Ad Widget

ಪೆರುವಾಜೆ ಗ್ರಾಮದ ಶಾಲೆಯೊಂದರಲ್ಲಿ ಪ್ರಥಮ ಬಾರಿಗೆ ಡಿಜಿಟಲ್ ಆಧಾರಿತ ಶಿಕ್ಷಣ – ಮುಕ್ಕೂರು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕಲಿಕೆಗೆ ಚಾಲನೆ

ಮುಕ್ಕೂರು : ಪೆರುವಾಜೆ ಗ್ರಾಮದಲ್ಲೇ ಪ್ರಪ್ರಥಮ ಬಾರಿಗೆ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಅಳವಡಿಸಿ ಸ್ಮಾರ್ಟ್ ಕ್ಲಾಸ್ ತರಗತಿ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಕಲಿಕೆಯು ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 31 ರಂದು ಪ್ರಾರಂಭಗೊಂಡಿತು. ತನ್ಮೂಲಕ ಈ ವರ್ಷದ ಶಾಲಾ ಪ್ರಾರಂಭೋತ್ಸವನ್ನು ವಿಶಿಷ್ಟ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.

60 ಸಾವಿರ ವೆಚ್ಚ
ಕಳೆದ ವರ್ಷ ನಡೆದ ವಾರ್ಷಿಕೋತ್ಸವದ ಉಳಿಕೆ ಹಣ ಹಾಗೂ ಶಾಲಾ ಹಿತಚಿಂತನ ಸಮಿತಿಯ ನೆರವಿನಿಂದ 35 ಸಾವಿರ ರೂ. ಮೌಲ್ಯದ ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಹಾಗೂ 25 ಸಾವಿರ ರೂ. ಮೌಲ್ಯದ ಕಂಪ್ಯೂಟರ್ ಅನ್ನು ಶುಕ್ರವಾರ ಶಾಲೆಗೆ ಹಸ್ತಾಂತರಿಸಲಾಯಿತು. ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಪ್ರೊಜೆಕ್ಟರ್ ಆನ್ ಮಾಡಿ ಸ್ಮಾರ್ಟ್ ಕ್ಲಾಸ್‍ಗೆ ಚಾಲನೆ ನೀಡಿದರು. ಎಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು ಅವರು ಕಂಪ್ಯೂಟರ್‌ನಲ್ಲಿ ಕನ್ನಡ ಪದ ಟೈಪ್ ಮಾಡುವ ಮೂಲಕ ಚಾಲನೆ ನೀಡಿದರು.

ಸ್ಮಾರ್ಟ್ ಕ್ಲಾಸ್
ಕಂಪ್ಯೂಟರ್ ಕಲಿಕೆ
ಮುಕ್ಕೂರು ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಶಿಕ್ಷಣ ಇಲಾಖೆಯು ಕಾಲ ಕಾಲಕ್ಕೆ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಗುತ್ತದೆ. ಮುದ್ರಿತ ವಿಡಿಯೋ ತುಣಕುಗಳನ್ನು ಪರದೆಯ ಮೂಲಕ ಬಿತ್ತರಿಸಲಾಗುತ್ತದೆ. ಈ ಮೂಲಕ ಡಿಜಿಟಲ್ ಆಧಾರಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಪ್ರತಿ ತರಗತಿಗೆ ಲಭ್ಯವಾಗಲಿದೆ. ಕಂಪ್ಯೂಟರ್ ಶಿಕ್ಷಣಕ್ಕೂ ಇಲ್ಲಿ ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳನ್ನು ತಂಡವಾಗಿ ವಿಭಜಿಸಿ ಬೇಸಿಕೆ ಕಂಪ್ಯೂಟರ್ ಕಲಿಕೆಯನ್ನು ನೀಡಲಾಗುತ್ತದೆ.

ನಲಿಕಲಿ ಕೊಠಡಿಗೆ ಕಲಾಸ್ಪರ್ಶ
ಗ್ರಾ.ಪಂ.ನಿಂದ ಆಸನದ ವ್ಯವಸ್ಥೆ
ಸುಮಾರು 13 ಸಾವಿರ ರೂ.ವೆಚ್ಚದಲ್ಲಿ ನಲಿಕಲಿ ಕೊಠಡಿಯಲ್ಲಿ ಶಿಕ್ಷಣಕ್ಕೆ ಪೂರಕವಾದ ಚಿತ್ರಗಳ ಬಿಡಿಸಲಾಗಿದ್ದು ವಿದ್ಯಾರ್ಥಿಗಳ ಕಲಿಕೆಗೆ ಅಪೂರ್ವ ರೀತಿಯಲ್ಲಿ ಕೊಠಡಿಯನ್ನು ಸಿದ್ಧಪಡಿಸಲಾಗಿದೆ.

ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನಲಿಕಲಿ ಕೊಠಡಿ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಯಕ್ಕಾಗಿ ಶಾಲಾ ಹಿತಚಿಂತನಾ ಸಮಿತಿ, ಎಸ್‍ಡಿಎಂಸಿ, ಶಿಕ್ಷಕ ವೃಂದ, ಪೋಷಕರಿಗೆ ಅಭಿನಂದನೆ ಸಲ್ಲಬೇಕು. ನಲಿಕಲಿ ಕೊಠಡಿಗೆ ಆಧುನಿಕ ಶೈಲಿಯ ಆಸನದ ವ್ಯವಸ್ಥೆಯ ಬಗ್ಗೆ ಬೇಡಿಕೆ ಇದ್ದು ಗ್ರಾ.ಪಂ.ವತಿಯಿಂದ ಅದನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಸಮವಸ್ತ್ರ ಪುಸ್ತಕ ವಿತರಿಸಿ ಮಾತನಾಡಿ, ಮುಕ್ಕೂರಿನಲ್ಲಿ ಈ ಬಾರಿಯ ಶೈಕ್ಷಣಿಕ ಪ್ರಾರಂಭೋತ್ಸವ ಅರ್ಥಪೂರ್ಣ ರೀತಿಯಲ್ಲಿ ನಡೆದಿದೆ. ಆಧುನಿಕ ಸೌಕರ್ಯಗಳ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಮುಂದಡಿ ಇಟ್ಟಿರುವುದು ಶ್ಲಾಘನೀಯ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಮುಕ್ಕೂರು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕಲಿಕೆ ಪ್ರಾರಂಭಿಸಿರುವುದು ಅರ್ಥಪೂರ್ಣ ಬೆಳವಣಿಗೆ. ಇದು ಪೆರುವಾಜೆ ಗ್ರಾಮದಲ್ಲೇ ಮೊದಲ ಪ್ರಯೋಗ ಎಂದರು.

ಎಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಧುನಿಕ ವ್ಯವಸ್ಥೆಗಳ ಬಳಕೆ ಅಗತ್ಯ. ಸರಕಾರಿ ಶಾಲೆಯಲ್ಲಿಯು ಇಂತಹ ಪ್ರಯತ್ನ ನಡೆದಿರುವುದು ಉತ್ತಮ ಸಂಗತಿ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಅನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಶಾಲಾ ಹಿತಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಉಪಾಧ್ಯಕ್ಷೆ ಸುಮತಿ ರೈ, ಕುವೈತ್‍ನ ಉದ್ಯಮಿ ಮಹೇಶ್ ಕುಂಡಡ್ಕ, ಮುಕ್ಕೂರು-ಕುಂಡಡ್ಕ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ, ಸಹ ಶಿಕ್ಷಕಿ ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಲತಾ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!