Ad Widget

ಅಮರ ಸುದ್ದಿ ವಿಶೇಷ ವರದಿ

ಅಡಿಕೆಗೆ ಹಿಡಿದಿರುವ ಹಲವು ರೋಗಗಳಿಂದ ಹೈರಾಣಾಗಿರುವ ಅಡಿಕೆ ಬೆಳೆಗಾರರು…!

ಈ ರೀತಿ ಅಡಿಕೆ ಕೃಷಿ ನಾಶವಾಗುತ್ತಾ ಹೋದರೆ ಅಡಿಕೆ ಬೆಳೆಯನ್ನೇ ನಂಬಿ ಬದುಕು ನಡೆಸುತ್ತಿರುವ ಕೃಷಿಕರ ಮುಂದಿನ ಪರಿಸ್ಥಿತಿಯೇನು…!?

ಭವಿಷ್ಯದ ಬದುಕಿನ ಚಿಂತೆಯಲ್ಲಿ ಅಡಿಕೆ ಬೆಳೆಗಾರರು…!

✍️ಉಲ್ಲಾಸ್ ಕಜ್ಜೋಡಿ

ಭಾರತ ವೈವಿಧ್ಯತೆಯ ದೇಶ. ಇಲ್ಲಿ ದೇಶದ ಪ್ರತಿಯೊಂದು ಭಾಗಗಳಲ್ಲಿಯೂ ಕೂಡ ಒಂದೊಂದು ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಅದರಲ್ಲಿ ಕೆಲವು ಆಹಾರ ಬೆಳೆಗಳಾದರೆ ಇನ್ನೂ ಕೆಲವು ವಾಣಿಜ್ಯ ಬೆಳೆಗಳು. ವಾಣಿಜ್ಯ ಬೆಳೆಗಳಲ್ಲಿ ಅತೀ ಪ್ರಮುಖವಾಗಿ ಅಥವಾ ಹೆಚ್ಚಾಗಿ ಕಂಡುಬರುವುದು ಎಂದರೆ ಅದು “ಅಡಿಕೆ.”
ಅಡಿಕೆಯು ಭಾರತದಲ್ಲಿ ಬೆಳೆಯುವ ಪ್ರಮುಖವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಅದರಲ್ಲೂ ನಮ್ಮ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕರಾವಳಿ ಕರ್ನಾಟಕ ಅಥವಾ ಮಲೆನಾಡು ಪ್ರದೇಶಗಳ ಅಥವಾ ಭಾಗಗಳ ಜನರು ಬೆಳೆಯುವ ಪ್ರಮುಖ ಬೆಳೆ ಎಂದರೆ ಅದು “ಅಡಿಕೆ.” ಈ ಭಾಗದ ಬಹುತೇಕ ಎಲ್ಲಾ ಕೃಷಿಕರು ಕೂಡ ಅಡಿಕೆ ಬೆಳೆಯನ್ನೇ ನಂಬಿ ಬದುಕು ನಡೆಸುತ್ತಿರುವವರು. ಆದರೆ ಕೃಷಿಕರ ಬದುಕಿಗೆ ಆಧಾರವಾಗಿರುವ ಈ ಅಡಿಕೆ ಬೆಳೆಗೆ ಇದೀಗ ಕೆಲವು ವರ್ಷಗಳಿಂದ ನಿರಂತರವಾಗಿ ಕೊಳೆರೋಗ, ಹಳದಿ ರೋಗ, ಎಲೆಚುಕ್ಕೆ ರೋಗ ಹಾಗೂ ನುಸಿರೋಗ ಸೇರಿದಂತೆ ವಿವಿಧ ರೀತಿಯ ರೋಗಗಳು ದಾಳಿ ಮಾಡುತ್ತಿದ್ದು, ಅಡಿಕೆ ಕೃಷಿಗೆ ಮಾರಕವಾಗಿರುವ ಈ ರೋಗಗಳು ಅಡಿಕೆ ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ನಿಜವಾಗಿ ಹೇಳುವುದಾದರೆ ಈ ರೋಗಗಳು ಕೇವಲ ಅಡಿಕೆ ಕೃಷಿಯ ಮೇಲಷ್ಟೇ ದಾಳಿ ಮಾಡುತ್ತಿಲ್ಲ, ಬದಲಾಗಿ ಕೃಷಿಕರ ಅಥವಾ ಅಡಿಕೆ ಬೆಳೆಗಾರರ ಬದುಕಿನ ಮೇಲೆ, ಅವರ ಹಾಗೂ ಅವರ ಕುಟುಂಬದ ಭವಿಷ್ಯದ ಮೇಲೆ ದಾಳಿ ಮಾಡುತ್ತಿವೆ. ಏಕೆಂದರೆ ನಾನು ಆಗಲೇ ಹೇಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಕರಾವಳಿ ಕರ್ನಾಟಕ ಹಾಗೂ ಮಲೆನಾಡು ಭಾಗದ ಎಲ್ಲಾ ಕೃಷಿಕರೂ ಕೂಡ ತಲೆತಲಾಂತರಗಳಿಂದ ಈ ಅಡಿಕೆ ಕೃಷಿಯನ್ನೇ ನಂಬಿಕೊಂಡು ಬಂದವರು, ಹಾಗೂ ಇದು ಅವರ ಪ್ರಧಾನ ಬೆಳೆಯಾಗಿದ್ದು, ಅವರ ಬದುಕು, ಭವಿಷ್ಯ, ಆದಾಯದ ಮೂಲ ಎಲ್ಲವೂ ಕೂಡ ಈ ಅಡಿಕೆ ಕೃಷಿಯೇ ಆಗಿದೆ. ಈಗ ನಮ್ಮ ಸುಳ್ಯ ತಾಲೂಕನ್ನೇ ಉದಾಹರಣೆಗೆ ತೆಗೆದುಕೊಂಡು ಹೇಳುವುದಾದರೆ ಈ ಕೊಳೆರೋಗ, ಹಳದಿ ರೋಗ, ಎಲೆಚುಕ್ಕೆ ರೋಗ ಹಾಗೂ ನುಸಿರೋಗಗಳಿಂದಾಗಿ ನಮ್ಮ ಸುಳ್ಯ ತಾಲೂಕಿನ ಬಹಳಷ್ಟು ಕೃಷಿಕರ ತೋಟಗಳು ಸಂಪೂರ್ಣ ನಾಶವಾಗಿವೆ. ಆದರೆ ಈ ರೋಗಗಳ ಪ್ರಕೋಪ ಮುಂದುವರಿದು ಇದೀಗ ತಾಲೂಕಿನ ಪ್ರತಿಯೊಬ್ಬರ ಅಡಿಕೆ ತೋಟಗಳಿಗೂ ವ್ಯಾಪಿಸುತ್ತಿವೆ, ಈಗೀಗ ನಿಧಾನವಾಗಿ ಎಲ್ಲಾ ಅಡಿಕೆ ತೋಟಗಳಲ್ಲಿ ಈ ರೋಗಗಳ ಲಕ್ಷಣಗಳು ಕಾಣಿಸತೊಡಗಿವೆ. ಈ ರೀತಿ ದಿನದಿಂದ ದಿನಕ್ಕೆ ಅಡಿಕೆ ಕೃಷಿ ನಾಶವಾಗುತ್ತಾ ಹೋದರೆ ಭವಿಷ್ಯದಲ್ಲಿ ಅಡಿಕೆ ಬೆಳೆಗಾರರ ಬದುಕಿನ ಪರಿಸ್ಥಿತಿ ಏನು ಎಂಬುವುದನ್ನು ನಾವು-ನೀವೆಲ್ಲರೂ ಇಂದು ಯೋಚಿಸಬೇಕಾಗಿದೆ. ರೋಗಗಳು ಬರುವ ಪ್ರಾರಂಭದಲ್ಲೇ ನಾವುಗಳು ಒಟ್ಟಾಗಿ ಏನಾದರೂ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು ಮುಂದಡಿ ಇಡಬೇಕಾಗಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ, ಈಗ ಇರುವ ಕೃಷಿ ತೋಟಗಳನ್ನಾದರೂ ಉಳಿಸಿಕೊಳ್ಳುವ ಸಲುವಾಗಿ ನಾವು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಒತ್ತಡವನ್ನು ಹಾಕುವ ಮೂಲಕ ನಮ್ಮೆಲ್ಲರ ಜೀವಾಳವಾಗಿರುವ ಈ ಅಡಿಕೆ ಕೃಷಿಯನ್ನು ನಾಶಪಡಿಸುತ್ತಿರುವಂತಹ ಕೊಳೆರೋಗ, ಹಳದಿ ರೋಗ, ಎಲೆಚುಕ್ಕೆ ರೋಗ ಹಾಗೂ ನುಸಿರೋಗ ಸೇರಿದಂತೆ ಎಲ್ಲಾ ರೀತಿಯ ಮಾರಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಆ ರೋಗಗಳನ್ನು ಹರಡುವ ಕೀಟಗಳನ್ನು ಅಥವಾ ಶಿಲೀಂಧ್ರಗಳನ್ನು ನಾಶಪಡಿಸುವ, ಈ ರೋಗಗಳಿಗೆ ಶಾಶ್ವತ ಮುಕ್ತಿ ನೀಡುವಂತಹ ಔಷಧಿಗಳನ್ನು ಅಥವಾ ಇನ್ನೆನಾದರೂ ಪರಿಹಾರೋಪಾಯಗಳನ್ನು ಪಡೆದುಕೊಳ್ಳಬೇಕು. ಏಕೆಂದರೆ ಈ ಜಗತ್ತಿನಲ್ಲಿ ಪರಿಹಾರವಾಗದ ಸಮಸ್ಯೆಗಳೇ ಇಲ್ಲ, ಪ್ರತಿಯೊಂದು ಸಮಸ್ಯೆಗಳಿಗೂ ಕೂಡ ಏನಾದರೂ ಒಂದು ಪರಿಹಾರ ಇದ್ದೇ ಇರುತ್ತದೆ. ಅದೇ ರೀತಿ ಈ ಅಡಿಕೆ ಕೃಷಿಗೆ ಹಿಡಿದಿರುವ ಈ ಮಾರಕ ರೋಗಗಳಿಗೂ ಕೂಡ ಏನಾದರೂ ಒಂದು ಪರಿಹಾರ ಇದ್ದೇ ಇರುತ್ತದೆ. ಬುದ್ಧಿಜೀವಿಗಳಾದ ನಾವುಗಳು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಅಲ್ಲವೇ…!?
ಕೊನೆಯಲ್ಲಿ ಒಂದು ಮಾತು “ಅದು ಯಾವುದೇ ಬೆಳೆ ಆಗಿರಲಿ ಉದಾಹರಣೆಗೆ ಅದು ಅಡಿಕೆ ಆಗಿರಲಿ, ತೆಂಗು ಆಗಿರಲಿ, ರಬ್ಬರ್ ಆಗಿರಲಿ, ಭತ್ತ ಆಗಿರಲಿ, ಜೋಳ ಅಥವಾ ರಾಗಿ ಹೀಗೆ ಯಾವುದೇ ಬೆಳೆ ಅಥವಾ ಯಾವುದೇ ಕೃಷಿ ಆಗಿದ್ದರೂ ಕೂಡ ಅದನ್ನು ಬೆಳೆಯುವ ಪ್ರತಿಯೊಬ್ಬ ಕೃಷಿಕನೂ ಕೂಡ ಹಗಲು-ರಾತ್ರಿ ಕಷ್ಟಪಟ್ಟು, ಹೊಟ್ಟೆ-ಬಟ್ಟೆ ಕಟ್ಟಿ, ಸಾಲ-ಸೋಲ ಮಾಡಿ ಗಿಡಗಳನ್ನು ಅಥವಾ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ತನ್ನ ಬಳಿಯಿರುವ ಒಂದಿಷ್ಟು ಜಮೀನಿನಲ್ಲಿ ಬೆಳೆ ಬೆಳೆದು ವರ್ಷಗಳ ಕಾಲ ಅದನ್ನು