ಯಕ್ಷಪ್ರತಿಮೆ ಲೋಕಾರ್ಪಣೆ- ಪ್ರಶಸ್ತಿ ಪ್ರದಾನ- ಮಹಿರಾವಣ ಯಕ್ಷಗಾನ
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದೊಂದಿಗೆ ಅ.06 ರಂದು ಸಂಜೆ 5.45 ರಿಂದ ರಾತ್ರಿ 9.30 ರ ವರೆಗೆ ಯಕ್ಷ ಸಂಭ್ರಮವನ್ನು ಏರ್ಪಡಿಸಲಾಗಿದೆ.
ಯಕ್ಷಪ್ರತಿಮೆ ಲೋಕಾರ್ಪಣೆ- ಚೆಂಡೆ ನಿನಾದ
ಸಂಜೆ 5.45 ಕ್ಕೆ ಹಿಮ್ಮೇಳ ಗುರು ವಳಕುಂಜ ಕುಮಾರ ಸುಬ್ರಮಣ್ಯ ಮತ್ತು ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಕಲಾವಿದರಿಂದ ಯಕ್ಚಗಾನದ ಕೇಳಿ ಹೊಡೆಯುವ ಚೆಂಡೆ ನಿನಾದ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.00 ಕ್ಕೆ ಈ ವರ್ಷದ ಧಾರಾಕಾರ ಮಳೆಗೆ ಧರೆಗುರುಳಿದ ನಂತರ ಮರುನಿರ್ಮಾಣಗೊಂಡ, ಯಕ್ಷದ್ರೋಣ ಬಣ್ಣದ ಮಾಲಿಂಗರ ನೆನಪಿನ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆಯು ಲೋಕಾರ್ಪಣೆಗೊಳ್ಳಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದ್ರೆ ಇದರ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ಯಕ್ಷಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿಯವರು ಯಕ್ಷ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ .
ವಿಶೇಷ ಆಹ್ವಾನಿತರಾಗಿ ಪ್ರಸಿದ್ಧ ಕಲಾನಿರ್ದೇಶಕ,ನಟ ಅರುಣ್ ಸಾಗರ್ ಬೆಂಗಳೂರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾದ ಬಿ.ಆರ್.ವೆಂಕಟರಮಣ ಐತಾಳ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇಲ್ಲಿನ ಸಹಾಯಕ ನಿರ್ದೇಶಕರಾದ ಜಿ.ರಾಜೇಶ್ ಭಾಗವಹಿಸಲಿದ್ದಾರೆ.ಹಿರಿಯ ಯಕ್ಷಗಾನ ಕಲಾವಿದ ರಂಗಮನೆಯ ಸುಜನಾ ಸುಳ್ಯ ಉಪಸ್ಥಿರಿರುವರು.
ವನಜ ರಂಗಮನೆ ಪ್ರಶಸ್ತಿ
ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯರ ಮಾತೃಶ್ರೀ ಶ್ರೀಮತಿ ವನಜಾಕ್ಷಿ ಜಯರಾಮರ ನೆನಪಿನಲ್ಲಿ ನೀಡುವ 2024 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಯನ್ನು ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ರಿಗೆ ನೀಡಲಾಗುವುದು.
ರಂಗಶಿಸ್ತಿನ ಯಕ್ಷಗಾನ ಮಹಿರಾವಣ
ಸಂಜೆ 7.20 ರಿಂದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡುಬಿದಿರೆ ಹಾಗೂ ಜಿಲ್ಲೆಯ ಪ್ರಸಿದ್ಧ ಅತಿಥಿ ಕಲಾವಿದರಿಂದ ಮಹಿರಾವಣ ಎಂಬ ರಂಗ ಶಿಸ್ತಿನ ಯಕ್ಷಗಾನ ಪ್ರದರ್ಶನವಿರುತ್ತದೆ. ಶ್ರೀಮತಿ ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಯಲ್ಲಿ ರಂಗಮನೆಯ ಪ್ರಶಸ್ತಿ ಸ್ವೀಕರಿಸಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಮಹಿರಾವಣ ವೇಷದ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆಯ ಅಧ್ಯಕ್ಷ ಡಾ| ಜೀವನ್ ರಾಂ ಸುಳ್ಯ, ಸದಸ್ಯರಾದ ಕೆ.ಕೃಷ್ಣಮೂರ್ತಿ, ಡಾ.ವಿದ್ಯಾ ಶಾರದ, ಲತಾ ಮಧುಸೂದನ್, ವಿನೋದಿನಿ ಎನ್. ರೈ. ತಿಳಿಸಿದ್ದಾರೆ.