Ad Widget

ಕೊಲ್ಲಮೊಗ್ರು : ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಟವರ್ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು ; ಗ್ರಾಮಸ್ಥರಿಂದಲೇ ಹೊಸ ಬ್ಯಾಟರಿ ಅಳವಡಿಕೆ

(ವರದಿ : ಉಲ್ಲಾಸ್ ಕಜ್ಜೋಡಿ)
ಕಳೆದ ಕೆಲವು ಸಮಯಗಳಿಂದ ಕೊಲ್ಲಮೊಗ್ರು ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್ ಟವರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ, ಪರಿಣಾಮವಾಗಿ ಗ್ರಾಮಸ್ಥರಿಗೆ ನೆಟ್ ವರ್ಕ್ ಸಮಸ್ಯೆ ಉಂಟಾಗುತ್ತಿತ್ತು. ನೆಟ್ ವರ್ಕ್ ಸಮಸ್ಯೆಯನ್ನು ಸರಿಪಡಿಸಲು ಜನರೇಟರ್ ಗೆ ಬ್ಯಾಟರಿ ಅಳವಡಿಕೆ ಮಾಡಬೇಕಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಅವರು ಹೊಸ ಬ್ಯಾಟರಿ ಅಳವಡಿಕೆ ಮಾಡಲಿಲ್ಲ ಎಂದು ತಿಳಿದುಬಂದಿದ್ದು, ಕೊನೆಗೆ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಧವ ಚಾಂತಾಳ ರವರು ಅವರ ಸದಸ್ಯತ್ವದ ಗೌರವಧನದಿಂದ ಬಿ.ಎಸ್.ಎನ್.ಎಲ್ ಟವರ್ ಗೆ ಹೊಸ ಬ್ಯಾಟರಿಯನ್ನು ನೀಡಿದ್ದು, ಡೈನಮೋ ಕೂಡ ಕೆಟ್ಟು ಹೋಗಿದ್ದರಿಂದ ಅದನ್ನು ಕೂಡ ಸರಿಪಡಿಸಲಾಗಿದ್ದು, ಅದರ ವೆಚ್ಚವನ್ನು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ ರವರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಟವರ್ ಗೆ ಹೊಸ ಬ್ಯಾಟರಿ ಅಳವಡಿಸಿ ಡೈನಮೋ ಸರಿಪಡಿಸಿದ ನಂತರ ಟವರ್ ನ ಪವರ್ ಸಪ್ಲೈ ಬ್ಯಾಕಪ್ ಸಮಸ್ಯೆ ಪರಿಹಾರಗೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಉದಯ ಶಿವಾಲ “ಕೊಲ್ಲಮೊಗ್ರು ಮುಖ್ಯ ರಸ್ತೆ ಹಾಗೂ ಪೇಟೆಯಲ್ಲಿ ಮಾತ್ರ ಖಾಸಗಿ ಜಿಯೋ ನೆಟ್ ವರ್ಕ್ ಸಿಗುತ್ತಿದ್ದು, ಗ್ರಾಮದ ಸರಿಸುಮಾರು 80 ಶೇಕಡಾ ಪ್ರದೇಶದ ಜನರು ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಅನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಇಲ್ಲಿರುವ ಏಕೈಕ ಬ್ಯಾಂಕ್ ಕೂಡ ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಅನ್ನು ಅವಲಂಬಿಸಿದ ಕಾರಣ ಹರಿಹರ, ಬಾಳುಗೋಡು, ಕಲ್ಮಕಾರು ಭಾಗಗಳಿಂದ ವ್ಯವಹಾರಕ್ಕಾಗಿ ಬರುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಇಲಾಖೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಆದ ಕಾರಣ ನಾವು ನಮ್ಮೂರಿನ ಜನರೇ ಹಣ ಸಂಗ್ರಹಿಸಿ ಬ್ಯಾಟರಿ ಅಳವಡಿಸುವ ಬಗ್ಗೆ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಚರ್ಚೆ ಮಾಡಿದೆವು. ಇದನ್ನು ಗಮನಿಸಿದ ನಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ ರವರು ಡೈನಮೋ ಸರಿಪಡಿಸುವ ಸಂಪೂರ್ಣ ವೆಚ್ಚವನ್ನು ತುಂಬಿದರು. ಹಾಗೂ ಉಪಾಧ್ಯಕ್ಷರಾದ ಮಾಧವ ಚಾಂತಾಳ ರವರು ಹೊಸ ಬ್ಯಾಟರಿಯ ಸಂಪೂರ್ಣ ವೆಚ್ಚವನ್ನು ನೀಡಿದರು. ಇದರಿಂದ ನಮ್ಮೂರಿನ ನೆಟ್ ವರ್ಕ್ ಸಮಸ್ಯೆ ಪರಿಹಾರಗೊಂಡಿದೆ” ಎಂದು ತಿಳಿಸಿದರು.
ಒಂದು ರೀತಿಯಲ್ಲಿ ಹೇಳುವುದಾದರೆ ಸುಳ್ಯ ತಾಲೂಕಿನ ಬಹುತೇಕ ಎಲ್ಲಾ ಬಿ.ಎಸ್.ಎನ್.ಎಲ್ ಟವರ್ ಗಳ ಪರಿಸ್ಥಿತಿ ಇದೇ ರೀತಿ ಇದ್ದು, ಒಂದಲ್ಲಾ ಒಂದು ಕಾರಣಗಳಿಂದ ಸರಿಯಾದ ರೀತಿಯಲ್ಲಿ ನೆಟ್ ವರ್ಕ್ ಸಿಗುತ್ತಿಲ್ಲ.
ಅದೇ ರೀತಿ ಮುಳ್ಳುಬಾಗಿಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಬಿ.ಎಸ್.ಎನ್.ಎಲ್ ಟವರ್ ನ ನೆಟ್ ವರ್ಕ್ ಅದರ ವ್ಯಾಪ್ತಿಯ ಎಲ್ಲಾ ಭಾಗಗಳಿಗೂ ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ ಎಂಬುವುದರ ಬಗ್ಗೆ ಈ ಹಿಂದೆ “ಅಮರ ಸುದ್ದಿ” ವಿಶೇಷ ವರದಿಯನ್ನು ಪ್ರಕಟಿಸಿತ್ತು, ಆದರೆ ಇಲ್ಲಿಯವರೆಗೂ ಕೂಡ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಒಟ್ಟಿನಲ್ಲಿ ಪ್ರತೀ ಗ್ರಾಮಗಳ ಪ್ರತೀ ಊರುಗಳ ಪ್ರತೀ ಮನೆಗಳಿಗೂ ತಲುಪುವ ಏಕೈಕ ನೆಟ್ ವರ್ಕ್ ಟವರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಿ.ಎಸ್.ಎನ್.ಎಲ್ ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಅದರ ಮೇಲಿಟ್ಟಿರುವ ಭರವಸೆಯನ್ನು ಕಳೆದುಕೊಳ್ಳುತ್ತಿರುವುದಲ್ಲದೇ ಇಂದಿಗೂ ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಅನ್ನೇ ಅವಲಂಬಿಸಿರುವ ಅದೆಷ್ಟೋ ಊರುಗಳ, ಹಳ್ಳಿ ಪ್ರದೇಶಗಳ ಜನರಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading