ದಿನವಿಡೀ ನಿಂತುಕೊಂಡು 8 ರಿಂದ 12 ಗಂಟೆಯ ಕಾಲ ಕೆಲಸ ಮಾಡುವ ಗೃಹರಕ್ಷಕರಿಗೆ ದೈಹಿಕ ಆರೋಗ್ಯ ಅತೀ ಅಗತ್ಯ. ಟ್ರಾಫಿಕ್ ನಿಯಂತ್ರಣ, ನೆರೆ ನಿಯಂತ್ರಣ ಮತ್ತು ಬೆಂಕಿ ಅವಘಡ ಮುಂತಾದ ಒತ್ತಡದ ಸಂದರ್ಭದಲ್ಲಿ ಕೆಲಸ ನಿರ್ವಹಿಸುವಾಗ ಗೃಹರಕ್ಷಕರಿಗೆ ವಿಪರೀತ ಮಾನಸಿಕ ಒತ್ತಡದ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಯಾಮ ಅತೀ ಅವಶ್ಯಕ ಎಂದು ಶ್ರೀ ಗೋಪಾಲಕೃಷ್ಣ ದೇಲಂಪಾಡಿ ನುಡಿದರು.
ನಿರಂತರ ಯೋಗ ಮಾಡುವುದರಿಂದ ಜೀವನ ಶೈಲಿ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಮುಂತಾದ ರೋಗಗಳು ದೂರವಾಗುತ್ತದೆ. ಈ ಕಾರಣದಿಂದ ನಿರಂತರವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಯೋಗ ತರಬೇತಿ ನಡೆಸಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಗೃಹರಕ್ಷಕರಿಗೆ, ಅವರ ದೈಹಿಕ ಮತ್ತು ಮಾನಸಿಕ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ‘ಯೋಗ’ ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಮತ್ತು ಪೌರರಕ್ಷಣಾದಳದ ಮುಖ್ಯ ಪಾಲಕ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 19 ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಯೋಗ ಪೂರ್ವಭಾವಿ ತರಬೇತಿ ಶಿಬಿರ ಜರುಗಿತು. ಯೋಗ ಶಿಕ್ಷಕಿ ಸುಮಾ ಮತ್ತು ಕಾರ್ತಿಕ್ ಇವರ ಸಹಕಾರದೊಂದಿಗೆ ದೇಲಂಪಾಡಿ ಅವರು ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯಿತು. 20 ಮಂದಿ ಗೃಹರಕ್ಷಕರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
- Sunday
- November 24th, 2024