“ಅಯ್ಯೋ ಈ ಕಣ್ಣಿನ ಸಮಸ್ಯೆಗೆ ಸಾಯುವ ತನಕವೂ ಕಣ್ಣಿಗೆ ಆಲೋಪಥಿ ಔಷಧ ಹಾಕ್ಬೇಕಾ? ಬೇರೆ ಪರಿಹಾರವೇ ಇಲ್ಲವೇ?”, ” ನನಗೆ ರೆಟಿನಾ ಸಮಸ್ಯೆ( ಏಜ್ ರಿಲೇಟಡ್ ಮ್ಯಾಕ್ಯುಲಾರ್ ಡಿಜನರೇಷನ್) ಇದೆ ಎಂದು ವೈದ್ಯರು ಹೇಳಿದ್ದಾರೆ. ಹದಿನಾರು ಸಾವಿರ ರೂಪಾಯಿ ಇಂಜೆಕ್ಷನ್ ಎರಡು ವರ್ಷಗಳಲ್ಲಿ ಹದಿನಾಲ್ಕು ಸಲ ತೆಗೆದುಕೊಂಡಿದ್ದೇನೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ. ಬೇರೇನೂ ಉಪಾಯ ಇಲ್ಲ ಎಂದು ಅಲೋಪಥಿ ವೈದ್ಯರು ಹೇಳಿದ್ದಾರೆ. ನಿಮ್ಮ ಆಯುರ್ವೇದದಲ್ಲಿ ಏನಾದರೂ ಪರಿಹಾರ ಇದೆಯಾ?” ಎಂದೆಲ್ಲಾ ಕೇಳುವವರಿಗೆ ಇದೊಂದು ಪರಿಚಯಾತ್ಮಕ ಲೇಖನ. ಕಮಲಕ್ಕನಿಗೆ ಸಣ್ಣ ಪ್ರಾಯ. ಆಗಾಗ ಕಣ್ಣಿನಲ್ಲಿ ಬರುವ ತುರಿಕೆಗೆ ಯಾವಾಗಲೋ ವೈದ್ಯರು ಬರೆದುಕೊಟ್ಟ ಡೆಕ್ಸಾಮಿಥಾಸೋನ್ ಹಾಕುತ್ತಿದ್ದಾಳೆ. ಡ್ರಾಪ್ಸ್ ಹಾಕಿದಾಗ ಕಡಿಮೆ ಆಗುತ್ತದೆ. ಬಿಟ್ಟರೆ ಮತ್ತೆ ಶುರು ಆಗ್ತದೆ. ಆದರೆ ಅದರ ಅಡ್ಡ ಪರಿಣಾಮದಿಂದ ಕಣ್ಣಿನ ಒಳಗಿನ ಪ್ರೆಶ್ಶರ್ ಹೆಚ್ಚುವ ಗ್ಲೋಕೋಮಾ ರೋಗಕ್ಕೆ ತುತ್ತಾಗಿದ್ದಾಳೆ.
ಎಷ್ಟೋ ಕಣ್ಣಿನ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಕಣ್ಣಿನ ಭಾಗಕ್ಕೆ ಮಾಡುವ ವಿಶೇಷ ಚಿಕಿತ್ಸಾ ವಿಧಾನಗಳಿವೆ. ಅವುಗಳಿಗೆ ಕ್ರಿಯಾಕಲ್ಪಗಳು ಎನ್ನುತ್ತೇವೆ. ಔಷಧಗಳು ರಕ್ತದ ಮೂಲಕ ಕಣ್ಣಿನ ಒಳಗಿನ ಘಟಕಗಳಿಗೆ ತಲುಪುವುದು ಎಷ್ಟೋ ಸಲ ಆಸಾಧ್ಯವಾಗಿರುತ್ತದೆ. ಆಗ ಈ ಸ್ಥಾನಿಕ ಚಿಕಿತ್ಸೆ ಉಪಯೋಗಕ್ಕೆ ಬರುತ್ತದೆ. ರೋಗದ ಅವಸ್ಥೆ ಮತ್ತು ತೀವ್ರತೆಗನುಸಾರ, ಎಷ್ಟು ಹೊತ್ತು ಔಷಧ ಕಣ್ಣಿನ ಸಂಪರ್ಕದಲ್ಲಿ ಇರಬೇಕೆಂಬುದನ್ನು ತೀರ್ಮಾನಿಸಬಹುದು. ಅವುಗಳನ್ನು ಒಂದೊಂದಾಗಿ ನೋಡೋಣ.
ತರ್ಪಣ:
ಕಣ್ಣಿನ ಭಾಗದಲ್ಲಿ ಸುತ್ತ ಕಟ್ಟೆ ಕಟ್ಟಿ, ಮೇದಸ್ಸು, ತುಪ್ಪ ಅಥವಾ ತೈಲದ್ರವ್ಯಗಳನ್ನು ಒಳಗೆ ಇರಿಸಿ ಕಣ್ಣನ್ನು ಪೋಷಿಸುವ ಚಿಕಿತ್ಸೆ. ಕಣ್ಣು ಮಂಜಾಗಿ ಕಾಣುವುದು, ಕಣ್ಣು ಒಣಗುವುದು, ಕಣ್ಣಿನ ಅಲರ್ಜಿ ಸಮಸ್ಯೆ, ಕಣ್ಣು ರೆಪ್ಪೆಯ ನೋವು ಮತ್ತು ಮುಚ್ಚುವುದು ತೆರೆಯುವುದು ಕಷ್ಟವಾಗುವುದು, ಕಣ್ಣು ರೆಪ್ಪೆಯ ಕೂದಲು ಉದುರುವುದು ಇತ್ಯಾದಿಗಳಲ್ಲಿ ಅತ್ಯಂತ ಪರಿಣಮಕಾರಿ. ಉತ್ತಮ ನಿದ್ರೆ, ಕಣ್ಣಿನ ಶುಭ್ರತೆ, ಕಣ್ಣಿನ ಬಣ್ಣ ಸರಿಯಾಗಿರುವುದು, ಬಣ್ಣಗಳನ್ನು ಸರಿಯಾಗಿ ಗುರುತಿಸುವ ಸಾಮರ್ಥ್ಯ, ಬೆಳಕಿಗೆ ಕಣ್ಣುಗಳ ಸರಿಯಾದ ಸ್ಪಂದನ, ಕಣ್ಣುಗಳ ಹೆಚ್ಚಿದ ಕರ‍್ಯಸಾಮರ್ಥ್ಯ ಇದರ ಪ್ರಯೋಜನಗಳು.
ಆಶ್ಚ್ಯೋತನ:
ತೆರೆದ ಕಣ್ಣುಗಳಿಗೆ ದ್ರವರೂಪದ ಔಷಧದ ಬಿಂದುಗಳನ್ನು ಹಾಕುವುದು. ಇದು ಎಲ್ಲಾ ಕಣ್ಣಿನ ಚಿಕಿತ್ಸೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಮತ್ತು ಎಲ್ಲಾ ಸಂದರ್ಭಗಳಲ್ಲೂ ಹಿತವಾಗಿರುವುದು. ಕಣ್ಣುಗಳಲ್ಲಿ ನೋವು, ತುರಿಕೆ, ಕಣ್ಣಿನಲ್ಲಿ ಏನೋ ವಸ್ತು ಸಿಕ್ಕಿಕೊಂಡಂತೆ ಅನುಭವವಾಗುವುದು, ಅಧಿಕ ಕಣ್ಣೀರು, ಉರಿ, ಕೆಂಗಣ್ಣು, ಊತ ಇತ್ಯಾದಿಗಳಲ್ಲಿ ಉಪಕಾರಿ.
ಉದಾಹರಣೆಗೆ, ವಾತದಿಂದ ಉಂಟಾದ ಕಣ್ಣುನೋವಿನ ತೊಂದರೆಗಳಲ್ಲಿ ಹಾಲು ಮತ್ತು ತುಪ್ಪದ ಬಿಂದುಗಳನ್ನು ಹಾಕುವಂಥದ್ದು, ಕೆಂಗಣ್ಣು ಮುಂತಾದ ಉರಿಯೂತ ಸಂದರ್ಭಗಳಲ್ಲಿ ತ್ರಿಫಲಾ ಕಷಾಯದ ಹನಿಗಳನ್ನು ಹಾಕುವುದು. ಕಫದ ಕಾರಣದ ನೇತ್ರರೋಗಗಳಲ್ಲಿ ಶುಂಠಿ, ತ್ರಿಫಲಾ, ಭದ್ರಮುಷ್ಠಿ, ಕಹಿಬೇವು ಮತ್ತು ಆಡುಸೋಗೆ ಮಿಶ್ರಮಾಡಿ ಕುದಿಸಿ, ಸೋಸಿ ಅದರ ಹನಿಗಳನ್ನು ಕಣ್ಣಿಗೆ ಹಾಕುವಂಥದ್ದು.
ಸೇಕ:
ದ್ರವರೂಪದ ಔಷಧಗಳನ್ನು ಸಪೂರ ಧಾರೆಯಾಗಿ ಮುಚ್ಚಿದ ಕಣ್ಣಿನ ರೆಪ್ಪೆಗಳ ಮೇಲೆ ಸುರಿಯುವುದು. ಔಷಧ ದ್ರವ್ಯಗಳ ರಸ, ಕಷಾಯ, ಹಾಲು, ಕಬ್ಬಿನ ರಸ ಇತ್ಯಾದಿಗಳ ಬಳಕೆ ಇದೆ.
ಉದಾಹರಣೆಗೆ,
ಕಣ್ಣು ನೋವಿರುವಾಗ ನುಗ್ಗೆ ಎಲೆಗಳ ರಸವನ್ನು ಈ ರೀತಿ ಸುರಿಯುವುದು.
ಅಂಜನ:
ಔಷಧದ್ರವ್ಯಗಳನ್ನು ಪೇಸ್ಟ್ ರೂಪದಲ್ಲಿ ಕೆಳಗಿನ ರೆಪ್ಪೆಯ ಒಳಭಾಗಕ್ಕೆ ಒಂದು ತುದಿಯಿಂದ ಮತ್ತೊಂದು ತುದಿಗೆ ಹಚ್ಚುವುದು. ಒಂದಷ್ಟು ಹೊತ್ತು ಕಣ್ಣೀರು ಹರಿದು ನಿಂತ ನಂತರ ಔಷಧವನ್ನು ಶುದ್ಧ ನೀರಿನ ಮೂಲಕ ತೊಳೆಯಬೇಕು. ದೋಷ, ಕಾಯಿಲೆಗಳು ಪೂರ್ಣರೂಪದಲ್ಲಿ ವ್ಯಕ್ತವಾದಾಗ ಈ ಚಿಕಿತ್ಸೆ ಕೈಗೊಳ್ಳಬೇಕು. ತೀವ್ರರೂಪದ ಕೆಂಗಣ್ಣು, ಕಣ್ಣೀರಿನ ಸ್ರಾವ, ನೋವು, ಊತ ಇದ್ದಾಗ ಈ ಚಿಕಿತ್ಸೆ ಮಾಡಲೇಬಾರದು. ಇದು ಮನೆಯಲ್ಲಿ ತಾವೇ ಮಾಡಿಕೊಳ್ಳುವ ವಿಧಾನವಲ್ಲ. ತಜ್ಞರ ಬಳಿಯೇ ಈ ಚಿಕಿತ್ಸೆ ಪಡೆಯುವುದು ಸೂಕ್ತ. ಇಲ್ಲವಾದಲ್ಲಿ ಅನಗತ್ಯ ಆತಂಕಕ್ಕೆ ಕಾರಣವಾಗಬಹುದು. ಅಥವಾ ರೋಗ ಉಲ್ಬಣಿಸಿ ಕಣ್ಣಿಗೆ ಮಾರಕವಾಗಬಹುದು. ರೋಗಕ್ಕನುಸರಿಸಿ ಔಷಧಗಳ ಆಯ್ಕೆ, ಮಾಡುವ ವಿಧಾನ, ಮಾಡುವಾಗ ಉಂಟಾಗುವ ಕಣ್ಣುರಿ, ಕಣ್ಣೀರು ಎಲ್ಲವನ್ನೂ ನಿಭಾಯಿಸಬೇಕು. ವೈದ್ಯರ ಕೌಶಲ್ಯ ಇಲ್ಲದೇ ಹೋದಲ್ಲಿ ರೋಗಿಯು ಈ ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸುವ ಸಾಧ್ಯತೆ ಹೆಚ್ಚು. ನಮ್ಮಲ್ಲಿ ತ್ರಿಫಲಾದಿ ರಸಕ್ರಿಯಾ, ಪಥ್ಯಾದಿ ವರ್ತಿ, ನಯನಸುಖಾ ವರ್ತಿ, ಕೋಕಿಲಾ ವರ್ತಿ, ಚಂದ್ರೋದಯಾ ವರ್ತಿ, ಚಂದನಾದಿ ವರ್ತಿ ಇತ್ಯಾದಿ ಇನ್ನೂ ಅನೇಕ ಪ್ರಯೋಗಗಳನ್ನು ಬಳಸುತ್ತೇವೆ. ಈ ರೀತಿ ನೂರಾರು ಪ್ರಯೋಗಗಳಿವೆ. ಕಾಯಿಲೆಗನುಸರಿಸಿ ಔಷಧಗಳನ್ನು ಕುಶಲ ವೈದ್ಯರು ಆರಿಸಿ ಸಿದ್ಧಪಡಿಸಿಟ್ಟುಕೊಂಡಿರುತ್ತಾರೆ.
ವಿಡಾಲಕ:
ಕಣ್ಣು ಮುಚ್ಚಿದ ಸ್ಥಿತಿಯಲ್ಲಿ ರೆಪ್ಪೆಗಳ ಮೇಲೆ, ರೆಪ್ಪೆಯ ಕೂದಲುಗಳನ್ನು ಹೊರತುಪಡಿಸಿ, ಔಷಧ ದ್ರವ್ಯಗಳನ್ನು ಪೇಸ್ಟ್ ಮಾಡಿ ಹಚ್ಚುವುದು. ಕಣ್ಣುಗಳಲ್ಲಿ ಉರಿ, ಸ್ರಾವ, ಅತಿಯಗಿ ಕಣ್ಣೀರು ಬರುವುದು, ಊತ, ಕೆಂಪಗಾಗುವುದು, ನೋವು, ತುರಿಕೆ, ಕಣ್ಣುಗಳಲ್ಲಿ ಏನೋ ಸಿಕ್ಕಿಕೊಂಡAತೆ ಆಗುವುದು ಇತ್ಯಾದಿಗಳಲ್ಲಿ ಉಪಯುಕ್ತ.
ಊದಾಹರಣೆಗೆ, ಕಣ್ಣು ನೋವು ಇದ್ದಾಗ ಅಣಿಲೆ ಕಾಯಿಗಳನ್ನು ತುಪ್ಪದಲ್ಲಿ ಹುರಿದು, ಹುಡಿ ಮಾಡಿ, ಪೇಸ್ಟ್ ಮಾಡಿ ಹಚ್ಚುವುದು. ಲೋಳೆಸರದ ಎಲೆಗಳ ಲೋಳೆಭಾಗವನ್ನು ಲೇಪಿಸುವುದು, ಅಣಿಲೆ ಮತ್ತು ಶುಂಠಿ ಹುಡಿಗಳ ಪೇಸ್ಟ್ ಮಾಡಿ ಹಚ್ಚುವುದು.
ಪಿಂಡೀ:
ಔಷಧಗಳನ್ನು ನೇರವಾಗಿ ರೆಪ್ಪೆಗಳಿಗೆ ಹಚ್ಚುವ ಬದಲು, ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ, ಕಣ್ಣು ಮುಚ್ಚಿ ರೆಪ್ಪೆಗಳ ಮೇಲೆ ಇಡುವುದು. ಕಣ್ಣಿನ ಕಾಯಿಲೆಗಳ ಎಲ್ಲಾ ಅವಸ್ಥೆಗಳಲ್ಲೂ, ಅದರಲ್ಲೂ ವಿಶೇಷವಾಗಿ ಅಲರ್ಜಿ ಹಾಗೂ ಸೋಂಕಿನ ಕಾರಣದಿಂದ ಬರುವ ಕೆಂಗಣ್ಣು (ಅಭಿಷ್ಯಂದ) ಸಂದರ್ಭಗಳಲ್ಲಿ ಆರಂಭಿಕವಾಗಿ ಬಳಸಬಹುದು. ನುಗ್ಗೆ ಎಲೆಗಳನ್ನು ಜಜ್ಜಿ ಜೇನಿನೊಂದಿಗೆ ಅಥವಾ ಕಹಿಬೇವಿನ ಎಲೆಗಳು ಮತ್ತು ತ್ರಿಫಲಾ ಮಿಶ್ರ ಮಾಡಿ ಈ ರೀತಿ ಉಪಯೋಗಿಸಬಹುದು. ಜಾಜಿಮಲ್ಲಿಗೆಯ ಮೊಗ್ಗುಗಳನ್ನು ಬಟ್ಟೆಯಲ್ಲಿ ಕಟ್ಟಿ ಇಡುವುದರಿಂದ ನೋವು, ಉರಿ, ಕಣ್ಣೀರು ಸ್ರಾವ ನಿಲ್ಲುವುದು. ಜಜ್ಜಿದ ನೆಲನೆಲ್ಲಿ ಎಲೆ, ಮಾವಿನ ಎಲೆಗಳು ಕಹಿಬೇವಿನ ಎಲೆ, ಜ್ಯೇಷ್ಠಮಧು ಬೇರುಗಳನ್ನು ಕಣ್ಣುಗಳ ಸೋಂಕುಗಳಲ್ಲಿ ಇವುಗಳಲ್ಲಿ ಕೇವಲ ಒಂದನ್ನೇ ಆಗಿ ಬಳಸಬಹುದು.
ತಿವ್ರರೋಗ ಸ್ಥಿತಿ ಇದ್ದಾಗ ರೋಗಕ್ಕೆ ತಕ್ಕಂತೆ ಸೇಕ, ವಿಡಾಲಕ, ಪಿಂಡೀ ವಿಧಾನಗಳನ್ನು ಆರಂಭದಲ್ಲಿ ಮಾಡಿ, ನಂತರ ಉಳಿದ ವಿಧಾನಗಳನ್ನು ಅನುಸರಿಸುತ್ತೇವೆ. ಕೆಂಗಣ್ಣು, ದೃಷ್ಟಿದೋಷದಿಂದ ತೊಡಗಿ ರೆಟಿನಾದ ಕಾಯಿಲೆಗಳವರೆಗೂ ಅತ್ಯಂತ ಪರಿಣಾಮಕಾರಿಯಾದ ನೂರಾರು ಔಷಧಯೋಗಗಳನ್ನು ನಾವು ಆಯುರ್ವೇದದಲ್ಲಿ ಬಳಸುತ್ತೇವೆ.
ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ. ಬಿ.ಎ.ಎಂ.ಎಸ್., ಎಂ.ಎಸ್.(ಆಯು)
ಆಡಳಿತ ನಿರ್ದೇಶಕ ಹಾಗೂ ಆಯುರ್ವೇದ ತಜ್ಙ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ
ನರಿಮೊಗರು, ಪುತ್ತೂರು.
ಮೊಬೈಲ್: 9740545979
- Friday
- November 1st, 2024