೋಗಗಳ ಶಮನಕ್ಕಾಗಿ ಔಷಧಿಗಳನ್ನು ಅಥವಾ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಹಿಡಿಯುವುದರೊಂದಿಗೆ ಕೃಷಿಭೂಮಿಗಳನ್ನು ಕಾಡುಪ್ರಾಣಿಗಳ ದಾಳಿಗಳಿಂದ ರಕ್ಷಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading