
ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಇನ್ನೇನು ಕೆಲವೇ ದಿನಗಳಲ್ಲಿ ನದಿ-ಜಲಪಾತ, ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯಲು ಪ್ರಾರಂಭಿಸುತ್ತವೆ.
ಮನುಷ್ಯ ಸೇರಿದಂತೆ ಪ್ರಾಣಿ-ಪಕ್ಷಿ, ಜೀವಸಂಕುಲದ ಉಳಿವಿಗೆ ಮಳೆ ಅತ್ಯಗತ್ಯ. ಆದರೆ ಮನುಷ್ಯರಾದ ನಾವುಗಳು ಇಂದು ನಮ್ಮ ಉಳಿವಿಗಾಗಿ ಸುರಿಯುತ್ತಿರುವ ಈ ಮಳೆಯಲ್ಲಿ ಹುಚ್ಚಾಟ ಮಾಡಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು ತಂದುಕೊಳ್ಳುವ ಕೆಲಸಗಳನ್ನು ಮಾಡುತ್ತಿದ್ದೇವೆ. ಸೋಷಿಯಲ್ ಮೀಡಿಯಾ ಲೈಕು, ಶೇರುಗಳ ಹುಚ್ಚಾಟದಲ್ಲಿ ಹಾಗೂ ಪ್ರವಾಸದ ಹೆಸರಿನಲ್ಲಿ ನಾವುಗಳು ಈ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುತ್ತಿರುವ ನದಿ-ಜಲಪಾತಗಳಲ್ಲಿ ಮೋಜು-ಮಸ್ತಿ ಮಾಡುತ್ತಾ ಒಂದು ಕ್ಷಣದ ಖುಷಿಗಾಗಿ ನಮ್ಮ ಪ್ರಾಣಕ್ಕೆ ನಾವೇ ಕುತ್ತು ತಂದುಕೊಳ್ಳುತ್ತಿದ್ದೇವೆ.
ಈ ಭೂಮಿಯಲ್ಲಿ ಯಾರೂ ಕೂಡ ಶಾಶ್ವತವಲ್ಲ, ಸಾವು ಯಾವತ್ತೂ ಹೇಳಿ ಕೇಳಿ ಬರುವುದಿಲ್ಲ. ಕಾಲನ ಕರೆ ಬಂದಾಗ ಪ್ರತಿಯೊಬ್ಬರೂ ಕೂಡ ಈ ಭೂಮಿಯನ್ನು ಬಿಟ್ಟು ಹೋರಡಲೇಬೇಕು. ಹಾಗೆಂದು ಬದುಕಿರುವಷ್ಟು ದಿನ ಖುಷಿಯಿಂದ-ಸಂತೋಷದಿಂದ ಬದುಕುವುದು ಬಿಟ್ಟು ಒಂದು ಕ್ಷಣದ ಖುಷಿಗಾಗಿ ತುಂಬಿ ಹರಿಯುತ್ತಿರುವ ನದಿ-ಜಲಪಾತಗಳ ಬಳಿ ಅಪಾಯವಿದೆ ಎಂದು ತಿಳಿದಿದ್ದರೂ ಕೂಡ ನಾವುಗಳು ನಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಕೆಲಸಗಳನ್ನು ಮಾಡುವುದು ಎಷ್ಟು ಸರಿ…? ಜೋರಾಗಿ ಮಳೆ ಸುರಿಯುತ್ತಿರುವಾಗ ನದಿ-ಹಳ್ಳ, ಜಲಪಾತಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುತ್ತವೆ ಎಂದು ತಿಳಿದಿದ್ದರೂ ಕೂಡ ಪ್ರಾಣ ಕಳೆದುಕೊಳ್ಳುವ ಮಟ್ಟಿಗೆ ಹುಚ್ಚಾಟ ಮಾಡುವುದಾದರೂ ಏಕೆ?
ನಾವೆಲ್ಲರೂ ಕೂಡ ಮನೆಯಿಂದ ಹೊರಗೆ ಹೊರಟಾಗ ಮತ್ತೆ ಮನೆ ಸೇರುತ್ತೇವೆ ಎನ್ನುವ ನಂಬಿಕೆಯಿಂದಲೇ ಹೊರಡುತ್ತೇವೆ. ಕೆಲವೊಮ್ಮೆ ನಮ್ಮ ಗ್ರಹಚಾರ ಕೆಟ್ಟಾಗ ನಮಗೆ ಏನಾದರೂ ಅಪಾಯ ಸಂಭವಿಸಬಹುದು. ಆದರೆ ಯಾರೂ ಕೂಡ ತಿಳಿದೂ ತಿಳಿದೂ ಅಪಾಯವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವುದಿಲ್ಲ, ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುವುದಿಲ್ಲ. ಮಳೆಗಾಲದ ಸಂದರ್ಭದಲ್ಲಿ ಒಂದು ಸ್ಥಳದಲ್ಲಿ ನೀರಿನ ಹರಿವು ಹೆಚ್ಚಿದೆ ಎಂದು ತಿಳಿದಿದ್ದರೂ ಕೂಡ ನಾವು ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದೇವೆ ಎಂದರೆ ಅದು ಹುಚ್ಚಾಟವಲ್ಲದೇ ಮತ್ತೇನೂ ಅಲ್ಲ…!
ತುಂಬಿ ಹರಿಯುತ್ತಿರುವ ನದಿ, ಜಲಪಾತಗಳಂಥಹ ಅಪಾಯಕಾರಿ ಸ್ಥಳಗಳಲ್ಲಿ ಮೋಜು-ಮಸ್ತಿ ಅಥವಾ ಸೋಷಿಯಲ್ ಮೀಡಿಯಾ ಲೈಕು, ಶೇರುಗಳಿಗೋಸ್ಕರ ವಿಡಿಯೋಗಳನ್ನು ಮಾಡುವ ಮುಂಚೆ ಒಂದು ಮಾತು ನೆನಪಿರಲಿ “ಪ್ರತೀದಿನ ನಾವು ಮನೆಯಿಂದ ಹೊರಗೆ ಹೊರಟು ಮತ್ತೆ ಹಿಂತಿರುಗಿ ಮನೆ ಸೇರುವವರೆಗೂ ನಮ್ಮ ಮನೆಯವರು ನಮ್ಮ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಒಂದು ವೇಳೆ ನಮ್ಮ ಜೀವಕ್ಕೆ ಏನಾದರೂ ತೊಂದರೆ ಆದರೆ ಅವರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.” ಆದ್ದರಿಂದ ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ ಎಚ್ಚರದಿಂದಿರೋಣ. ಈ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ನದಿ, ಜಲಪಾತಗಳಂಥಹ ಅಪಾಯಕಾರಿ ಸ್ಥಳಗಳಿಗೆ ಹೋಗದಿರೋಣ, ಒಂದು ಕ್ಷಣದ ಖುಷಿಗಾಗಿ ನಮ್ಮ ಅಮೂಲ್ಯವಾದ ಪ್ರಾಣವನ್ನು ಅಪಾಯಕ್ಕೆ ಒಡ್ಡದಿರೋಣ…✍️ಉಲ್ಲಾಸ್ ಕಜ್ಜೋಡಿ
