ಅದೊಂದು ದಿನ ರಾತ್ರಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಜೋರಾಗಿ ಮಳೆ ಸುರಿಯುತ್ತಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎರಡು ದಿವಸಗಳ ಕಾಲ ಆಫೀಸ್ ಗೆ ರಜೆ ಹಾಕಿ ನಾಳೆ ತನ್ನೂರಿಗೆ ಹೊರಡಲು ಸಿದ್ಧನಾಗಿದ್ದ. ಆದರೆ ಊರಿಗೆ ಹೋಗುವ ಮೊದಲು ಬಾಕಿ ಇರುವ ತನ್ನ ಆಫೀಸ್ ಕೆಲಸಗಳನ್ನು ಇಂದೇ ಮಾಡಿ ಮುಗಿಸಬೇಕೆಂದು ಆತ ಕಂಪ್ಯೂಟರ್ ಎದುರು ಕುಳಿತ.
ರಾತ್ರಿ ಸುಮಾರು 9:00 ಗಂಟೆಯ ಸಮಯ. ತನ್ನ ಕೆಲಸದಲ್ಲಿ ಮಗ್ನನಾಗಿದ್ದ ರಮೇಶನಿಗೆ ತನ್ನ ಮನೆಯ ಮೇಲೆ ಏನೋ ಬಿದ್ದಂತೆ ಶಬ್ದ ಕೇಳಿಸಿತು. ತಕ್ಷಣ ಆ ಶಬ್ದ ಏನಾಗಿರಬಹುದೆಂದು ಯೋಚಿಸುತ್ತಾ ಬಾಗಿಲು ತೆರೆದ ಆತನಿಗೆ ಅಲ್ಲಿ ಏನೂ ಕಾಣಿಸಲಿಲ್ಲ. ಮನೆಯ ಸುತ್ತಲೂ ಟಾರ್ಚ್ ಲೈಟ್ ಹಾಕಿ ನೋಡಿ ಇದೇನೋ ತನ್ನ ಭ್ರಮೆ ಇರಬೇಕೆಂದು ಅಂದುಕೊಳ್ಳುತ್ತಾ ಆತ ಮನೆಯೊಳಗಡೆ ಬಂದು ಬಾಗಿಲು ಹಾಕಿ ಮತ್ತೆ ಕೆಲಸ ಮಾಡಲು ಕುಳಿತ. ಹಾಗೆ ಕೆಲಸ ಮಾಡುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಕರೆಂಟ್ ಹೋಯಿತು. ಕರೆಂಟ್ ಇಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ, ಗುಡುಗು-ಸಿಡಿಲು ಬೇರೆ ಹೆಚ್ಚಾಗುತ್ತಿದೆ, ಇನ್ನುಳಿದ ಕೆಲಸಗಳನ್ನು ನಾಳೆ ಬೆಳಿಗ್ಗೆ ಪೂರ್ಣಗೊಳಿಸಿ ನಂತರ ಊರಿಗೆ ಹೊರಡೋಣ ಎನ್ನುತ್ತಾ ಊಟ ಮಾಡಿ ಮಲಗಿದ ರಮೇಶನಿಗೆ ಇನ್ನೇನು ನಿದ್ರೆ ಹತ್ತಿತ್ತು ಅನ್ನುವಷ್ಟರಲ್ಲಿ ಅಡುಗೆ ಕೋಣೆಯಿಂದ ಜೋರಾಗಿ ಪಾತ್ರೆ ಬೀಳುವ ಶಬ್ದ ಕೇಳಿಸಿತು. ಮನೆಯಲ್ಲಿ ಒಬ್ಬನೇ ಇದ್ದ ಆತನಿಗೆ ಆ ಶಬ್ದ ಕೇಳಿ “ಫಟ್” ಎಂದು ಎಚ್ಚರವಾಯಿತು. ಈ ಬಾರಿ ಸ್ವಲ್ಪ ಭಯಭೀತನಾಗಿದ್ದ ರಮೇಶ ಧೈರ್ಯ ಮಾಡಿ ಟಾರ್ಚ್ ಲೈಟ್ ಹಿಡಿದು ಅಡುಗೆ ಕೋಣೆಗೆ ಹೋಗಿ ನೋಡಿದ. ಅಲ್ಲಿ ಸ್ಟೌವ್ ಮೇಲೆ ಇರಿಸಿದ್ದ ಹಾಲಿನ ಪಾತ್ರೆ ಕೆಳಕ್ಕೆ ಬಿದ್ದು ಹಾಲೆಲ್ಲಾ ಚೆಲ್ಲಿ ಹೋಗಿತ್ತು.
ಮನೆಯ ಮೇಲಿನಿಂದ ಕೇಳಿದ ಶಬ್ದ, ಇದ್ದಕ್ಕಿದ್ದಂತೆ ಅಡುಗೆ ಕೋಣೆಯಲ್ಲಿ ಹಾಲಿನ ಪಾತ್ರೆ ಬಿದ್ದದ್ದು ಇದನ್ನೆಲ್ಲಾ ಗಮನಿಸಿದ ರಮೇಶನಿಗೆ ಭಯದ ಜೊತೆಗೆ ಆಶ್ಚರ್ಯವೂ ಆಯಿತು. ಗೆಳೆಯರಿಗೆ ಕರೆ ಮಾಡಿ ಬರಹೇಳೋಣವೆಂದರೆ ಗುಡುಗು-ಸಿಡಿಲಿನಿಂದಾಗಿ ನೆಟ್ ವರ್ಕ್ ಕೂಡ ಇರಲಿಲ್ಲ. “ನೆಟ್ ವರ್ಕ್ ಇದ್ದರೂ ಈ ರಾತ್ರಿಯಲ್ಲಿ, ಅದೂ ಇಷ್ಟು ಜೋರಾಗಿ ಮಳೆ ಸುರಿಯುತ್ತಿರುವಾಗ ಯಾರು ಬರುತ್ತಾರೆ” ಎಂದು ಮನಸ್ಸಿನಲ್ಲೇ ಅಂದುಕೊಂಡ ರಮೇಶನಿಗೆ ನಿದ್ರಿಸಲು ಧೈರ್ಯ ಬಾರದೇ ಭಯದಿಂದ ಸೂರ್ಯೋದಯದ ನಿರೀಕ್ಷೆಯಲ್ಲಿ ಪದೇ ಪದೇ ಗೋಡೆಯ ಮೇಲೆ ನೇತುಹಾಕಿದ್ದ ಗಡಿಯಾರದ ಕಡೆಗೆ ನೋಡುತ್ತಾ ಕುಳಿತಿದ್ದ.
