ಮಾತೃ ಸಮಾನವಾದ ಪ್ರಕೃತಿಯ ಸಂರಕ್ಷಣೆ ಹಾಗೂ ಪಾಲನೆ ಪೋಷಣೆಗಳು ನಮ್ಮ ಜೀವಿತಾವಧಿಯ ಶ್ರೇಷ್ಠ ಕೈಂಕರ್ಯವಾಗಬೇಕು.ಪರಿಸರ ಸಮೃದ್ಧಿಗೆ ಹೆಚ್ಚಿನ ಸಹಕಾರ ನೀಡುವುದರಿಂದ ಕೃಪಾಶೀರ್ವಾದ ಪ್ರಧಾನ. ಆಗ ನಮ್ಮ ಪರಿಸರ ಸಮೃದ್ದತೆ ಬೆಳಗಲು ಸಾಧ್ಯವಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ,ಸುಖ ಸಂಪತ್ತಿಗಾಗಿ ಭೂಮಿಯ ಮೇಲೆ ಅಧಿಪತ್ಯ ಸ್ಥಾಪಿಸಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತೇವೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನುಮಾಡುವಾಗಲೂ ಪರಿಸರಕ್ಕೆ ಹಾನಿಯಾಗದೆ ಮುಂದಿನ ಜನಾಂಗಕ್ಕೆ ತೊಂದರೆಯಾಗದಂತೆ ಕಾಳಜಿವಹಿಸಬೇಕಾದ ಅನಿವಾರ್ಯತೆ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೃಷಿಯ ಬಗ್ಗೆ ಹಾಗೂ ಪರಿಸರ ಕುರಿತು ಹೆಚ್ಚಿನ ಶಿಕ್ಷಣವನ್ನು ನೀಡಿದಾಗ ಮುಂದಿನ ಪೀಳಿಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಒಲವು ತೋರಬಹುದು ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ನುಡಿದರು.
ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ಕಾಲೇಜಿನ ಎನ್‌ಎಸ್‌ಎಸ್ ಘಟಕ, ರೋರ‍್ಸ್ ಮತ್ತು ರೇಂರ‍್ಸ್ ಘಟಕ ಮತ್ತು ರೆಡ್ ಕ್ರಾಸ್ ಯೂನಿಯನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರ ದಿನಾಚರಣೆ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು.ಅರಣ್ಯನಾಶ, ನದೀ ತಿರುವುಗಳಂತಹ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ಪ್ರಾಣಿ ಸಂಕುಲಕ್ಕೆ ಅಪಾಯ ತಪ್ಪಿದ್ದಲ್ಲ. ಆದುದರಿಂದ ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದರು.
ಉದ್ಘಾಟನೆ:
ಆರಂಭದಲ್ಲಿ ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ವಿಮಲ್ ಬಾಬು ಇಲಾಖೆಯಿಂದ ಕೊಡಮಾಡುವ ಸಸಿಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.ಬಳಿಕ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ವಿವಿಧ ಜಾತಿಯ ಗಿಡಗಳನ್ನು ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ನೆಟ್ಟರು.ವಿದ್ಯಾರ್ಥಿಗಳು ತಾವು ನೆಟ್ಟ ಗಿಡವನ್ನು ಸ್ವತಾಃ ತಾವೇ ಪೋಷಿಸುವ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಸ್ವೀಕರಿಸಿದರು.
ಉಪವಲಯಾರಣ್ಯಾಧಿಕಾರಿ ಮನೋಜ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ ಮುಖ್ಯಅತಿಥಿಗಳಾಗಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ರೋರ‍್ಸ್ ಮತ್ತು ರೇಂರ‍್ಸ್ ನಾಯಕರಾದ ಸವಿತಾ ಕೈಲಾಸ್, ರೆಡ್‌ಕ್ರಾಸ್ ಘಟಕದ ಸಂಯೋಜಕಿ ಪೂರ್ಣಿಮಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Saturday
- November 23rd, 2024