ಕಿಕ್ಕಿರಿದು ಸೇರಿದ ನಾಯಕರು , ಕಾರ್ಯಕರ್ತರು. ಶಾಂತಚಿತ್ತಾರಾಗಿ ಸಮಸ್ಯೆಗಳನ್ನು ಆಲಿಸಿದ ಗಟ್ಟಿ.ಏನೂ ಗೊತ್ತಿಲ್ಲದ ವ್ಯಕ್ತಿಯೊಬ್ಬರು ನಮ್ಮನ್ನು ಉಚ್ಛಾಟನೆಗೆ ಶಿಪಾರಸು ಮಾಡುತ್ತಾರೆಂದಾದರೆ ಇದಕ್ಕಿಂತ ದೊಡ್ಡ ದುರ್ಧೈವ ಕಾಂಗ್ರೆಸ್ ಪಕ್ಷಕ್ಕೆ ಬೇರೊಂದಿಲ್ಲ- ಕರಿಕ್ಕಳ.ವಿಧಾನಸಭಾ ಚುನಾವಣೆಯ ಬಳಿಕ ಸುಳ್ಯ ಕಾಂಗ್ರೆಸ್ ನಲ್ಲಿ ಉಂಟಾದ ಗೊಂದಲಗಳ ನಿವಾರಣೆಗೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ಸೆ.೨೬ರಂದು ನಡೆಯಿತು. ಸಭೆಗೆ ಆಗಮಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿಯವರು ಪಕ್ಷ ಸಂಘಟನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರೆ, ಸಭೆಗೆ ಆಗಮಿಸಿದ ಕಾಂಗ್ರೆಸ್ ಉಚ್ಚಾಟಿತ ,ನೋಟಿಸ್ ಪಡೆದ ನಾಯಕರು ಪಕ್ಷಕ್ಕಾಗಿ ನಿಷ್ಠಾವಂತರಾಗಿ ದುಡಿದವರು ನಾವು, ನಮ್ಮ ಮೇಲೆ ಶಿಸ್ತು ಕ್ರಮ ಯಾಕೆ ಎಂದು ಉಸ್ತುವಾರಿಗಳ ಮುಂದೆ ತಮ್ಮ ಅಹವಾಲು ಸಲ್ಲಿಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮಮತಾ ಗಟ್ಟಿಯವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ನಾವು ಕುಟುಂಬ ಸದಸ್ಯರಂತೆ. ಮನೆಯೊಳಗೆ ಸಣ್ಣ ಪುಟ್ಟ ಸಮಸ್ಯೆಗಳು ಬರುವುದು ಸಹಜ. ಅದು ಶಾಶ್ವತವಲ್ಲ. ನಮಗೆ ಪಕ್ಷ ಸಂಘಟನೆಯೇ ಮುಖ್ಯ. ಆದ್ದರಿಂದ ಎಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ದುಡಿಯೋಣ. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಂಘಟಿತರಾಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತರೋಣ” ಎಂದು ಸಲಹೆ ನೀಡಿದರು.ಬಳಿಕ ಸಭೆಯಲ್ಲಿ ಕಾರ್ಯಕರ್ತರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಯಿತು. ನ.ಪಂ. ಮಾಜಿ ಸದಸ್ಯ ಕೆ.ಗೋಕುಲ್ ದಾಸ್ ಅಭಿಪ್ರಾಯ ವ್ಯಕ್ತ ಪಡಿಸಿ,ಪಕ್ಷಕ್ಕೆ ನಿಷ್ಠಾರಾಗಿ ಕೆಲಸ ಮಾಡಿದ ೧೭ ಮಂದಿಯನ್ನು ಪಕ್ಷ ಅಮಾನತು ಮಾಡಿದ್ದು ಯಾಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರಲ್ಲದೆ, ವಿಧಾನಸಭಾ ಚುನಾವಣೆಯಲ್ಲಿ ನಾವು ಕೆಲಸ ಮಾಡಿದ್ದೇವೆ. ಸರಕಾರ ತಂದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದು ನಾವು ಆದರು ನಮ್ಮ ಮೇಲೆ ಶಿಸ್ತು ಕ್ರಮ ಮಾಡಿದ್ದು ನಮಗೆ ನೋವಾಗಿದೆ. ನಾಯಕರು ನೋಟಿನ ಹಿಂದೆ ಹೋಗಿರುವುದರಿಂದ ಸುಳ್ಯದಲ್ಲಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದರು. ಹಿರಿಯರಾದ ಬಾಪೂ ಸಾಹೇಬರು ಮಾತನಾಡಿ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಸಭೆ ಮಾಡಿ ಕಾಯರ್ತಕರ್ತರ ಅಭಿಪ್ರಾಯ ಪಡೆದು ಮುಂದೆ ಹೋಗಬೇಕು. ಯಾವುದೇ ಚುನಾವಣೆ ಇರಲಿ ಒಮ್ಮತದ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಬೇಕು” ಎಂದು ಸಲಹೆ ನೀಡಿದರು. ನಂದರಾಜ ಸಂಕೇಶರು ಅಭಿಪ್ರಾಯ ಮಂಡಿಸಿ,ಚುನಾವಣೆ ಸಂದರ್ಭ ಇಬ್ಬರು ಅಭ್ಯರ್ಥಿಯನ್ನು ಸುಳ್ಯಕ್ಕೆ ತಂದಿದ್ದೀರಿ. ಅವರು ಸುಳ್ಯದಲ್ಲಿ ಎಷ್ಟು ಸಂಘಟನೆ ಮಾಡಿದ್ದಾರೆ. ಸುಳ್ಯದ ಕಾಲೊನಿಗಳ ಬಗ್ಗೆ, ಸಮಸ್ಯೆ ವಿಚಾರಗಳ ಕುರಿತು ಅವರಿಗೆ ಎಷ್ಟು ಗೊತ್ತಿದೆ ಎಂದು ತಿಳಿದುಕೊಂಡಿದ್ದೀರಾ. ಚುನಾವಣೆಗೆ ಕಾರ್ಯಕರ್ತರ ಅಭ್ಯರ್ಥಿಯನ್ನು ನಿಲ್ಲಿಸಬೇಕೆ ಹೊರತು ನಾಯಕರ ಅಭ್ಯರ್ಥಿಯನ್ನು ನಿಲ್ಲಿಸಿದ ಪರಿಣಾಮ ಈ ಸ್ಥಿತಿ ಬಂದಿದೆ. ಆದ್ದರಿಂದ ಮುಂಬರುವ ಎಂ.ಪಿ.ಚುನಾವಣೆಗೆ ಒಮ್ಮತದ ಒಬ್ಬರೇ ಅಭ್ಯರ್ಥಿ ಇರಲಿ ಎಂದು ಹೇಳಿದರು.ತೇಜಕುಮಾರ್ ಬಡ್ಡಡ್ಕ ಮಾತನಾಡಿ, ಗ್ರಾಮ ಗ್ರಾಮದಲ್ಲಿ ಕೇಂದ್ರೀಕರಿಸಿಕೊಂಡು ಪಕ್ಷ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು. ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮಾತನಾಡಿ,ಕಾಂಗ್ರೆಸ್ ಪಕ್ಷದಲ್ಲಿ ಸುಳ್ಯದಲ್ಲಿ ದುಡಿಯುವ ವರ್ಗ ಒಂದಿದ್ದರೆ, ದುಡಿಯದೇ ಲಾಭ ಪಡೆಯುವ ವರ್ಗ ಇದೆ. ಸರಕಾರ ಬಂದಾಗ ಅವರು ಮುನ್ನಲೆಗೆ ಬರುತ್ತಾರೆ. ಈ ವ್ಯವಸ್ಥೆ ಬದಲಾಗಬೇಕು” ಎಂದು ಹೇಳಿದರು.ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ, ಕಲ್ಮಡ್ಕ ಗ್ರಾ.ಪಂ. ನಲ್ಲಿ ೯ ಸ್ಥಾನವನ್ನು ಕಾಂಗ್ರೆಸ್ ಗೆದ್ದು ಬಿಜೆಪಿಯ ಅಡ್ರಸ್ ಇಲ್ಲದಂತೆ ಮಾಡಿದವರು ನಾವು. ಬಿಜೆಪಿ ಭದ್ರಕೋಟೆಯಂತಿದ್ದ ಪಂಜದಲ್ಲಿ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತನನ್ನು ನಿಲ್ಲಿಸಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದೇವೆ. ನಾವು ಹಣಕ್ಕಾಗಿ ರಾಜಕೀಯ ಮಾಡುವವರಲ್ಲ. ಪಕ್ಷ ಗೆಲ್ಲಬೇಕೆಂದು ದುಡಿಯುವವರು. ಏನೂ ಗೊತ್ತಿಲ್ಲದ ವ್ಯಕ್ತಿಯೊಬ್ಬರು ನಮ್ಮನ್ನು ಉಚ್ಛಾಟನೆಗೆ ಶಿಪಾರಸು ಮಾಡುತ್ತಾರೆಂದಾದರೆ ಇದಕ್ಕಿಂತ ದೊಡ್ಡ ದುರ್ಧೈವ ಕಾಂಗ್ರೆಸ್ ಪಕ್ಷಕ್ಕೆ ಬೇರೊಂದಿಲ್ಲ” ಎಂದು ಹೇಳಿದರು. ಭವಾನಿಶಂಕರ ಕಲ್ಮಡ್ಕ ಮಾತನಾಡಿ, ನಾವು ಎಲ್ಲ ಹಂತದಲ್ಲಿಯೂ ಪಕ್ಷಕ್ಕಾಗಿ ಸೇವೆ ಸಲ್ಲಿಸಿದೆವು. ಆದರೆ ನಮ್ಮನ್ನು ಅಮಾನತು ಮಾಡಲಾಯಿತು. ಈ ವೇಳೆ ಬ್ಲಾಕ್ ಅಧ್ಯಕ್ಷರು ಎಲ್ಲವೂ ಸರಿಯಾಗುತ್ತದೆ ಸುಮ್ಮನಿರಿ ಎಂದು ಹೇಳಿದ್ದರು. ಎಲ್ಲರೂ ಸುಮ್ಮನಿz ಈ ಸ್ಥಿತಿ ಆಗಿರುವುದು. ಅಕ್ರಮ – ಸಕ್ರಮ ಸಮಿತಿಗೆ ಬಿಜೆಪಿಯವರ ನೇಮಕ ಆಗಿದೆ. ಅದಕ್ಕೆ ಅಧಿಕಾರಿಗಳನ್ನು ಬೊಟ್ಟು ಮಾಡಿ ತೋರಿಸುವುದಲ್ಲ. ಬ್ಲಾಕ್ ಕಾಂಗ್ರೆಸ್ ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ” ಎಂದು ಹೇಳಿದರು. ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾತನಾಡಿ,ಪಕ್ಷ ವಿರೋಧಿಗಳಿಗೆ ಶಿಸ್ತು ಕ್ರಮ ಆಗಲೇಬೇಕು. ಹಾಗಂದ ಮಾತ್ರಕ್ಕೆ ಪಕ್ಷಕ್ಕಾಗಿ ದುಡಿದವರ ಮೇಲೆ ಶಿಸ್ತು ಕ್ರಮ ಸರಿಯಲ್ಲ.