Ad Widget

ಪ್ರಭಾಕರ ಶಿಶಿಲರು ಬರೆದ ವಿಶಿಷ್ಟ ಕತೆಗಳು ಪುಸ್ತಕದ ವಿಮರ್ಷೆ

ಕಳೆದ ಫೆಬ್ರವರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿ “ಪ್ರಭಾಕರ ಶಿಶಿಲರ ವಿಶಿಷ್ಟ ಕತೆಗಳು”. ಇದು ಶಿಶಿಲರ ಆಯ್ದ ಕತೆಗಳ ಸಂಪಾದಿತ ಕೃತಿ. ಸಂಪಾದಕರು ಶಿಶಿಲ ಅಭಿಮಾನಿ ಕನ್ನಡ ಪ್ರಾಧ್ಯಾಪಕರಾದ ಡಾ ಎಂ.ಪಿ. ಶ್ರೀನಾಥ್. ಇವರು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು.
ರಾವು ಕೊರುಂಗು, ಅಲಿಮಾಳ ಆಡು, ಕರಾಚಿ ಕಾರಣೋರು, ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು, ಕಾಫಿರ್ ಕಾಸೀಮನ ಕಥಾ ಪ್ರಸಂಗ, CNN ಕಂಪ್ಯೂಟರ್ ಅಷ್ಟಮಂಗಲ, ಗುಜರಿ ಅದ್ದಿಲಿಚ್ಚನ ಜೀಹಾದಿಯು, ಬಾರಣೆ, ಬೆಟ್ಟದಾ ಮೇಲೋಂದು, ಬ್ರಿಟನ್ನಿನ ಬಂಡುಕೋರ ಹೀಗೆ ಈ ಕೃತಿಯಲ್ಲಿ ಒಟ್ಟು ಹತ್ತು ಆಯ್ದ ಸಣ್ಣ ಕತೆಗಳಿವೆ. ಎಲ್ಲಾ ಕತೆಗಳು ಶಿಶಿಲರ ಕತಾ ವೈಶಿಷ್ಠ್ಯದಿಂದ ಕೂಡಿರುವಂತಹ ಕತೆಗಳು. ನನ್ನ ವಿದ್ಯಾ ಗುರುಗಳಾದ ಶಿಶಿಲರು ಸ್ವಭಾವತಃ ವೈಚಾರಿಕ ವೈಜ್ಞಾನಿಕ ಮನೋವೃತ್ತಿಯವರು. ಮತ್ತು ಅವರದ್ದು ಪ್ರಗತಿಪರ ಚಿಂತನೆ. ಇಲ್ಲಿ ಬರುವ ಹತ್ತು ಕತೆಗಳು ಬದುಕಿನ ಸಂಕೀರ್ಣತೆ, ಸೂಕ್ಷ್ಮತೆ, ಆಕ್ರೋಶ, ವಿಷಾದ, ಸಾಮಾಜಿಕ ಅಸಮಾನತೆ, ಇದಕ್ಕೆ ಪ್ರತಿರೋಧಗಳನ್ನು ಪ್ರತಿಬಿಂಬಿಸುವಂತಹ ಕತೆಗಳು. ಇದರೊಂದಿಗೆ ಕತೆಗಳಲ್ಲಿ ನೈಜ ಬದುಕಿನ ಜೀವನ ಪ್ರೀತಿ, ಬಾಂಧವ್ಯ, ಸಂಸ್ಕೃತಿ, ಮಾನವ ಸಹಜ ಸ್ವಭಾವಗಳು ವಿಕೃತಿಗಳು ಮೇಳೈಸುತ್ತವೆ.
ಈ ಸಂಪಾದಿತ ಕೃತಿಯಲ್ಲಿರುವ ಹತ್ತೂ ಕತೆಗಳು ಹತ್ತು ಬಗೆಯ ವಿಭಿನ್ನ ಕತಾವಸ್ತುಗಳನ್ನು ಒಳಗೊಂಡಿರುತ್ತವೆ. ಪ್ರತಿಯೊಂದೂ ಕತೆಯೂ ಬದುಕು, ಬದುಕನ್ನು ಆಪ್ತವಾಗಿ ಪ್ರೀತಿಸುವ ಚೈತನ್ಯದೊಂದಿಗೆ, ಸಂಪ್ರದಾಯ, ಸಂಸ್ಕೃತಿ, ಪರಿಸರ, ಪ್ರಾದೇಶಿಕತೆ, ಕೃಷಿ, ಧಾರ್ಮಿಕತೆ ಇವುಗಳೆಲ್ಲದರ ಸೊಗಸು ಮತ್ತು ವೈರುಧ್ಯಗಳನ್ನು ಕಟ್ಟಿಕೊಡುತ್ತವೆ. ಇವುಗಳಲ್ಲಿ ಮಾನವೀಯ ಅಂತರಂಗವನ್ನೂ ಕಾಣುತ್ತೇವೆ ಹಾಗೂ ಮಾನವನ ಕ್ರೌರ್ಯವೂ ಅನಾವರಣಗೊಳ್ಳುತ್ತದೆ.
ಕಾಲನ ಹೊಡೆತಕ್ಕೆ ಸಿಕ್ಕಿ ಗ್ರಾಮಗಳಲ್ಲಿ ಉಂಟಾಗುವ ಪ್ರಾಕೃತಿಕ ಹಾಗೂ ಸಾಂಸ್ಕೖತಿಕ ಪಲ್ಲಟಗಳು, ಅದರಿಂದುಂಟಾಗುವ ತಲ್ಲಣಗಳನ್ನು ಇಲ್ಲಿನ ಕತೆಗಳಲ್ಲಿ ಕಾಣಬಹುದು. ರಾವು ಕೊರುಂಗು ಕತೆಯಲ್ಲಿ ಗದ್ದೆ ಕೃಷಿಯನ್ನೇ ಅವಲಂಬಿಸಿದ ಪುಟ್ಟ ಸಂಸಾರ. ಕೃಷಿಯಲ್ಲಿನ ಸ್ಥಿತ್ಯಂತರಗಳಿಂದ ಬೇಸತ್ತ ಕುಟುಂಬದ ಯಜಮಾನ ಹುಕ್ರ ಮತ್ತು ಯಜಮಾನಿ ಪೂವಮ್ಮ ತಲ್ಲಣಗೊಳ್ಳುತ್ತಾರೆ. ಕೆಲಸಕ್ಕೆ ಜನ ಸಿಗುತ್ತಿಲ್ಲ. ಎಷ್ಟು ಗೇಯ್ದರೂ ತಲೆಗೆಳೆದರೆ ಕಾಲಿಗಿಲ್ಲ, ಕಾಲಿಗೆಳೆದರೆ ತಲೆಗಿಲ್ಲ ಎಂಬಂತ ಪರಿಸ್ಥಿತಿ. ಮನೆಗೆ ನಾಲ್ಕು ಓಡು ಹಾಕಿಲಸಲು ಆಗುತ್ತಿಲ್ಲ; ಮೈ ಮೇಲೆ ಅದೇ ಪರಿಕಟ್ಟ್ ಸೀರೆ, ಕತ್ತಿನಲ್ಲಿರುವ ಕರಿಮಣಿಗೆ ಒಪ್ಪಕೊಡಲೂ ಆಗುತ್ತಿಲ್ಲ. ಇರುವ ಒಬ್ಬ ಮಗನಿಗೆ ಕಾಲಿಗೆ ಚಪ್ಪಲಿಗೂ ಯೋಗವಿಲ್ಲ. ಇದರಿಂದ ರೋಸಿ ಹೋದ ಅವರು ಈ ಬೇಸಾಯವೇ ಬೇಡ, ಈ ಜಾಗವೂ ಬೇಡ, ಬೇರೆ ಊರಿನಲ್ಲಿ ಹೋಗಿ ನೆಲಸೋಣ ಎಂಬ ಮಾತುಕತೆ ನಡೆಯುತ್ತದೆ.
ಈ ಮಾತುಕತೆ ಹುಕ್ರ – ಪೂವಮ್ಮನ ಏಕೈಕ ಪುತ್ರ ಪುಟ್ಟಣನ ಕಿವಿಗೆ ಬೀಳುತ್ತದೆ. ತನ್ನ ಮನೆ, ಗದ್ದೆ, ನದಿ, ನೀರು, ಹಕ್ಕಿ, ದನ, ಪರಿಸರ ಇವುಗಳನ್ನೆಲ್ಲ ಬಿಟ್ಟು ಹೋಗಬೇಕಾಗುತ್ತದೆ ಎಂಬುದಾಗಿ ಪುಟ್ಟಣ್ಣನಿಗೆ  ಉಂಟಾಗುವ ತಳಮಳ ಸಂಕಟಗಳನ್ನು ಕತೆ ವಿವರಿಸುತ್ತಾ ಹೋಗುತ್ತದೆ. ಹೀಗೆ ಹತ್ತು ಕತೆಗಳು ಹತ್ತು ನಮೂನೆಯಲ್ಲಿ ಭಿನ್ನಭಿನ್ನ ಕಥಾವಸ್ತುಗಳ ಸುತ್ತ ಗಿರಕಿ ಹೊಡೆಯುತ್ತ ನವರಸಗಳನ್ನು ಓದುಗರಿಗೆ ಉಣಬಡಿಸುತ್ತದೆ.
ಕತೆಯಲ್ಲಿ ಬರುವ ಪರಿಸರಗಳು, ಪರಿಸರಕ್ಕೆ ಸಂಬಂಧಿಸಿದ ಪಾತ್ರಗಳು, ಹಾಗೆಯೇ ಪ್ರಾದೇಶಕತೆಯ ಸೊಗಡಿನ ಭಾಷೆ ಕತೆಯ ಅಂದವನ್ನು ಹೆಚ್ಚಿಸಿವೆ. ಈ ಕತಾ ಸಂಕಲನವು ಓದುಗನ ಪ್ರಜ್ಞಾಕೋಶದಲ್ಲಿ ಜಾಗಪಡೆಯುವುದರಲ್ಲಿ ಸಂಶಯವಿಲ್ಲ.
144 ಪುಟಗಳ, 150 ರೂಪಾಯಿ ಬೆಲೆಯ ಈ ಪುಸ್ತಕವನ್ನು ಕಾರ್ಕಳ ಜೋಡುರಸ್ತೆಯ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸಿದೆ. ಈ ಪುಸ್ತಕವನ್ನು ಪ್ರಗತಿ ಪಂಥವನ್ನು ಸ್ಥಾಪಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಕ್ರಾಂತಿ ಉಂಟು ಮಾಡಿದ, ಈಗ ಬದುಕಿದ್ದರೆ ನೂರು ತುಂಬಿರುತ್ತಿದ್ದ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ನಿರಂಜನ (ಕುಲ್ಕುಂದ ಶಿವರಾವ್) ಇವರ ಪುಣ್ಯ ಸ್ಮರಣೆಗೆ ಅರ್ಪಿಸಲಾಗಿದೆ.✍️ಚಂದ್ರಾವತಿ ಬಡ್ಡಡ್ಕ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading