ಸುಬ್ರಹ್ಮಣ್ಯ: ಕಲಾ ವಿಭಾಗದಲ್ಲಿ ಓದಿರುವ ಹೆಚ್ಚಿನವರು ಅಧಿಕಾರಿಗಳಾಗಿ ಮೂಡಿಬಂದಿರುವುದು ಸಮಾಜದಲ್ಲಿ ನಾವು ಕಾಣುವ ಸತ್ಯವಾಗಿದೆ.ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕಲಾ ವಿಭಾಗದ ವಿಷಯಗಳ ಅಧ್ಯಾಯನ ಅತ್ಯಗತ್ಯ.ಐಎಎಸ್ ಮತ್ತು ಐಪಿಎಸ್ ಮಾಡಿರುವ ಅನೇಕ ಅಧಿಕಾರಿಗಳು ಕಲಾ ವಿಭಾಗವನ್ನು ಅಧ್ಯಾಯನ ಮಾಡಿದವರಾಗಿದ್ದಾರೆ.ಹಾಗಿದ್ದರೂ ಕಲಾ ವಿಭಾಗದ ವಿಚಾರಗಳನ್ನು ಅಧ್ಯಾಯನ ಮಾಡಿದರೆ ನಮ್ಮ ಮಕ್ಕಳು ಜ್ಞಾನವಂತರಾಗುವುದಿಲ್ಲ ಎಂಬ ತಪ್ಪು ತಿಳುವಳಿಕೆ ಹೊಂದಿರುವುದು ಬೇಸರ ಸಂಗತಿ.ಇಂತಹ ವಿಚಾರಗಳನ್ನು ಬಿಟ್ಟು ಆಧುನಿಕ ಬದುಕಿನಲ್ಲಿ ಸರಕಾರಿ ಉದ್ಯೋಗ ಪಡೆದುಕೊಳ್ಳಲು ಕಲಾ ವಿಭಾಗದ ವಿಷಯಗಳನ್ನು ಅಧ್ಯಾಯನ ಮಾಡುವುದು ಒಳಿತು ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.
ದ.ಕ.ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಸಂಘ ಮಂಗಳೂರು, ದ.ಕ.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ಸಮಾಜಶಾಸ್ತç ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಲಾ ವಿಷಯಗಳನ್ನು ಅಧ್ಯಾಯನ ಮಾಡಲು ಸರ್ವರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು.ಪೋಷಕರು ತಮ್ಮ ಮಕ್ಕಳಿಗೆ ಕಲಾ ವಿಭಾಗದ ವಿಷಯಗಳ ಜ್ಞಾನ ಪಡೆಯಲು ಉತ್ತೇಜನ ನೀಡಬೇಕು.ಆಧುನಿಕ ಯುಗದಲ್ಲಿ ಉಪನ್ಯಾಸಕರ ಜ್ಞಾನ ವೃದ್ದಿಗಾಗಿ ನಡೆಸುವ ಇಂತಹ ಕಾರ್ಯಕ್ರಮಗಳು ಸ್ತುತ್ಯಾರ್ಹ.ಕಲಾ ವಿಭಾಗ ಅಧ್ಯಾಯನ ಮಾಡಿದರೂ ಭವಿಷ್ಯದಲ್ಲಿ ಪ್ರಗತಿ ಸಾಧ್ಯ ಎಂಬ ಜಾಗೃತಿಯನ್ನು ಉಪನ್ಯಾಸಕರು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.
ಗೌರವಾರ್ಪಣೆ:
ಪಿಯುಸಿ ವಾರ್ಷಿಕ ಪರೀಕ್ಷೆಯ ಸಮಾಜಶಾಸ್ತç ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ನಿವೃತ್ತ ಪ್ರಾಂಶುಪಾಲ ಯೂಸುಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದ.ಕ ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ವಿಠಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ವಿ.ವಿಯ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ.ರವಿಶಂಕರ್ ಭಟ್, ಮಂಗಳೂರು ವಿ.ವಿಯ ಮಹಿಳಾ ಅಧ್ಯಾಯನ ಕೇಂದ್ರದ ನಿರ್ದೇಶಕಿ ಡಾ.ಅನಿತಾ ರವಿಶಂಕರ್, ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಮುಖ್ಯಅತಿಥಿಗಳಾಗಿದ್ದರು.ದ.ಕ.ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ವಸಂತ ಕುಮಾರ್.ಡಿ, ಕಾರ್ಯದರ್ಶಿ ಮಧು.ಡಿ, ಉಪಾಧ್ಯಕ್ಷ ಲಕ್ಷ್ಮೀಶ ಕೆ.ಪಿ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್.ವಿ, ಎಸ್‌ಎಸ್‌ಪಿಯು ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಸುಧಾ ಉಪಸ್ಥಿತರಿದ್ದರು.