ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ವೈಭವದ ಲಕ್ಷದೀಪೋತ್ಸವ ನೆರವೇರಿತು. ಸಾಲು ಸಾಲು ಹಣತೆ ದೀಪಗಳ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ನಡೆಯಿತು. ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ನಡೆಯಿತು.
ಶ್ರೀ ದೇವಳದ ಅರ್ಚಕರು ಉತ್ಸವದ ವಿದಿ ವಿಧಾನ ನೆರವೇರಿಸಿದರು. ರಥಬೀದಿಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಶ್ರೀ ದೇವರ ಉತ್ಸವ ನೆರವೇರಿತು. ದೀಪಾಲಂಕಾರಗಳ ನಡುವೆ ಭಕ್ತರ ಶ್ರೀ ದೇವರ ಲಕ್ಷದೀಪೋತ್ಸವ ರಥೋತ್ಸವವು ನೆರವೇರಿತು. ಈ ಮೂಲಕ ಶ್ರೀ ದೇವರ ರಥಬೀದಿ ಉತ್ಸವ ಆರಂಭವಾಯಿತು.
ಬೆಳಗಿದ ಲಕ್ಷ ಹಣತೆ ದೀಪ :- ದೇವಳದ, ಸಾರ್ವಜನಿಕ ಭಕ್ತರ, ಸಂಘ ಸಂಸ್ಥೆಗಳ ಸಹಕಾರದಿಂದ ಲಕ್ಷ ಹಣತೆಗಳು ಬೆಳಗಿತು. ಇದು ಉತ್ಸವಕ್ಕೆ ವಿನೂತನ ಕಳೆ ನೀಡಿತು. ಶ್ರೀ ದೇವಳದ ಗೋಪುರದಿಂದ ಕಾಶಿಕಟ್ಟೆ ತನಕ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್ ರಸ್ತೆ, ಕಾಶಿಕಟ್ಟೆ ಸುತ್ತಲಿನ ಆವರಣ, ಗ್ರಾ.ಪಂ, ಪೋಲೀಸ್ ಠಾಣೆ, ಕಾಶಿಕಟ್ಟೆಯಿಂದ ಅಡ್ಡಬೀದಿ ವೃತ್ತದ ತನಕ ರಸ್ತೆಯ ಇಕ್ಕೆಲದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಕ್ಷೇತ್ರಾದ್ಯಂತ ಹಣತೆ ದೀಪ ಬೆಳಗಿತು. ಈ ಮೂಲಕ ಲಕ್ಷ ದೀಪೋತ್ಸವದಂದು ಲಕ್ಷ ಹಣತೆ ದೀಪ ಪ್ರಜ್ವಲಿಸಿತು.
ಮಹಾಪೂಜೆಯ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವವು ಆರಂಭವಾಯಿತು. ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ನಂತರ ಆಕರ್ಷಕ ಸಾಲುದೀಪಗಳ ನಡುವೆ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ಮತ್ತು ವಿವಿಧ ಸಂಗೀತ ವಾದ್ಯಗಳ ಸುತ್ತುಗಳು ನೆರವೇರಿತು. ಅಂತಿಮವಾಗಿ ಶ್ರೀ ದೇವರು ರಥಬೀದಿ ಪ್ರವೇಶಿಸಿದರು. ಚಂದ್ರಮಂಡಲ ರಥದಲ್ಲಿ ಆರೂಢರಾಗಿ ಪೂಜೆ ಸ್ವೀಕರಿಸಿದರು. ಬಳಿಕ ಶ್ರೀ ದೇವಳದಿಂದ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ ಆಲ್ಕಬೆ, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.
- Thursday
- December 5th, 2024