

“ಸಿಟ್ಟು” ಅಥವಾ “ಕೋಪ” ಎನ್ನುವುದು ಮನುಷ್ಯರಾದ ನಮ್ಮಲ್ಲಿರುವ ಸಹಜವಾದ ಗುಣ. ನಾವು ಅಂದುಕೊಂಡ ಕೆಲಸ ಕೈಗೂಡದಿದ್ದರೆ, ನಮ್ಮ ಬದುಕು ನಾವಂದುಕೊಂಡಂತೆ ನಡೆಯದಿದ್ದರೆ ಅಥವಾ ನಮ್ಮವರು ಯಾರಾದರೂ ನಮ್ಮ ಮನಸ್ಸಿಗೆ ನೋವುಂಟುಮಾಡಿದರೆ.. ಹೀಗೆ ಜೀವನದಲ್ಲಿ ನಮಗೆ ಹಲವಾರು ಕಾರಣಗಳಿಂದ ಹಲವಾರು ಸಂದರ್ಭಗಳಲ್ಲಿ ಈ “ಸಿಟ್ಟು” ಅಥವಾ “ಕೋಪ” ಬಂದೇ ಬರುತ್ತದೆ, ಅದು ಸ್ವಾಭಾವಿಕ.
ಆದರೆ “ನಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಸಮಸ್ಯೆಗಳೂ ಕೂಡ ನಾವು ಸಿಟ್ಟು ಮಾಡಿಕೊಂಡ ತಕ್ಷಣ, ನಾವು ಕೋಪದಿಂದ ಕೂಗಾಡಿದ ತಕ್ಷಣ ಕರಗಿ ಹೋಗುವುದಿಲ್ಲ ಅಥವಾ ದೂರವಾಗುವುದಿಲ್ಲ. ಬದಲಾಗಿ ನಾವು ನಮ್ಮೊಳಗಿನ ಆ ಸಿಟ್ಟು ಅಥವಾ ಕೋಪವನ್ನು ಹತೋಟಿಗೆ ತೆಗೆದುಕೊಂಡು ತಾಳ್ಮೆ ಹಾಗೂ ಸಂಯಮದಿಂದ ಯೋಚಿಸಿ ಮುಂದುವರಿದಾಗ ನಮ್ಮ ಬದುಕಿನಲ್ಲಿ ಇರುವಂತಹ ಅಥವಾ ಬರುವಂತಹ ಎಂತಹುದೇ ದೊಡ್ಡ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಕ್ಕೇ ಸಿಗುತ್ತದೆ.” ಹಾಗೆಂದು ನಾವು ಯಾವತ್ತೂ ಸಿಟ್ಟು ಅಥವಾ ಕೋಪ ಮಾಡಿಕೊಳ್ಳಲೇಬಾರದು ಎಂದು ನಾನು ಹೇಳುತ್ತಿಲ್ಲ, ಬದುಕಿನಲ್ಲಿ ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ ನಾವು ಸಿಟ್ಟು ಮಾಡಿಕೊಳ್ಳಲೇಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ “ನಮ್ಮ ಬದುಕಿನಲ್ಲಿ ಬರುವಂತಹ ಕೆಲವೊಂದು ಸಮಸ್ಯೆಗಳಿಗೆ ತಾಳ್ಮೆ ಹಾಗೂ ಸಂಯಮದಿಂದ ಪರಿಹಾರ ಸಿಕ್ಕಿದರೆ ಇನ್ನೂ ಕೆಲವೊಂದು ಸಮಸ್ಯೆಗಳಿಗೆ ಕೋಪ ಅಥವಾ ಸಿಟ್ಟಿನಿಂದ ಮಾತ್ರ ಪರಿಹಾರ ಸಿಗುತ್ತದೆ.”
ಆದ್ದರಿಂದ “ಜೀವನದಲ್ಲಿ ಪ್ರತಿಯೊಂದು ಸಂದರ್ಭಗಳಲ್ಲಿಯೂ, ಪ್ರತಿಯೊಂದು ವಿಷಯಗಳಿಗೂ ಸಿಟ್ಟು ಮಾಡಿಕೊಳ್ಳುವುದು ಒಳ್ಳೆಯದಲ್ಲ, ಅದು ಬುದ್ಧಿವಂತರ ಲಕ್ಷಣವೂ ಅಲ್ಲ. ಬದಲಾಗಿ ಯಾವ ಸಂದರ್ಭದಲ್ಲಿ ಸಿಟ್ಟು ಮಾಡಿಕೊಳ್ಳಬೇಕು, ಯಾವ ಸಂದರ್ಭದಲ್ಲಿ ತಾಳ್ಮೆಯಿಂದ ಮುಂದುವರಿಯಬೇಕು ಎಂಬುವುದನ್ನು ಅರಿತು ಬದುಕು ನಡೆಸುವುದೇ ನಿಜವಾದ ಬುದ್ಧಿವಂತಿಕೆ…”✍️ಉಲ್ಲಾಸ್ ಕಜ್ಜೋಡಿ