ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ ಸ್ಥಳೀಯರು
ಹರಿಹರ ಪಳ್ಳತ್ತಡ್ಕ ಗ್ರಾಮದ ಪುಟ್ಟಣ್ಣ ಗೌಡ ಭೀಮಗುಳಿ ಎಂಬುವವರ ಮೇಲೆ ಬೀಡಾಡಿ ಹೋರಿಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಇಂದು(ಜ.09) ಸಂಜೆ ಹರಿಹರ ಪೇಟೆಯಲ್ಲಿ ನಡೆದಿದೆ.
ಪುಟ್ಟಣ್ಣ ಗೌಡ ರವರು ಅವರ ಮನೆಯ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಹೋರಿಯೊಂದು ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಪುಟ್ಟಣ್ಣ ಗೌಡರ ತಲೆ, ಸೊಂಟ ಹಾಗೂ ಪಕ್ಕೆಲುಬಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು, ಘಟನೆ ತಿಳಿದ ತಕ್ಷಣವೇ ಸ್ಪಂದಿಸಿದ ಸ್ಥಳೀಯರು ಗಾಯಾಳು ಪುಟ್ಟಣ್ಣ ಗೌಡ ರವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹರಿಹರ ಪಳ್ಳತ್ತಡ್ಕ ಪೇಟೆ ಸುತ್ತಮುತ್ತಲಿನ ಪರಿಸರದಲ್ಲಿ ಹೋರಿ ಹಾಗೂ ದನಗಳನ್ನು ತಂದು ಬಿಡಲಾಗುತ್ತದ್ದು, ಇವುಗಳು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಮೇಲೆ ಮುಖ್ಯವಾಗಿ ಶಾಲೆಗೆ ತೆರಳುವ ಮಕ್ಕಳ ಮೇಲೆ ದಾಳಿ ನಡೆಸುವ ಸಂಭವಗಳು ಹೆಚ್ಚಾಗಿವೆ. ಆದ್ದರಿಂದ ಸಂಬಂಧಪಟ್ಟ ಸ್ಥಳೀಯಾಡಳಿತ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಂಡು ಇನ್ನು ಮುಂದೆ ಈ ರೀತಿಯ ದುರ್ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)