ಭಯದಿಂದಲೇ ಬದುಕುತ್ತಿರುವ ಈ ಬದುಕಿನಲ್ಲಿ ನಾ ಭರವಸೆಯ ಹುಡುಕಿ ಹೊರಟಿರುವೆ, ಭಯವ ಬಿಟ್ಟರೆ ಮಾತ್ರ ಬದುಕಿನಲ್ಲಿ ಭರವಸೆಯು ಬರುವುದು ಎಂಬುವುದನ್ನು ನಾ ಅರಿತಿರುವೆ, ಆದರೂ ನಾ ಭರವಸೆಯ ಹುಡುಕಿ ಸಾಗುತ್ತಲೇ ಇರುವೆ, “ನನ್ನೊಳಗಿನ ಭಯಕ್ಕೆ ಬೆಂಕಿಯಿಕ್ಕುತಾ…”
ಪ್ರತಿಕ್ಷಣವೂ ಬದಲಾಗುತ್ತಿರುವ ಈ ಸ್ವಾರ್ಥ ತುಂಬಿದ ಮನುಷ್ಯರ ನಡುವೆ ನಾ ಮನುಷ್ಯತ್ವವ ಹುಡುಕಿ ಹೊರಟಿರುವೆ, ಮನುಷ್ಯರು ಬದಲಾದಂತೆ ಮನುಷ್ಯತ್ವವೂ ಬದಲಾಗುತ್ತದೆಯೇ? ಎಂಬ ಪ್ರಶ್ನೆಯಲ್ಲಿ ನಾ ಸಿಲುಕಿರುವೆ, ನಾನೂ ಕೂಡ ಮನುಷ್ಯನೇ ಎಂಬುವುದನ್ನು ನಾ ಅರಿತಿರುವೆ, ಆದರೂ ನಾ ಮನುಷ್ಯತ್ವವ ಹುಡುಕಿ ಸಾಗುತ್ತಲೇ ಇರುವೆ, “ನನ್ನೊಳಗಿನ ಸ್ವಾರ್ಥಕ್ಕೆ ಬೆಂಕಿಯಿಕ್ಕುತಾ…”
ಯಾರಿಗಾಗಿಯೂ ನಿಲ್ಲದೇ ತನ್ನ ಪಾಡಿಗೆ ತಾನು ಓಡುತ್ತಿರುವ ಈ ಸಮಯದ ಸಂತೆಯಲ್ಲಿ ನಾ ನನ್ನ ಸಮಯವ ಹುಡುಕಿ ಹೊರಟಿರುವೆ, ಹುಡುಕಿದರೆ ಸಮಯ ಸಿಗುವುದಿಲ್ಲ, ಶ್ರಮಪಟ್ಟರೆ ನನಗೂ ಒಂದು ದಿನ ಸಮಯ ಬಂದೇ ಬರುತ್ತದೆ ಎಂಬುವುದನ್ನು ನಾ ಅರಿತಿರುವೆ, ಆದರೂ ನಾ ನನ್ನ ಸಮಯವ ಹುಡುಕಿ ಸಾಗುತ್ತಲೇ ಇರುವೆ, “ನನ್ನೊಳಗಿನ ಆಲಸ್ಯಕ್ಕೆ ಬೆಂಕಿಯಿಕ್ಕುತಾ…”
ನೊಂದ ಮನಸಲ್ಲೇ ನಾ ನೆಮ್ಮದಿಯ ಹುಡುಕಿ ಹೊರಟಿರುವೆ, ನೆಮ್ಮದಿ ಸಿಗಬೇಕೆಂದರೆ ನನ್ನ ಮನದೊಳಗಿನ ನೋವುಗಳನ್ನು ಮರೆಯಬೇಕೆಂದು ನಾ ಅರಿತಿರುವೆ, ಆದರೂ ನಾ ನೆಮ್ಮದಿಯ ಹುಡುಕಿ ಸಾಗುತ್ತಲೇ ಇರುವೆ, “ನನ್ನೊಳಗಿನ ನೋವುಗಳಿಗೆ ಬೆಂಕಿಯಿಕ್ಕುತಾ…”✍️ಉಲ್ಲಾಸ್ ಕಜ್ಜೋಡಿ
- Tuesday
- January 7th, 2025