
ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 50ನೇ ವಾರ್ಷಿಕ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದು, ಈ ವರ್ಷದ ‘ಆರ್ಯಭಟ’ ಪ್ರಶಸ್ತಿಯನ್ನು ಘೋಷಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ವರ್ಷ ಆರ್ಯಭಟ ಸುವರ್ಣ ಸಂಭ್ರಮ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಳೆದ ಮೂರು ದಶಕಗಳಿಂದ ನೃತ್ಯ ಕಲಾವಿದರಾಗಿ, ನಿರ್ದೇಶಕರಾಗಿ, ವಸ್ತ್ರ ವಿನ್ಯಾಸ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಿರಂತರವಾಗಿ ರಂಗಸೇವೆ ಸಲ್ಲಿಸಿತ್ತಾ ಬಂದಿರುವ ಬೆಳ್ಳಾರೆಯ ಕಲಾಮಂದಿರ್ ನಿರ್ದೇಶಕ ಪ್ರಮೋದ್ ಕುಮಾರ್ ರೈ ಅವರು ಈ ಸಲದ ಅಂತರಾಷ್ಟ್ರೀಯ ‘ಆರ್ಯಭಟ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಲಾಮಂದಿರ್ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ನಿರಂತರವಾಗಿ ನೃತ್ಯ ನಿರ್ದೇಶಿಸುತ್ತಾ ಬಂದಿರುವ ಪ್ರಮೋದ್ ರೈಯವರು ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಡುತ್ತಾ ಬಂದಿದ್ದಾರೆ. ಇವರ ನಿರ್ದೇಶನದ ನೃತ್ಯ ತಂಡವು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವುದೂ ಮಾತ್ರವಲ್ಲದೆ 250ಕ್ಕೂ ಅಧಿಕ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ತನ್ನ ನಿರ್ದೇಶನದ ನೃತ್ಯ ತಂಡವನ್ನು ಕರೆದುಕೊಡು ಹೋಗಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇವರು ನೃತ್ಯ ನಿರ್ದೇಶನ ನೀಡಿದ ಹಾಗೂ ವಸ್ತ್ರ ವಿನ್ಯಾಸ ಮಾಡಿದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದ ನೃತ್ಯ ತಂಡ ಜಮ್ಮು ಕಾಶ್ಮೀರ ನೃತ್ಯ ಪ್ರದರ್ಶನ ನೀಡಿದ್ದಾರೆ. ಕೇರಳದ ಗುರುವಾಯೂರು, ಮಹಾರಾಷ್ಟ್ರದ ಪುಣೆ,ತಮಿಳುನಾಡಿನ ಕೊಯಮುತ್ತೂರಿನ ಮುರುಘ ದೇವಸ್ಥಾನ ಹೀಗೆ ಹೊರರಾಜ್ಯದಲ್ಲಿಯೂ ನೃತ್ಯ ಪ್ರದರ್ಶನ ನೀಡುವುದರ ಮೂಲಕ ಹಳ್ಳಿಯ ಪ್ರತಿಭೆಗಳನ್ನು ಗುರುತಿಸುವಂತೆ ಮಾಡಿದ್ದಾರೆ. ವಿದ್ಯಾರ್ಥಿ ದಿಶೆಯಿಂದಲೇ ನೃತ್ಯ ಪಟುವಾಗಿ ಬೆಳೆದ ಪ್ರಮೋದ್ ರೈ ಅವರು ಬಹುಮುಖ ಪ್ರತಿಭೆಯಾಗಿ ಮಿಂಚಿದವರು. ಕೆಲವು ಕನ್ನಡ ಚಲನಚಿತ್ರಗಳಲ್ಲೂ ಸಹ ನಟನಾಗಿ ಅಭಿನಯಿಸಿದ್ದಾರೆ. ಟಿವಿ ರಿಯಾಲಿಟಿ ಡಾನ್ಸ್ ಶೋಗಳಲ್ಲಿ ನೃತ್ಯ ಪ್ರದರ್ಶನ ನೀಡುವ ತಂಡಗಳಿಗೆ ನಿರ್ದೇಶನ ನೀಡಿರುವುದು ಮಾತ್ರವಲ್ಲದೆ ವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಇವರ ಕಲಾ ಸೇವೆಯ ಅವಿರತ ಶ್ರಮವನ್ನು ಗುರುತಿಸಿ ಬೆಂಗಳೂರಿನ ಆರ್ಯಭಟ ಸಂಸ್ಥೆ ಸುವರ್ಣ ಮಹೋತ್ಸವ ವರ್ಷದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಿದೆ.
