Ad Widget

ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್

ಪ್ರತೀ ವರ್ಷವೂ ಬೇಸಿಗೆ ರಜೆ ಕಳೆದು ಶಾಲೆಗಳು ಪ್ರಾರಂಭವಾಗುವ ಬೆನ್ನಲ್ಲೇ ಶುರುವಾಗುವ ಮಳೆ ; ಮಳೆಗಾಲದಲ್ಲಿ ಶಾಲೆಗೆ ತೆರಳಲು ಕಷ್ಟಪಡುವ ವಿದ್ಯಾರ್ಥಿಗಳು

ವಿದ್ಯಾರ್ಥಿಗಳಿಗೆ ವಾರ್ಷಿಕ ಬೇಸಿಗೆ ರಜೆಯನ್ನು ಬೇಸಿಗೆಯ ಬದಲು ಮಳೆಗಾಲದಲ್ಲಿ ನೀಡಿದರೆ ಉತ್ತಮವಲ್ಲವೇ…!?

✍️ ಉಲ್ಲಾಸ್ ಕಜ್ಜೋಡಿ

ಇತ್ತೀಚೆಗೆ ಕೇರಳ ರಾಜ್ಯದ ಶಿಕ್ಷಣ ಸಚಿವರಾದ ವಿ.ಶಿವನ್ ಕುಟ್ಟಿ ಅವರು ತಮ್ಮ ರಾಜ್ಯದ ಶಾಲೆಗಳ ವಾರ್ಷಿಕ ಬೇಸಿಗೆ ರಜೆಯ ಕುರಿತಾಗಿ “ಕೇರಳ ರಾಜ್ಯದಲ್ಲಿ ತೀವ್ರ ಬಿಸಿಲು ಇರುವ ಸಂದರ್ಭದಲ್ಲಿ ಮಕ್ಕಳಿಗೆ ವಾರ್ಷಿಕ ರಜೆ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇದರ ಬದಲಾಗಿ ಭಾರೀ ಮಳೆಯಿಂದಾಗಿ ಅದೆಷ್ಟೋ ದಿನಗಳ ಕಾಲ ತರಗತಿಗಳೇ ರದ್ದಾಗುವ ಜೂನ್-ಜುಲೈ ತಿಂಗಳ ಅವಧಿಯಲ್ಲಿ ರಜೆ ನೀಡಬಾರದೇಕೆ…!?” ಎಂದು ಪ್ರಶ್ನಿಸಿದ್ದರು. ಹಾಗೂ ಈ ಬಗ್ಗೆ ಅವರು ಸಾರ್ವಜನಿಕ ಅಭಿಪ್ರಾಯವನ್ನು ಕೋರಿದ್ದರು. ಒಂದು ರೀತಿಯಲ್ಲಿ ನೋಡಿದಾಗ ಇವರ ಈ ಯೋಚನೆ ನಿಜವಾಗಿಯೂ ಅತ್ಯುತ್ತಮವಾಗಿದೆ. ಏಕೆಂದರೆ ಈ ಯೋಚನೆ ಒಂದುವೇಳೆ ಕಾರ್ಯರೂಪಕ್ಕೆ ಬಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ತುಂಬಾ ಸಹಕಾರಿಯಾಗುತ್ತದೆ. ಈ ರೀತಿಯ ಯೋಚನೆ ಒಂದು ವೇಳೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾರ್ಯರೂಪಕ್ಕೆ ಬಂದರೆ ನಮ್ಮ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಶಾಲೆಗಳಿಗೆ ವಾರ್ಷಿಕ ಬೇಸಿಗೆ ರಜೆಯನ್ನು ಎಪ್ರಿಲ್-ಮೇ ತಿಂಗಳ ಬದಲಾಗಿ ಈ ರೀತಿಯಾಗಿ ಜೂನ್-ಜುಲೈ ಮಳೆಗಾಲದ ತಿಂಗಳಿನಲ್ಲಿ ನೀಡುವ ಬಗ್ಗೆ ಯೋಚಿಸಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಈ ಯೋಚನೆಯನ್ನು ಕಾರ್ಯರೂಪಕ್ಕೆ ತಂದರೆ ರಾಜ್ಯದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗುತ್ತದೆ. ಏಕೆಂದರೆ ಪ್ರತೀ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ಏಪ್ರಿಲ್-ಮೇ ತಿಂಗಳ ವಾರ್ಷಿಕ ಬೇಸಿಗೆ ರಜೆ ಮುಗಿದು ಮತ್ತೆ ಜೂನ್ ತಿಂಗಳಿನಲ್ಲಿ ಶಾಲೆಗಳು ಪ್ರಾರಂಭವಾಗುವ ಸಂದರ್ಭದಲ್ಲಿ ಮಳೆಯೂ ಕೂಡ ನಿರಂತರವಾಗಿ ಸುರಿಯಲು ಪ್ರಾರಂಭವಾಗುತ್ತದೆ. ಕಾಕತಾಳೀಯವೆಂಬಂತೆ ಮಳೆಗಾಲದ ಈ ಸಂದರ್ಭದಲ್ಲಿ ಬೆಳಿಗ್ಗೆ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಶಾಲೆಗೆ ತೆರಳುವ ಸಂದರ್ಭದಲ್ಲಿ ಹಾಗೂ ಸಂಜೆ ಶಾಲೆಯಿಂದ ಮನೆಗೆ ಮರಳುವ ಸಂದರ್ಭದಲ್ಲಿ ಮಳೆ ಜೋರಾಗಿ ಸುರಿಯಲು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟುಮಾಡುತ್ತಲೇ ಇರುತ್ತದೆ. ಅದರಲ್ಲೂ ಮಳೆಗಾಲದ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಷ್ಟವಂತೂ ಹೇಳತೀರದು, ಏಕೆಂದರೆ ಬೆಳಿಗ್ಗೆ ಮನೆಯಿಂದ ಶಾಲೆಗೆ ಹೋಗುವ ಹಾಗೂ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಈ ಮಳೆಯಿಂದಾಗಿ ವಿದ್ಯಾರ್ಥಿಗಳ ಬ್ಯಾಗ್, ಪುಸ್ತಕಗಳು ಹಾಗೂ ಸಮವಸ್ತ್ರ ಒದ್ದೆಯಾಗಿ ಅವರ ಓದಿಗೆ ತೊಂದರೆಯಾಗುವುದು, ಬೆಳಿಗ್ಗೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಮಳೆಯಿಂದ ಮಕ್ಕಳು ಒದ್ದೆಯಾದರೆ ದಿನಪೂರ್ತಿ ಶಾಲೆಯಲ್ಲಿ ಚಳಿಯಿಂದ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಹಾಗೂ ಮಕ್ಕಳು ಜ್ವರ-ಶೀತದಿಂದ ಬಳಲುವುದು ಒಂದೆಡೆಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ನದಿ-ಹಳ್ಳಗಳು ಹೆಚ್ಚಾಗಿ ಇರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಈ ನದಿ-ಹಳ್ಳಗಳು ತುಂಬಿ ಹರಿಯಲು ಪ್ರಾರಂಭಿಸಿ ವಿದ್ಯಾರ್ಥಿಗಳು ತೆರಳುವ ದಾರಿಯನ್ನು ಹೆಚ್ಚು ದುಸ್ತರ ಹಾಗೂ ಅಪಾಯಕಾರಿಯಾಗಿಸುತ್ತವೆ. ಹಾಗೂ ಕೆಲವೊಮ್ಮೆ ಈ ನದಿ-ಹಳ್ಳಗಳು ನಿರಂತರ ಮಳೆಯಿಂದಾಗಿ ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತವೆ. ಅಷ್ಟೇ ಅಲ್ಲದೇ ಹಳ್ಳಿಗಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಚ್ಚಾ ರಸ್ತೆಗಳು ಅಥವಾ ಮಣ್ಣಿನ ರಸ್ತೆಗಳೇ ಇರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಕೆಲವೊಂದು ಕಡೆಗಳಲ್ಲಿ ಈ ರಸ್ತೆಗಳು ಹದಗೆಟ್ಟು ಸಂಪೂರ್ಣ ಕೆಸರುಮಯವಾಗಿ ವಾಹನ ಸಂಚಾರಕ್ಕೂ ಕಷ್ಟಕರವಾಗುವ ಪರಿಸ್ಥಿತಿಗೆ ತಲುಪಿರುತ್ತವೆ. ಅಷ್ಟೇ ಅಲ್ಲದೇ ಮಳೆ ವ್ಯಾಪಕವಾಗಿ ಸುರಿದಂತಹ ಸಂದರ್ಭದಲ್ಲಿ ಪದೇ ಪದೇ ಶಾಲೆಗಳಿಗೆ ರಜೆ ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಲೇ ಇರುತ್ತದೆ. ಹಾಗಾಗಿ ನಗರ ಪ್ರದೇಶಗಳು, ಗ್ರಾಮೀಣ ಪ್ರದೇಶಗಳು ಹಾಗೂ ಹಳ್ಳಿಗಾಡಿನ ಪ್ರದೇಶಗಳಿಂದ ಕೂಡಿರುವ ನಮ್ಮ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ಈ ಮಳೆಗಾಲದ ಸಂದರ್ಭದಲ್ಲಿನ ಕಷ್ಟಕರವಾದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ, ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಅರ್ಥಮಾಡಿಕೊಂಡು ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರತೀ ವರ್ಷವೂ ಕೂಡ ಎರಡು ತಿಂಗಳುಗಳ ವಾರ್ಷಿಕ ಬೇಸಿಗೆ ರಜೆಯನ್ನು ಏಪ್ರಿಲ್-ಮೇ ತಿಂಗಳ ಬೇಸಿಗೆಯ ಬದಲು ಜೂನ್-ಜುಲೈ ತಿಂಗಳ ಮಳೆಗಾಲದ ಸಂದರ್ಭದಲ್ಲಿ ನೀಡಿದರೆ ವಿದ್ಯಾರ್ಥಿಗಳಿಗೆ ತುಂಬಾ ಸಹಾಯಕವಾಗುತ್ತದೆ ಎಂಬ ಅಭಿಪ್ರಾಯದೊಂದಿಗೆ ನನ್ನ ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading