
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿರುವ ಅರಂಬೂರು ಮನೆತನದ ಕುದ್ಕುಳಿ ಎಂಬಲ್ಲಿ ಶ್ರೀ ವಿಷ್ಣುಮೂರ್ತಿ ಶ್ರೀ ಧರ್ಮದೈವ ಹಾಗೂ ಶ್ರೀ ಕುಕ್ಕೆತ್ತಿಬಲ್ಲು ಸಪರಿವಾರ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ, ಶ್ರೀ ರುದ್ರ ಚಾಮುಂಡಿ, ಕುಕ್ಕೆತ್ತಿ ಬಲ್ಲು ಹಾಗೂ ಉಪದೈವಗಳ ನಡಾವಳಿ ನೇಮೋತ್ಸವ ಫೆ.22 ಹಾಗೂ 23 ರಂದು ನಡೆಯಿತು.

ಫೆ.22 ರಂದು ಬೆಳಿಗ್ಗೆ ಚಾವಡಿಯಲ್ಲಿ ಶ್ರೀ ವೆಂಕಟೇಶ ಶಾಸ್ತ್ರೀ ಹಾಗೂ ವಿಶ್ವಕೀರ್ತಿ ನೇತೃತ್ವದಲ್ಲಿ ಮಹಾಗಣಪತಿ ಹವನ ಪೂಜೆ ನಡೆಯಿತು. ನಂತರ ಉಗ್ರಾಣ ತುಂಬುವುದು ಜರುಗಿತು. ನಂತರ ತರವಾಡು ಮನೆಯಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಶ್ರೀ ವೆಂಕಟರಮಣ ದೇವರ ಹರಿಸೇವೆ ಪ್ರಸಾದ ವಿತರಣೆ ಹಾಗೂ ಚಾವಡಿಯಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಕೆಂಚರಾಯನ ಪೂಜೆ ಗುರುಕಾರ್ನೋರಿಗೆ ಅಗೆಲು ದೀಪಾರಾಧನೆ ಶ್ರೀ ದೈವಗಳ ನಡಾವಳಿಗೆ ಕೊಡುವುದು ತೊಡಂಬಿಲ್, ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಧರ್ಮದೈವದ ಉಪದೈವಗಳಾದ ಗುರುಕಾರ್ನೋರು ಸತ್ಯದೇವತೆ ವರ್ಣಾರ ಪಂಜುರ್ಲಿ ಕುಪ್ಪೆ ಪಂಜುರ್ಲಿ ಕೊರತಿ ದೈವಗಳ ಕೋಲ ಹಾಗೂ ಮಧ್ಯರಾತ್ರಿ ಶ್ರೀ ಪೊಟ್ಟನ್ ದೈವಗಳ ನೇಮೋತ್ಸವ ನಡೆಯಿತು.
ಫೆ.23 ರಂದು ಬೆಳಗ್ಗೆ ಶ್ರೀ ರಕ್ತೇಶ್ವರಿ ದೈವ, ಶ್ರೀ ಕುಕ್ಕೆತ್ತಿಬಲ್ಲು ದೈವಗಳ ಕೋಲ ಹಾಗೂ ಮದ್ಯಾಹ್ನ ಶ್ರೀ ವಿಷ್ಣುಮೂರ್ತಿ, ಶ್ರೀ ರುದ್ರ ಚಾಮುಂಡಿ, ಪಾಷಾಣ ಮೂರ್ತಿ ದೈವಗಳ ನೇಮೋತ್ಸವ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ರಕ್ತೇಶ್ವರಿ ಬಂಟ ಗುಳಿಗ ದೈವದ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು , ನೆಂಟರಿಷ್ಟರು ಬಂಧುಮಿತ್ರರು ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ದೈವ ದೇವರ ಪ್ರಸಾದ ಹಾಗೂ ಅನ್ನ ಪ್ರಸಾದ ಸ್ವೀಕರಿಸಿದರು.