ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ, ಕಡಬಕ್ಕೆ ಅ.೬ರಂದು ಶೌರ್ಯ ರಥಯಾತ್ರೆ ಆಗಮನವಾಗಲಿದ್ದು ಶೌರ್ಯ ಸಂಗಮ ಕಾರ್ಯಕ್ರಮವು ಸುಳ್ಯ ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಜರುಗಲಿದೆ ಎಂದು ವೆಂಕಟ್ ವಳಲಂಬೆ ತಿಳಿಸಿದರು.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮದು ಶೌರ್ಯ ಪರಾಕ್ರಮಗಳ ಇತಿಹಾಸ, ಸಾವಿರಾರು ವರ್ಷಗಳಿಂದ ಈ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಣಗಳು ನಡೆಯುತ್ತಲೇ ಇದ್ದರೂ ಅದನ್ನು ದಿಟ್ಟವಾಗಿ ಸಮರ್ಪಕವಾಗಿ ಎದುರಿಸುತ್ತಾ ನಮ್ಮ ಸನಾತನ ಧರ್ಮವನ್ನು ಈ ಪವಿತ್ರ ಭರತ ಭೂಮಿಯನ್ನು ಸಂರಕ್ಷಿಸುವಲ್ಲಿ ಸಾವಿರಾರು ವೀರ ಪರಾಕ್ರಮಿಗಳು ತಮ್ಮ ಜೀವನವನ್ನೇ ಸಮರ್ಪಿಸಿ, ಬಲಿದಾನಗೈದು ನಮಗೆ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರ ತ್ಯಾಗ ಬಲಿದಾನಗಳು ನಮ್ಮ ಸನಾತನ ಧರ್ಮವು ಸುರಕ್ಷಿತವಾಗಿ ನಮ್ಮ ಕಾಲಖಂಡದವರಿಗೆ ತಲುಪಿದ್ದು, ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಕಾರ್ಯವು ಪ್ರತಿಯೊಬ್ಬ ಹಿಂದುವಿನ ಮೇಲೆ ಇದೆ. ವಿಶ್ವದ ಸಮಸ್ತ ಹಿಂದುಗಳನ್ನು ಜಾಗೃತಗೊಳಿಸಲು 1964ರಲ್ಲಿ ಜನ್ಮತಾಳಿದ ವಿಶ್ವ ಹಿಂದೂ ಪರಿಷದ್, “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಧೈಯ ಮಂತ್ರದೊಂದಿಗೆ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಬಜರಂಗದಳದ ನೇತೃತ್ವದಲ್ಲಿ ದೇಶಾದ್ಯಂತ ಶೌರ್ಯ ಜಾಗರಣ ರಥ ಯಾತ್ರೆಯು ನಡೆಯುತ್ತಿದೆ. ಈ ಶೌರ್ಯ ಜಾಗರಣ ರಥ ಯಾತ್ರೆಯು 25 ಸೆಪ್ಟೆಂಬರ್ 2023ರಂದು ಚಿತ್ರದುರ್ಗದಿಂದ ಹೊರಟು 06 ಅಕ್ಟೋಬರ್ 2023 ರಂದು ಸಂಜೆ 5-00 ಗಂಟೆಗೆ ಸುಳ್ಯ ತಾಲೂಕಿನ ಸಂಪಾಜೆಯ ಮೂಲಕ ಪ್ರವೇಶಿಸಲಿರುವುದು, ಹಿಂದುತ್ವದ ಶೌರ್ಯದ ಪ್ರತೀಕವಾದ ಶೌರ್ಯ ರಥವನ್ನು ಸಂಪಾಜೆಯಲ್ಲಿ ಭವ್ಯವಾಗಿ ಸ್ವಾಗತಿಸಿ ವಾಹನ ಜಾಥಾದ ಮುಖಾಂತರ “ಬೃಹತ್ ಶೋಭಾಯಾತ್ರೆ”ಯಲ್ಲಿ ಕರೆತಂದು ಸಂಜೆ 5-30ಕ್ಕೆ ಸುಳ್ಳದ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ“ಬೃಹತ್ ಹಿಂದೂ ಶೌರ್ಯ ಸಂಗಮ”ನಡೆಯಲಿರುವುದು ಎಂದು ತಿಳಿಸಿದರು. ಅಲ್ಲದೇ ಈ ಸಭಾಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣವನ್ನು ರಘು ಜಿ. ಸಕಲೇಶಪುರ ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿ ಸದಸ್ಯರು, ದೇವಿಪ್ರಸಾದ್ ಶೆಟ್ಟಿ ವಿಭಾಗ ಕಾರ್ಯದರ್ಶಿ ವಿ.ಹೆಚ್.ಪಿ. ಮಂಗಳೂರು ವಿಭಾಗ ,ಡಾ. ಕೃಷ್ಣ ಪ್ರಸನ್ನ ಜಿಲ್ಲಾ ಅಧ್ಯಕ್ಷರು, ವಿ.ಹೆಚ್.ಪಿ, ಪುತ್ತೂರು ಜಿಲ್ಲೆ ಭುಜಂಗ ಕುಲಾಲ್ ವಿಭಾಗ್ ಸಂಯೋಜಕರು, ಮಂಗಳೂರು ವಿಭಾಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸೋಮಶೇಖರ ಪೈಕ ಮಾತಾನಾಡುತ್ತಾ ಎಲ್ಲಾ ಹಿಂದುಗಳು ಒಂದಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ವೆಂಕಟ್ ದಂಬೆಕೋಡಿ , ರಜತ್ ಅಡ್ಕಾರ್ ,ಹರಿಪ್ರಸಾದ್ ಎಲಿಮಲೆ, ದೇವಿಪ್ರಸಾದ್ ಅತ್ಯಾಡಿ , ಪ್ರಕಾಶ್ ಉಪಸ್ಥಿತರಿದ್ದರು.
- Thursday
- November 21st, 2024