
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವುದನ್ನು ನಾವು ಸ್ವಾಗತಿಸುತ್ತೇವೆ, ಸರಕಾರವನ್ನು ಅಭಿನಂದಿಸುತ್ತೇವೆ ಎಂದು ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅಶೋಕ್ ಎಡಮಲೆ ತಿಳಿಸಿದರು.
ಮಾ.7ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಬನ್ನೂರಿನಲ್ಲಿ 4೦ ಎಕ್ರೆ ಸ್ಥಳ ಕಾದಿರಿಸುವ ಕಾರ್ಯ ಮಾಡಿದ್ದರು, ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಬಜೆಟ್‌ನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಘೋಷಿಸುವಂತೆ ಮಾಡಿದ್ದಾರೆ. ಇದರಲ್ಲಿ ಈ ಹಿಂದಿನಿಂದ ಮಾಡಲಾಗಿದ್ದ ಹೋರಾಟ ಸಮಿತಿಯ ಹೋರಾಟದ ಪಾತ್ರವೂ ಇದೆ. ಸುಳ್ಯದವರೂ ಹೋರಾಟಕ್ಕೆ ಕೈ ಜೋಡಿಸಿದ್ದರು. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಅಗತ್ಯವಾಗಿದ್ದು, ಜನಸಾಮಾನ್ಯರಿಗೆ ಪ್ರಯೋಜನವಾಗಲಿದೆ. ಆದಷ್ಟು ಶೀಘ್ರ ಮೆಡಿಕಲ್ ಕಾಲೇಜು ಪೂರ್ಣಪ್ರಮಾಣದಲ್ಲಿ ಆಗಬೇಕೆಂದ ಅವರು ಪುತ್ತೂರಿನಲ್ಲಿ ಆರಂಭವಾಗುವ ಸರಕಾರಿ ಮೆಡಿಕಲ್ ಕಾಲೇಜಿಗೆ ಕುಮಾರಿ ಸೌಜನ್ಯ ಮೆಡಿಕಲ್ ಕಾಲೇಜು ಎಂಬ ಹೆಸರಿಡಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ಪ್ರದೀಪ್ ಕುಮಾರ್ ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ವಾಗತಾರ್ಹ. ಆದರೆ ಬಜೆಟ್‌ನಲ್ಲಿ ಇಂತಿಷ್ಟು ಅನುದಾನ ಮೀಸಲಿಟ್ಟಿಲ್ಲ. ಅದನ್ನು ಶೀಘ್ರ ಮಾಡಬೇಕು. ಮೆಡಿಕಲ್ ಓದುವ ಬಡವರಿಗೆ, ಆರೋಗ್ಯಕ್ಕೆ ಇದು ಪೂರಕವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಳ್ಯಕೋಡಿ ಮಾಧವ ಗೌಡ, ವಸಂತ ಪೆಲ್ತಡ್ಕ, ದಿವಾಕರ ಪೈ ಮಜಿಗುಂಡಿ ಉಪಸ್ಥಿತರಿದ್ದರು.