ಇವತ್ತು ಪರಿಚಯಸ್ಥರೊಬ್ಬರ ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ “ಅಳು ಅನ್ನುವ ಶಬ್ದವು ಆಳು ಎನ್ನುವ ಶಬ್ದಕ್ಕಿಂತ ಬಹು ಮೌಲ್ಯಯುತವಾಗಿರುತ್ತದೆ” ಎಂಬ ವಾಕ್ಯವನ್ನು ಓದಿದೆ. ಅವರು ಯಾವ ಅರ್ಥದಿಂದ ಈ ವಾಕ್ಯವನ್ನು ಬರೆದಿದ್ದಾರೋ ಗೊತ್ತಿಲ್ಲ. ಆದರೆ ಇಂದಿನ ಈ ಸಮಾಜದಲ್ಲಿ ತಮ್ಮ ಬದುಕಿನಲ್ಲಿರುವ ಕಷ್ಟ-ನೋವುಗಳಿಂದ ಕೊರಗಿ ನಿಜವಾಗಿಯೂ ಕಣ್ಣೀರು ಸುರಿಸುತ್ತಾ ನೊಂದವರು ಒಂದೆಡೆಯಾದರೆ, ತಮ್ಮ ಕಾರ್ಯಸಾಧನೆಗಾಗಿ ಮೊಸಳೆ ಕಣ್ಣೀರನ್ನು ಸುರಿಸುವ ಸ್ವಾರ್ಥಿಗಳು ಇನ್ನೊಂದೆಡೆ. ಆದರೆ ಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸಲು ಮುಂದೆ ಬರುವ ನಾವುಗಳೆಷ್ಟು ಮುಗ್ಧರೆಂದರೆ ನಿಜವಾಗಿಯೂ ಕಷ್ಟ-ನೋವುಗಳಿಂದ ಕೊರಗಿ ಕಣ್ಣೀರು ಸುರಿಸುವವರಿಗೂ ಮೊಸಳೆ ಕಣ್ಣೀರು ಸುರಿಸುವವರಿಗೂ ಇರುವ ವ್ಯತ್ಯಾಸವನ್ನೇ ಅರಿಯದಷ್ಟು ಮುಗ್ಧರು ಅಥವಾ ಮೂರ್ಖರು. ಏಕೆಂದರೆ “ಈ ಸಮಾಜದಲ್ಲಿ ಕೆಲವೊಂದು ಸಂದರ್ಭಗಳಲ್ಲಿ ನಾವು-ನೀವುಗಳು ನಿಜವಾಗಿಯೂ ಕಷ್ಟದಲ್ಲಿರುವವರ ಕಣ್ಣೀರನ್ನು ನೋಡಿ ಮರುಗುವುದಕ್ಕಿಂತ ಹೆಚ್ಚಾಗಿ ಮೊಸಳೆ ಕಣ್ಣೀರು ಸುರಿಸುವವರನ್ನು ನೋಡಿ ಮರುಗುತ್ತೇವೆ.” ಏಕೆಂದರೆ ನಮಗೆ ನೈಜವಾದ ಕಣ್ಣೀರಿಗಿಂತ ನಾಟಕೀಯವಾದ ಕಣ್ಣೀರು ಹೆಚ್ಚು ನೈಜವಾಗಿ ಕಾಣಿಸುತ್ತದೆ. ಹಾಗಾಗಿ ಕೆಲವೊಂದು ಸಂದರ್ಭಗಳಲ್ಲಿ ನಿಜವಾಗಿಯೂ ಕಷ್ಟದಲ್ಲಿರುವವರಿಗೆ ತಲುಪಬೇಕಾದ ಸಾಂತ್ವನದ ನುಡಿಗಳು ಅಥವಾ ಸಹಾಯಗಳು ಮೊಸಳೆ ಕಣ್ಣೀರು ಸುರಿಸುವವರಿಗೆ ತಲುಪುತ್ತದೆ.
ಈ ಮೊಸಳೆ ಕಣ್ಣೀರು ಎನ್ನುವುದು ಕೇವಲ ಸ್ವಾರ್ಥಸಾಧನೆಗಾಗಿ ಮಾತ್ರ ಬಳಕೆಯಾಗುವುದಿಲ್ಲ, ಕೆಲವೊಮ್ಮೆ ಈ ಸಮಾಜದಲ್ಲಿ ಗೌರವಯುತ ವ್ಯಕ್ತಿಗಳು ಅನಿಸಿಕೊಂಡ ಕೆಲವರು ತಪ್ಪುಗಳನ್ನು ಮಾಡಿದಾಗ, ಆ ತಪ್ಪುಗಳು ಸಮಾಜದ ಮುಂದೆ ಬಹಿರಂಗವಾದಾಗ, ತಮ್ಮ ತಪ್ಪುಗಳಿಂದ ತಮ್ಮದೇ ಗೌರವಕ್ಕೆ ಧಕ್ಕೆ ಬಂದಾಗ ಜನರನ್ನು ತಮ್ಮತ್ತ ಸೆಳೆಯಲು ಅಥವಾ ಜನರ ಮನಸ್ಸಿನಲ್ಲಿ ಒಳ್ಳೆಯವರು ಎಂದೆನಿಸಿಕೊಳ್ಳಲು ನಾಟಕೀಯವಾಗಿ ಕಣ್ಣೀರು ಸುರಿಸುತ್ತಾ ಜನರ ಮನಸ್ಸಿನಲ್ಲಿ ತಮ್ಮ ಮೇಲೆ ಅನುಕಂಪದ ಭಾವನೆಯನ್ನು ಮೂಡಿಸಲು ಪ್ರಯತ್ನಿಸುತ್ತಾರೆ.
ಒಟ್ಟಿನಲ್ಲಿ ಕೆಲವು ಸ್ವಾರ್ಥಿಗಳು ಜನರ ಕಣ್ಣಿಗೆ ಮಣ್ಣೆರಚಿ ತಾವು ಅಂದುಕೊಂಡ ಕಾರ್ಯಗಳನ್ನು ಸಾಧಿಸುವ ಸಲುವಾಗಿ ಹಾಗೂ ಸಮಾಜದಲ್ಲಿ ಗೌರವಯುತ ವ್ಯಕ್ತಿಗಳು ಅನಿಸಿಕೊಂಡ ಕೆಲವರು ತಪ್ಪುಗಳನ್ನು ಮಾಡಿದಾಗ ಆ ತಪ್ಪುಗಳು ಸಮಾಜದ ಮುಂದೆ ಬಹಿರಂಗವಾದಾಗ ಈ ಮೊಸಳೆ ಕಣ್ಣೀರು ಅಥವಾ ನಾಟಕೀಯ ಕಣ್ಣೀರನ್ನು ಸುರಿಸಿ ಜನರ ಭಾವನೆಗಳೊಂದಿಗೆ ಆಟವಾಡುತ್ತಾರೆ.
ವಿಪರ್ಯಾಸವೆಂದರೆ ಇಂತವರ ನಾಟಕೀಯ ಅಥವಾ ಮೊಸಳೆ ಕಣ್ಣೀರಿನಿಂದಾಗಿ ನಿಜವಾಗಿಯೂ ಜೀವನದಲ್ಲಿ ಕಷ್ಟ-ನೋವುಗಳನ್ನು ಅನುಭವಿಸುತ್ತಾ ನೊಂದು ಕಣ್ಣೀರು ಸುರಿಯುತ್ತಿರುವವರ ದುಃಖ ನಮ್ಮನಿಮ್ಮಂತವರಿಗೆ ಕಾಣಿಸುವುದೇ ಇಲ್ಲ…✍️ಉಲ್ಲಾಸ್ ಕಜ್ಜೋಡಿ
- Saturday
- November 23rd, 2024