ಆರೈಕೆ ಮಾಡಿ ತನ್ನಲ್ಲಿರುವ ಸಮಯ, ಹಣ ಎಲ್ಲವನ್ನೂ ಅದಕ್ಕಾಗಿ ವ್ಯಯಿಸಿ ತನ್ನ ಸ್ವಂತ ಮಕ್ಕಳಂತೆ ಆ ಬೆಳೆಗಳನ್ನು ಪೋಷಿಸಿ ಫಸಲಿಗಾಗಿ ಕಾಯುತ್ತಾನೆ. ಕೊನೆಗೂ ಆ ಬೆಳೆಯ ಫಸಲು ಇನ್ನೇನು ಕೈಗೆ ಬಂತು, ಆತನ ಪರಿಶ್ರಮಕ್ಕೆ ಫಲ ದೊರಕಿತು ಅನ್ನುವಷ್ಟರಲ್ಲಿ ‘ಕುಂಬಾರನಿಗೆ ವರುಷ-ದೊಣ್ಣೆಗೆ ನಿಮಿಷ’ ಎಂಬಂತೆ ಈ ರೀತಿಯ ಹಲವು ರೋಗಗಳು, ಶಿಲೀಂಧ್ರಗಳು ಬಂದು ಆತ ಬೆಳೆದ ಬೆಳೆಗಳ ಮೇಲೆ ದಾಳಿ ನಡೆಸಿ ಆ ಬೆಳೆಯನ್ನು ಸಂಪೂರ್ಣ ನಾಶಮಾಡಿಬಿಡುತ್ತವೆ. ಆದರೆ ವಾಸ್ತವ ಏನೆಂದರೆ ಇಲ್ಲಿ ಆತ ಬೆಳೆದ ಬೆಳೆಯಷ್ಟೇ ನಾಶವಾಗಿರುವುದಿಲ್ಲ, ಬದಲಾಗಿ ಆ ಬೆಳೆಯನ್ನು ಬೆಳೆಯಲು ಆತ ಪಟ್ಟ ಪರಿಶ್ರಮ, ಆ ಬೆಳೆಯಿಂದ ಬರುವಂತಹ ಫಸಲನ್ನು ನಂಬಿ ಆತ ತನ್ನ ಕುಟುಂಬದ ಬಗ್ಗೆ ಕಟ್ಟಿದ್ದ ಕನಸುಗಳು, ಭವಿಷ್ಯದ ಬದುಕಿನ ಬಗ್ಗೆ ಆತ ಯೋಚಿಸಿದ್ದ ಯೋಚನೆಗಳು ಎಲ್ಲವೂ ಕೂಡ ನಾಶವಾಗುವ ಹಂತಕ್ಕೆ ಬಂದು ತಲುಪಿರುತ್ತವೆ…”
ಆದ್ದರಿಂದ ಸರ್ಕಾರಗಳು ಹಾಗೂ ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಂಟಿಯಾಗಿ ಕೃಷಿಕರೊಡಗೂಡಿ ಅಡಿಕೆ ಕೃಷಿಗೆ ಹಿಡಿದಿರುವ ಈ ಮಾರಕ ರೋಗಗಳಾದ ಕೊಳೆರೋಗ, ಹಳದಿ ರೋಗ, ಎಲೆಚುಕ್ಕೆ ರೋಗ ಹಾಗೂ ನುಸಿರೋಗ ಸೇರಿದಂತೆ ಎಲ್ಲಾ ರೀತಿಯ ರೋಗಗಳನ್ನು ಹಾಗೂ ಆ ರೋಗಗಳನ್ನು ಹರಡುವಂತಹ ಕೀಟಗಳನ್ನು ಅಥವಾ ಶಿಲೀಂಧ್ರಗಳನ್ನು ಶಾಶ್ವತವಾಗಿ ನಾಶಪಡಿಸುವ ಔಷಧಿಗಳನ್ನು ಅಥವಾ ಶಾಶ್ವತ ಪರಿಹಾರೋಪಾಯಗಳನ್ನು ಆದಷ್ಟು ಬೇಗ ಕಂಡುಕೊಂಡು ಅಡಿಕೆ ಬೆಳೆಯನ್ನು ರಕ್ಷಿಸುವುದರೊಂದಿಗೆ ಅಡಿಕೆ ಬೆಳೆಗಾರರ ಭವಿಷ್ಯದ ಬದುಕನ್ನು ಕೂಡ ರಕ್ಷಿಸಬೇಕಾಗಿ ನಾನು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading