ಸುಳ್ಯ ನಗರದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆಯಿಲ್ಲದೆ ಸೊರಗಿದ ಕುರಿತಾಗಿ ಮಾಧ್ಯಮಗಳು ನಿರಂತರ ವರದಿ ಭಿತ್ತರಿಸಿದ ಬೆನ್ನಲ್ಲೇ ಜು.25ರಂದು ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಪಾರ್ಕ್ ಸಮರ್ಪಕ ನಿರ್ವಹಣೆಗೆ ವಾರದೊಳಗೆ ನೀಲಿ ನಕ್ಷೆ ತಯಾರಿಸುವಂತೆ ಮುಖ್ಯಾಧಿಕಾರಿಗೆ ಆದೇಶ ನೀಡಿದರು.
ಕುರುಂಜಿಗುಡ್ಡೆ ಪಾರ್ಕ್ ನಿರ್ವಹಣೆ ಇಲ್ಲದೆ ಕಾಡುಗಳು ಬಳ್ಳಿಗಳಿಂದ ತುಂಬಿದ್ದು ಪಾರ್ಟಿ, ಮೋಜು ಮಸ್ತಿಗಳು ನಡೆಯುತ್ತಿವೆ. ರಾತ್ರಿಯಲ್ಲಿಯೂ ಜನರು ಬಂದು ಕಾಲ ಪಾರ್ಕ್ ಹಾಳಾಗುತ್ತಿರುವ ಕುರಿತಾಗಿ ಮಾಧ್ಯಮಗಳು ವರದಿ ಪ್ರಕಟ ಮಾಡಿದ್ದವು ಇದನ್ನು ಗಮನಿಸಿದ ಎ.ಸಿ. ಯವರು ಕುರುಂಜಿಗುಡ್ಡೆ ಪಾರ್ಕ್ ಗೆ ದಿಢೀರ್ ಭೇಟಿ ನೀಡಿದರು.
ಪಾರ್ಕ್ ನ್ನು ಪರಿಶೀಲಿಸಿದ ಸಹಾಯಕ ಆಯುಕ್ತರು ನ.ಪಂ. ಮುಖ್ಯಾಧಿಕಾರಿ ಸುಧಾಕರ್ ರನ್ನು ಪ್ರಶ್ನಿಸಿದಾಗ, ನಿರ್ವಹಣೆಗೆ ಅನುದಾನ ಇಲ್ಲದಿರುವ ಕುರಿತು ಅವರು ಎ.ಸಿ. ಯವರ ಗಮನಕ್ಕೆ ತಂದರು. ಹಾಗಂದ ಮಾತ್ರಕ್ಕೆ ಇದನ್ನು ಹಾಗೇ ಬಿಡುವುದು ಸರಿಯಲ್ಲ. ನಾವು ಹಣ ಹಾಕಿ ಪಾರ್ಕ್ ಮಾಡಿದ್ದೇವಲ್ಲ ಇದನ್ನು ನೋಡಿಕೊಳ್ಳಬೇಕು. ಆದ್ದರಿಂದ ಮೊದಲು ಇದನ್ನು ಸ್ವಚ್ಚತೆ ಮಾಡಿಸಿ. ಜತೆಗೆ ನಿರ್ವಹಣೆಗೆ ಬೇಕಾದ ಎಸ್ಟಿಮೇಟ್ ವಾರದೊಳಗೆ ಮಾಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು. ಅಲ್ಲದೇ ಪಾರ್ಕ್ ಗೆ ಸಿ.ಸಿ. ಕ್ಯಾಮರಾ ಅಳವಡಿಸೋಣ. ಒಬ್ಬ ಪೌರ ಕಾರ್ಮಿಕರಿಗೆ ಇಲ್ಲಿಯೇ ಇರುವಂತೆ ಮಾಡಬೇಕು ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಅಲ್ಲಿಂದ ಇನ್ ಡೋರ್ ಸ್ಟೇಡಿಯಂ ವೀಕ್ಷಿಸಿದ ಎ.ಸಿ. ಯವರು, ಅಲ್ಲಿದ್ದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳ ಜತೆಯೂ ಮಾತನಾಡಿದರು. ಪಾರ್ಕ್ ನಿರ್ವಹಣೆಗೆ ಸಹಕಾರ ನೀಡುವಂತೆ ಅವರಲ್ಲಿ ಕೇಳಿಕೊಂಡರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ.ವೆಂಕಪ್ಪ ಗೌಡರು ಕೂಡಾ ಈ ಸಂದರ್ಭದಲ್ಲಿ ಇದ್ದರು. ಪಾರ್ಕ್ ಅವ್ಯವಸ್ಥೆ ಕುರಿತು ಅವರು ಕೂಡಾ ಎ.ಸಿ. ಯವರಿಗೆ ಮಾಹಿತಿ ನೀಡಿದರು.
ಪೌರ ಕಾರ್ಮಿಕರಿಂದ ಎಸಿ ಆಗಮನ ಹಿನ್ನಲೆಯಲ್ಲಿ ಮೆಟ್ಟಿಲುಗಳ ಶುಚಿತ್ವ ಚಿತ್ರ.
ಎ.ಸಿ. ಯವರು ಪಾರ್ಕ್ ಗೆ ಬರುತ್ತಾರೆಂಬ ಮಾಹಿತಿ ನಗರ ಪಂಚಾಯತ್ ಗೆ ತಿಳಿದು ಸ್ವಚ್ಚತಾ ಸಿಬ್ಬಂದಿಗಳನ್ನು ಪಾರ್ಕ್ ಗೆ ಕಳುಹಿಸಿ ಪಾರ್ಕ್ ನ ಮೆಟ್ಟಿಲನ್ನು ಸ್ವಚ್ಚಗೊಳಿಸಲಾಯಿತು. ಹಾಗೂ ಕಸ ಹೆಕ್ಕಿಸಲಾಗಿದ್ದು ಪಾರ್ಕ್ ನಲ್ಲಿ ಕುಳಿತಿದ್ದ ಕಾಲೇಜು ವಿಧ್ಯಾರ್ಥಿಗಳನ್ನು ಹೊರ ಕಳುಹಿಸಿದರು.