ಕಳೆದ ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಸುಳ್ಯ ಪೋಲಿಸರ ಜೊತೆಗೆ ಪೈಚಾರಿನ ಯುವಕರು ಸೇರಿಕೊಂಡು ಛಲ ಬಿಡದೆ ಹಗಲಿರುಳು ಹುಡುಕಾಟ ನಡೆಸಿ ಕೊನೆಗೂ ಕಳ್ಳನನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.
ನ 3೦ ರಂದು ನಡೆದಿದ್ದ ಹೊಟೇಲ್ ಕಳ್ಳತನದ ಬಳಿಕ ಪೋಲಿಸ್ ಅಧಿಕಾರಿಗಳ ಜೊತೆಗೆ ಪೈಚಾರ್ ಸ್ಥಳೀಯ ಯುವಕರ ತಂಡ ಈತನಕ ಪತ್ತೆಗಾಗಿ ಹಗಲು ರಾತ್ರಿ ಎನ್ನದೇ ಗುಂಡ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಲ್ಲುಗುಂಡಿ , ಗುತ್ತಿಗಾರು ಮುಂತಾದ ಕಡೆಗಳಿಗೆ ರಾತ್ರಿಯಿಡೀ ಪೋಲಿಸ್ ಅಧಿಕಾರಿಗಳಾದ ಪಿಎಸ್ ಐ ಸಂತೋಷ್ ಕುಮಾರ್ , ಸಿಬ್ಬಂದಿಗಳಾದ ಪ್ರಕಾಶ್ , ಅನುಕುಮಾರ್ , ಪೈಚಾರ್ ಯುವಕರ ತಂಡವಾದ ಬಶೀರ್ ಪೈಚಾರ್ , ರಿಫಾಯಿ , ನಝೀರ್ ,ಅಶ್ರಫ್ ಹಾಗೂ ಇತರರು ತೆರಳಿ ಕಳ್ಳನ ಪತ್ತೆಯಾಗದೇ ವಾಪಸ್ಸಾಗಿದ್ದರು.
ಇದಲ್ಲದೇ ಹೋಟೆಲ್ ಸಿಸಿ ಟಿವಿ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸಿ ಈತನನನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪ್ರಸಾರ ಪಡಿಸಿದ್ದರು ಅದರಂತೆ ಡಿ 2 ರ ಮಧ್ಯಾಹ್ನ ಸಾಮಾಜಿಕ ಜಾಲತಾಣಗಳಲ್ಲಿ ಕಂಡ ಚಿತ್ರದ ವ್ಯಕ್ತಿಯಂತೆ ಓರ್ವರಿಗೆ ಈ ಕಳ್ಳನನ್ನು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಕಂಡಿದ್ದು ಕೂಡಲೇ ಅಲ್ಲಿ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಮಾಹಿತಿ ನೀಡಿದ್ದು ತಕ್ಷಣ ಅಲ್ಲಿಗೆ ತೆರಳಿ ಕಳ್ಳನನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಇದೀಗ ಈತನನ್ನು ಸುಳ್ಯ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಪೈಚಾರ್ ಸ್ಥಳೀಯ ಯುವಕರು ಮತ್ತು ಪೋಲಿಸ್ ಅಧಿಕಾರಿಗಳ ಪರಿಶ್ರಮದಿಂದ ಇದೀಗ ಕಳ್ಳತನ ಆರೋಪಿಯನ್ನು ಪತ್ತೆ ಹಚ್ಚಿದ್ದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪುತ್ತೂರಿನಲ್ಲಿ ಪತ್ತೆಯಾಗುತ್ತಿದಂತೆ ಆತನನ್ನು ಸ್ಥಳೀಯರು ಸುಳ್ಯ ಪೋಲಿಸರ ಗಮನಕ್ಕೆ ತಂದು ಠಾಣೆಗೆ ಕರೆತರಲಾಯಿತು ಆತನ ವಿಚಾರಣೆ ನಡೆಸಿದ ಸಂಧರ್ಭದಲ್ಲಿ ಆತನು ಮಾನಸಿಕ ಅಸ್ವಸ್ಥನಾಗಿದ್ದು ಬೆಲೆಬಾಳುವ ದಾಖಲೆ ಪತ್ರಗಳು ಆತನ ಕೈಯಲ್ಲೆ ಇದ್ದು ಆತನು ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿಯಲ್ಲಿ ನುಗ್ಗಿದ್ದು ಅಲ್ಲದೇ ಸಿಸಿ ಟಿವಿ ಚಿತ್ರಗಳ ಆಧಾರದಲ್ಲಿ ಆತನನ್ನು ಪತ್ತೆ ಹಚ್ಚಲಾಗಿದ್ದು ವಿಚಾರಣೆ ನಡೆಸಿ ದೂರುದಾರರು ತಮ್ಮ ದಾಖಲೆ ಪತ್ರಗಳು ದೊರೆತ ಹಿನ್ನೆಲೆಯಲ್ಲಿ ದೂರನ್ನು ಹಿಂಪಡೆದು ಆತನನ್ನು ಸುಳ್ಯ ಪರಿಸರದಿಂದ ಹೊರ ಕಳುಹಿಸಿ ಕೊಡಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.