ಅಂತೂ ಇಂತೂ ಕೊನೆಗೂ ಮುಂಜಾನೆ 6:00 ಗಂಟೆ ಆಯಿತು. ರಾತ್ರಿ ಪೂರ್ತಿ ಭಯದಿಂದ ನಿದ್ರೆಗೆಟ್ಟ ರಮೇಶನಿಗೆ ಹೋದ ಪ್ರಾಣ ಮರಳಿ ಬಂದಂತಾಯಿತು. ಆದರೂ ಆತನ ಮನಸ್ಸಿನಲ್ಲಿ “ಕಳೆದ ರಾತ್ರಿ ಆ ಶಬ್ದ ಹೇಗೆ ಕೇಳಿಸಿತು..?” “ಆ ಹಾಲಿನ ಪಾತ್ರೆ ಹೇಗೆ ಕೆಳಕ್ಕೆ ಬಿದ್ದಿತ್ತು..?” ಎನ್ನುವ ಪ್ರಶ್ನೆಗಳು ತಲೆ ತುಂಬಾ ಓಡಾಡುತ್ತಿದ್ದವು. ಈ ಪ್ರಶ್ನೆಗಳಿಗೆ ಉತ್ತರ ಹುಡುಕಲೇಬೇಕೆಂದು ತೀರ್ಮಾನಿಸಿದ ರಮೇಶ ಸೀದಾ ಅಡುಗೆ ಕೋಣೆಗೆ ಹೋದ. ಆದರೆ ಅಲ್ಲಿ ಕಳೆದ ರಾತ್ರಿ ಬಿದ್ದ ಹಾಲಿನ ಪಾತ್ರೆಯೇನೋ ಇತ್ತು, ಆದರೆ ಚೆಲ್ಲಿದ್ದ ಹಾಲು ಇರಲಿಲ್ಲ. ಬದಲಾಗಿ ಅಲ್ಲಿ ಬೆಕ್ಕಿನ ಹೆಜ್ಜೆಗಳು ಕಾಣಿಸಿದವು. ಹಾಗೆಯೇ ಕಳೆದ ರಾತ್ರಿ ತಾನು ಊಟ ಮಾಡಿ ಮಲಗುವ ಸಂಧರ್ಭದಲ್ಲಿ ಅಡುಗೆ ಕೋಣೆ ಕಿಟಕಿಯ ಬಾಗಿಲುಗಳನ್ನು ಮುಚ್ಚಲು ಮರೆತದ್ದು ನೆನಪಾಗಿ ಹಾಲಿನ ಪಾತ್ರೆ ಕೆಳಕ್ಕೆ ಬೀಳಲು ಕಾರಣ ಬೆಕ್ಕು ಎಂದು ತಿಳಿಯಿತು. ನಂತರ ಮನೆಯ ಮೇಲೆ ಏನೋ ಬಿದ್ದಂತೆ ಕೇಳಿಸಿದ ಶಬ್ದಕ್ಕೆ ಕಾರಣವೇನಿರಬಹುದೆಂದು ತಿಳಿಯಲು ಹೊರಗೆ ಬಂದು ಮನೆಯ ಛಾವಣಿಯನ್ನು ನೋಡಿದಾಗ ಮರದ ಕೊಂಬೆಯೊಂದು ತುಂಡಾಗಿ ಬಿದ್ದಿರುವುದು ಕಂಡುಬಂತು. ಇದನ್ನೆಲ್ಲಾ ನೋಡಿದ ರಮೇಶ ಕಳೆದ ರಾತ್ರಿ ಕೇಳಿಸಿದ ಶಬ್ದಗಳು ಹಾಗೂ ಆ ಶಬ್ದಗಳಿಗೆ ಹೆದರಿ ರಾತ್ರಿಯಿಡೀ ತಾನು ನಿದ್ದೆಗೆಟ್ಟು ಕುಳಿತದ್ದನ್ನು ನೆನಪಿಸಿಕೊಂಡು ನಗುತ್ತಾ “ಭಯಪೂರಿತ ಮನಸ್ಸಿನಿಂದ ಒಂಟಿಯಾಗಿದ್ದರೆ ಕೇಳಿಸುವ ಚಿಕ್ಕ ಶಬ್ದವೂ ಕೂಡ ಮನಸ್ಸಿನಲ್ಲಿ ದೊಡ್ಡ ಭಯವನ್ನು ಹುಟ್ಟುಹಾಕುತ್ತದೆ” ಎಂಬ ಮಾತನ್ನು ನೆನಪಿಸಿಕೊಳ್ಳುತ್ತಾ ರಾತ್ರಿ ಬಾಕಿಯಾಗಿದ್ದ ತನ್ನ ಆಫೀಸ್ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಊರಿಗೆ ಹೊರಡಬೇಕೆಂದು ರಮೇಶ ಕಂಪ್ಯೂಟರ್ ಎದುರು ಕುಳಿತ…
✍️ಉಲ್ಲಾಸ್ ಕಜ್ಜೋಡಿ
- Saturday
- November 23rd, 2024