ಇಬ್ಬರು ಅಭ್ಯರ್ಥಿಯನ್ನು ಇಲ್ಲಿ ಕಣಕ್ಕೆ ತಂದಿರುವುದರಿಂದಲೇ ಈ ಗೊಂದಲ ಹುಟ್ಟಿದೆ. ಮೊದಲು ಈ ಗೊಂದಲವನ್ನು ನಾಯಕರು ನಿವಾರಿಸಬೇಕು ಎಂದ ಅವರು, ಸಂಪಾಜೆಯ ಸಮಸ್ಯೆಯನ್ನು ನಾನು ಎಲ್ಲ ನಾಯಕರಲ್ಲಿ ಹೇಳಿದ್ದೆನೆ. ಅಲ್ಲಿ ನಮಗೆ ಹಿನ್ನಡೆಯಾದರೆ ನಾನು ಕಾರಣನಲ್ಲ. ಶಿಸ್ತು ಕ್ರಮಕ್ಕೆ ಒಳಗಾದವರಿಗೆ ಬೆಂಬಲ ನೀಡುವ ನಾಯಕರು ನಮ್ಮಲ್ಲಿದ್ದಾರೆ. ಅಲ್ಲಿ ನನ್ನನ್ನೆ ಪಕ್ಷದಿಂದ ಹೊರ ದಬ್ಬುವ ಕೆಲಸ ಆಗುತ್ತಿದೆ. ಪಕ್ಷ ವಿರುದ್ಧ ಕೆಲಸ ಮಾಡುವ ನಾಯಕರು ಇಲ್ಲಿ ವೇದಿಕೆಯ ಮೇಲೆ ಇದ್ದಾರೆ, ಕೆಳಗೂ ಇದ್ದಾರೆ. ಇದನ್ನು ಪಕ್ಷ ಗಮನಿಸಬೇಕು” ಎಂದು ಹೇಳಿದರು.ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಮಾತನಾಡಿ, ನನಗೂ ಶೋಕಾಸ್ ನೋಟೀಸ್ ಬಂದಿದೆ. ನಾನು ಕಾಂಗ್ರೆಸ್ ವಿರುದ್ಧ ಏನು ಮಾಡಿzನೆ? ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು, ಪಕ್ಷ ಟಿಕೆಟ್ ಘೋಷಣೆ ಮಾಡುವ ಮೊದಲು ಯಾರನ್ನೆ ನಾವು ಹೇಳಿರಬಹುದು. ಆದರೆ ಪಕ್ಷ ಅಭ್ಯರ್ಥಿಯನ್ನು ಅಧಿಕೃತಗೊಳಿಸಿದ ಸೂಚಿಸಿದ ಬಳಿಕ ಅವರ ಪರವೇ ಕೆಲಸ ಮಾಡಿದ್ದೆವೆ. ಆದರೂ ನೋಟೀಸ್ ಕೊಟ್ಟರು. ಕಣ್ಣಿದ್ದು ಯಾಕೆ ಕುರುಡರಂತಾದೆವು. ಬ್ಲಾಕ್ ಅಧ್ಯಕ್ಷರು ನಾನು ಕೆಲಸ ಮಾಡಿದ್ದೆನೆ ಎಂದು ಒಂದು ಮಾತು ಹೇಳಿದ್ದರೂ ನನಗೆ ಸಮಾಧಾನ ಆಗ್ತಿತ್ತು” ಎಂದು ಹೇಳಿದರು. ಎಲ್ಲರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಮಮತಾ ಗಟ್ಟಿಯವರುನಾವು ಇಲ್ಲಿಗೆ ಬಂದು ಅಹವಾಲು ಕೇಳಿಕೊಂಡಿವೆ.ಇಲ್ಲಿ ಎಲ್ಲರನ್ನು ಕರೆದ ಬಳಿಕ ಎಲ್ಲರೂ ಪಕ್ಷಕ್ಕಾಗಿ ದುಡಿಯೋಣ” ಎಂದು ಹೇಳಿದರು. ಬಳಿಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಮಾತನಾಡಿ, ಸುಳ್ಯ ಭಾಗದ ಮೂರು ಮಂದಿ ಸಂಸದರು ಬಿಜೆಪಿಯಲ್ಲಿ ಇದ್ದರೂ ಇಲ್ಲಿ ಕಾಂಗ್ರೆಸ್ ೬೫ ಸಾವಿರ ಮತ ಗಳಿಸಿದೆ ಎಂದರೆ ಕಾಂಗ್ರೆಸ್‌ನ ಶಕ್ತಿ ಎಷ್ಟು ಎಂಬಹುದನ್ನು ತಿಳಿದುಕೊಳ್ಳಬೇಕು. ಇಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಪಕ್ಷಕ್ಕಾಗಿ ಇದೇ ಒಗ್ಗಟ್ಟು ಇಟ್ಟುಕೊಂಡು ಮುಂದೆ ಸಾಗೋಣ” ಎಂದು ಹೇಳಿದರು.ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ “ಕಾಂಗ್ರೆಸ್‌ನಲ್ಲಿ ನಾನು ಎಂಬ ಪದ ಯಾರೂ ಬಳಸುವುದು ಬೇಡ. ನಾವು ಎಂಬ ಪದವನ್ನು ಇಟ್ಟಾಗ ಪಕ್ಷ ಒಗ್ಗಟ್ಟಾಗಿ ಸಾಗಲು ಸಾಧ್ಯ. ಎಲ್ಲ ನಾಯಕರು ಕೂಡಾ ದೊಡ್ಡ ಮನಸ್ಸು ಮಾಡಿ ಜತೆಯಾಗಿ ಸಾಗೋಣ. ಉಸ್ತುವಾರಿಗಳಾಗಿರುವ ಮಮತಾ ಗಟ್ಟಿಯವರ ನೇತೃತ್ವದಲ್ಲಿ ಸುಳ್ಯ ಬ್ಲಾಕ್ ಗಟ್ಟಿಯಾಗಿ ಬೆಳೆಯಲಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು, ಪಕ್ಷದಲ್ಲಿದ್ದ ಸಣ್ಣ ಪುಟ್ಟ ಗೊಂದಲಗಳು ಇಂದು ನಿವಾರಣೆಯಾಗಿದೆ. ಎಲ್ಲರೂ ಒಟ್ಟಾಗಿ ಸಾಗೋಣ. ಮುಂಬರುವ ಚುನಾವಣೆಯ ನಿಟ್ಟಿನಲ್ಲಿ ಪಕ್ಷ ಸಂಘಟಿಸೋಣ” ಎಂದು ಹೇಳಿದರು. ಲಕ್ಷ್ಮೀಶ್ ಗಬಲಡ್ಕ, ಲಕ್ಷ್ಮಣ ಬೊಳ್ಳಾಜೆ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಉಮೇಶ್ ಬೂಡು, ಬಾಲಕೃಷ್ಣ ಭಟ್ ಕೊಡೆಂಕಿರಿ, ಜಂಶೀರ್ ಶಾಲೆಕ್ಕಾರ್, ಸುಜಯಕೃಷ್ಣ, ಬಶೀರ್ ಅಹ್ಮದ್ ನೇಲ್ಯಮಜಲು ಅಭಿಪ್ರಾಯ ವ್ಯಕ್ತಪಡಿಸಿದರು.ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಟಿ.ಎಂ.ಶಹೀದ್, ಪ್ರಮುಖರಾದ ಗೀತಾ ಕೋಲ್ಚಾರ್, ರಾಜೀವಿ ಆರ್ ರೈ, ಕಳಂಜ ವಿಶ್ವನಾಥ ರೈ, ಜಯಪ್ರಕಾಶ್ ನೆಕ್ರೆಪ್ಪಾಡಿ, ಶಾಫಿ ಕುತ್ತಮೊಟ್ಟೆ, ಇಸ್ಮಾಯಿಲ್ ನೇಲ್ಯಮಜಲು, ಸುರೇಶ್ ಅಮೈ, ಸದಾನಂದ ಮಾವಜಿ, ಸುಭಾಶ್ಚಂದ್ರ ರೈ ಬಂಟ್ವಾಳ, ಹಮೀದ್ ಕುತ್ತಮೊಟ್ಟೆ ಮೊದಲಾದವರಿದ್ದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ವಂದಿಸಿದರು. ದಿನೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.
- Thursday
- November 21st, 2024