ಸುಳ್ಯ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಿರುವುಗಳು ಹೆಚ್ಚಾಗಿ ಮತ್ತು ದ್ವಿಚಕ್ರ ವಾಹನ ಸವಾರರು ಅತೀ ವೇಗದ ಚಲಾವಣೆ ಮತ್ತು ಜೀವ ರಕ್ಷಕ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಹಲವಾರು ಜನ ಇತ್ತೀಚೆಗೆ ಜೀವ ಕಳೆದುಕೊಂಡಿದ್ದರು. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಹಾಗೂ ನಗರದ ಪಾರ್ಕಿಂಗ್ ಸಮಸ್ಯೆ ಸರಿಪಡಿಸುವ ಸಲುವಾಗಿ ಪೋಲೀಸರು ನೋಟೀಸ್ ನೀಡಿ, ದಂಡ ಪಾವತಿಸುಂತೆ ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಜನ ವಾಹನ ಪಾರ್ಕಿಂಗ್ ಮತ್ತು ಹೆಲ್ಮೆಟ್ ಕಡ್ಡಾಯ ಪಾಲನೆ ಆಗುತ್ತಿರುವುದಕ್ಕೆ ಸುಳ್ಯದ ಪೋಲೀಸ್ ಅಧಿಕಾರಿಗಳ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ .
ಸುಳ್ಯಕ್ಕೆ ನೂತನವಾಗಿ ಆಗಮಿಸಿದ ಎಸೈ ಸಂತೋಷ್ ರವರು ಸುಳ್ಯ ಮುಖ್ಯ ಪೇಟೆಯಲ್ಲಿ ಹಾದು ಹೋಗುತ್ತಿರುವ ಹೆದ್ದಾರಿಯಲ್ಲಿ ಯಾವುದೇ ರೀತಿಯ ಅಡಚಣೆಗಳು ವಾಹನಗಳಿಗೆ ಆಗಬಾರದು ಮತ್ತು ಸುಗಮವಾಗಿ ಎಲ್ಲಾ ವಾಹನಗಳು ಚಲಿಸುವಂತೆ ಆಗಬೇಕು ಅದಕ್ಕಾಗಿ ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸುವ ಸಲುವಾಗಿ ಸಭೆಗಳನ್ನು ನಡೆಸಿ ಎಚ್ಚರಿಕೆಗಳನ್ನು ನೀಡಿ ಬಳಿಕ ಪೋಲಿಸ್ ದಂಡ ಪ್ರಯೋಗವನ್ನು ಬಳಸಲು ಆರಂಭಿಸಿದರು .
ಪೋಲಿಸ್ ಇಲಾಖೆಯು ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೇ ತೆರಳುವವರ ಮತ್ತು ರಸ್ತೆ ನಿಯಮ ಪಾಲಿಸದವರ ವಾಹನ ಮಾಲಕರ ಮನೆಗೆ ನೋಟಿಸ್ ಕಳಿಸುತ್ತಿದ್ದಂತೆ ಎಚ್ಚೆತ್ತ ಮಾಲಕರು ಸಂಚಾರಿ ನಿಯಮ ಪಾಲಿಸಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಹೋದಲ್ಲೆಲ್ಲಾ ಪಾರ್ಕಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಸುಳ್ಯ ನಗರದಲ್ಲಿ ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಆಗಿದೆ.
ಸುಳ್ಯ ನಗರದ ವಾಹನ ಸವಾರರಿಗೆ ಸಂತೋಷ ನೀಡಿದ ಎಸ್.ಐ. ಸಂತೋಷ್
ಸುಳ್ಯಕ್ಕೆ ಆಗಮಿಸಿದ ಬಳಿಕ ಸುಳ್ಯದ ಎಲ್ಲಾ ಆಗು ಹೋಗುಗಳ ಬಗ್ಗೆ ಮಾಹಿತಿ ಇದ್ದ ಪರಿಣಾಮವಾಗಿ ಸುಳ್ಯದ ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ , ದ್ವಿಚಕ್ರ ವಾನಗಳಲ್ಲಿ ಹೆಲ್ಮೆಟ್ , ನಾಲ್ಕು ಚಕ್ರಗಳ ವಾಹನಗಳಲ್ಲಿ ಸೀಟ್ ಬೆಲ್ಟ್ ಸೇರಿದಂತೆ ಸಾರಿಗೆ ನಿಯಮಗಳನ್ನು ಕಡ್ಡಾಯ ಹಾಗೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಸುಳ್ಯ ನಗರ ಸೇರಿದಂತೆ ನಾನಾ ಕಡೆಗಳಲ್ಲಿನ ಸುಮಾರು 40 ಕ್ಕು ಹೆಚ್ಚು ಸಿಸಿ ಟಿವಿಗಳ ಆಧಾರದಲ್ಲಿ ಸುಮಾರು 700 ಕ್ಕೂ ಅಧಿಕ ವಾಹನ ಮಾಲಕರಿಗೆ ನೋಟಿಸ್ ನೀಡಲಾಗಿದೆ .
ಒಮ್ಮೆ ದಂಡ ಪಾವತಿಸಿದ ಬಳಿಕ ಮತ್ತೊಮ್ಮೆ ಅದೇ ತಪ್ಪನ್ನು ಎಸಗಿದರೆ ರದ್ದಾಗಲಿದೆ ಡ್ರೈವಿಂಗ್ ಲೈಸನ್ಸ್ !
ಒಂದು ಬಾರಿ ದಂಡ ಪಾವತಿಸಿದ ವಾಹನ ಮಾಲಿಕ ಅಥವಾ ಚಾಲಕ ಮತ್ತೆ ಎರಡನೇ ಬಾರಿಗೆ ಅದೇ ತಪ್ಪುಗಳನ್ನು ಎಸಗಿದಲ್ಲಿ ವಾಹನ ಚಾಲನೆ ಪರವಾನಗಿ ರದ್ದತಿಗಾಗಿ ಸಾರಿಗೆ ಇಲಾಖೆಗೆ ಮಾಹಿತಿ ನೀಡುವುದು, ಅಲ್ಲದೇ ಅಂತವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ ರಾತ್ರಿ ಗಂಟೆ 11 ರ ನಂತರ ಯಾವುದೇ ಹೋಟೆಲ್ ಗಳು ಕಾರ್ಯ ನಿರ್ವಹಿಸಬಾರದು ಎಂಬ ಸೂಚನೆ ನೀಡಿದ್ದರಿಂದ ಹೋಟೇಲ್ ನವರು ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.