ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ಹಣ್ಣುಕಾಯಿ,ಚಿನ್ನ ಬೆಳ್ಳಿ ಹರಕೆ ವಸ್ತುಗಳ ಮಾರಾಟದ ಅಂಗಡಿ ,ಆದಿಸುಬ್ರಹ್ಮಣ್ಯದ ಹಣ್ಣುಕಾಯಿ ಅಂಗಡಿಗಳನ್ನು ಕ್ರಮವಾಗಿ ಗುರುಪಾದ, ವಿಜಯಕುಮಾರ್ ಮತ್ತು ಕಾರ್ತಿಕ್ ಎಂಬವರು ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಪಡಕೊಂಡಿದ್ದರು. ಕರಾರುಪತ್ರದ ಅವಧಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊನೆಗೊಂಡಿದ್ದರೂ ಚುನಾವಣೆಯ ನೀತಿಸಂಹಿತೆ ಕಾರಣದಿಂದ ಮರು ಹರಾಜು ನಡೆಸಲು ಸಾಧ್ಯವಾಗಿರಲಿಲ್ಲ. ಸದ್ರಿ ಗುತ್ತಿಗೆದಾರರು ಅಂಗಡಿಗಳನ್ನು ತೆರವುಗೊಳಿಸದೇ
ವ್ಯಾಪಾರ ನಡೆಸುತ್ತಿದ್ದರು. ಈ ಮಧ್ಯೆ ಅಂಗಡಿಗಳನ್ನು ಮುಂದಿನ 4 ವರ್ಷದ ಅವಧಿಗೆ ಮುಂದುವರಿಸಿ ನೀಡಬೇಕೆಂದು ಗುತ್ತಿಗೆದಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮಾಸ್ಟರ್ ಪ್ಲಾನ್ ಕಾಮಗಾರಿಗಳು ನಡೆಯಲಿರುವ ಕಾರಣ ಗುತ್ತಿಗೆ ಅವಧಿ ಮುಂದುವರೆಸಲು ಸಾಧ್ಯವಿಲ್ಲವೆಂದು ಹಿಂಬರಹ ನೀಡಿದ ಸರ್ಕಾರದ ಕಾರ್ಯದರ್ಶಿ ಯವರು ಗುತ್ತಿಗೆದಾರರ ಅರ್ಜಿಗಳನ್ನು ತಿರಸ್ಕರಿಸಿ ಆದೇಶ ನೀಡಿದ್ದರು. ಗುತ್ತಿಗೆದಾರರು ಸದ್ರಿ ಆದೇಶವನ್ನು ಪ್ರಶ್ನಿಸಿ ದೇವಸ್ಥಾನದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ಕೋರಿದ್ದರು. ಇದೇ ವೇಳೆ ಸುಬ್ರಹ್ಮಣ್ಯದ ಗ್ರಾಮ ಪಂಚಾಯಿತಿಯ ಸದಸ್ಯ ಹಾಗೂ ಕಾಂಗ್ರೆಸ್ಸಿನ ಗ್ರಾಮ ಸಮಿತಿಯ ಅಧ್ಯಕ್ಷರಾದ ಹರೀಶ ಇಂಜಾಡಿಯವರು ಸದ್ರಿ ಅಂಗಡಿಗಳನ್ನು ನಿಯಮ ಪ್ರಕಾರ ಏಲಂ ನಡೆಸಬೇಕೆಂದು ಕೋರಿ ಸರಕಾರಕ್ಕೆ ನಿರ್ದೇಶನ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಕೇವಲ ಹದಿನೈದು ದಿನಗಳಲ್ಲಿ ಸದ್ರಿ ಪ್ರಕರಣವನ್ನು ಇತ್ಯರ್ಥಪಡಿಸಿದ ಮಾನ್ಯ ನ್ಯಾಯಾಲಯ ಗುತ್ತಿಗೆದಾರರ ಅರ್ಜಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿ ತಕ್ಷಣ ಅಂಗಡಿಗಳನ್ನು ತೆರವುಗೊಳಿಸಿ ಹರಾಜು ನಡೆಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದ್ದು ಅನಧಿಕೃತವಾಗಿ ವ್ಯಾಪಾರ ನಡೆಸಿದ ಮೂರೂವರೆ ತಿಂಗಳ ಬಾಡಿಗೆಗೆ ಶೇ. 10. ದಂಡನೆ ವಿಧಿಸಿ ಆದೇಶ ನೀಡಿದೆ. ದೇವಸ್ಥಾನದ ಪರವಾಗಿ ಶ್ರೀಮತಿ ವೈಶಾಲಿ ಹೆಗ್ಡೆ ಹಾಗೂ ಹರೀಶ ಇಂಜಾಡಿಯವರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಪರವಾಗಿ ಹೈಕೋರ್ಟಿನ ನ್ಯಾಯವಾದಿ ಪುತ್ತೂರಿನ ಸೂರ್ಯಂಬೈಲು ರಾಜಾರಾಮ್ ರವರು ವಾದಿಸಿದ್ದರು. ಹೈಕೋರ್ಟಿನ ಆದೇದಂತೆ ಇದೀಗ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
- Thursday
- November 21st, 2024