
ಕರ್ನಾಟಕದ ಮೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವ ವಿಜಯ ಗಳಿಸಿರುವ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಬಸ್ಸುನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮಾಜಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಕರ್ನಾಟಕ ವಿಧಾನಸಭೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿರುವುದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲಿನ ವಿಶ್ವಾಸದಿಂದ. ಬಿಜೆಪಿ, ಜೆಡಿಎಸ್ ಪಕ್ಷಗಳ ಸುಳ್ಳು ಆರೋಪಗಳ ಮೂಲಕ ರಾಜ್ಯ ಸರಕಾರದ ಮೇಲೆ ಸುಳ್ಳು ಹೇಳಿಕೆಯಲ್ಲಿ ಹುರುಳಿಲ್ಲ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ನೆಲಕಚ್ಚಿದೆ. ಅವರ ನಾಟಕದ ಕಣ್ಣೀರಿಗೆ ಜನತೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಮಾತನಾಡಿ 3ರಲ್ಲಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಗ್ಯಾರಂಟಿ ಯೋಜನೆಗಳು ಮತ್ತು ರಾಜ್ಯಸರಕಾರದ ಅಭಿವೃದ್ಧಿ ಯೋಜನೆಗಳಿಂದ ಆಗಿದೆ. ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಯವರು ಚಾರಿತ್ರಿಕ ವಿಜಯ ಗಳಿಸಿರುವುದು ಕಾಂಗ್ರೆಸ್ ಪಕ್ಷದ ಶಕ್ತಿ ಹೆಚ್ಚಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು, ವಿವಿಧ ಘಟಕಗಳ ಪದಾಧಿಕಾರಿಗಳು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ನಂತರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ , ಭವಾನಿಶಂಕರ್ ಕಲ್ಮಡ್ಕ , ನ.ಪಂ ಸದಸ್ಯರಾದ ಶರೀಫ್ ಕಂಠಿ , ರಾಜು ಪಂಡಿತ್ , ಅಬ್ದುಲ್ ಕುಂಞ್ಞ ಗೂನಡ್ಕ , ರಾಧಾಕೃಷ್ಣ ಬೊಳ್ಳುರು , ಮುಸ್ತಫ ಕೆ ಎಂ , ಇಕ್ಬಾಲ್ ಎಲಿಮಲೆ , ಶಶಿಧರ ಎಂ ಜೆ , ಸತ್ಯಕುಮಾರ್ ಆಡಿಂಜ , ನಂದರಾಜ್ ಸಂಕೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.