ರೈತರ ಅಲ್ಪಾವಧಿ , ದೀರ್ಘಾವಧಿ ಬೆಳೆ ಸಾಲ ಸಹಿತ ಕೃಷಿ ಸಂಬಂಧಿಸಿದ ಇನ್ನಿತರ ಸಾಲಗಳ ಕಂತು ಕಟ್ಟಲು ಆ.31 ರ ತನಕ ಅವಧಿ ಇದ್ದರೂ ಸಹಕಾರಿ ಸಂಘದ ಅಧಿಕಾರಿಗಳು ಸಹಿತ, ಅಧ್ಯಕ್ಷರು , ನಿರ್ದೇಶಕರು ರೈತರಿಗೆ ಬಾಕಿ ಕಂತು ಕಟ್ಟಲು ಮೌಖಿಕ ಬೆದರಿಕೆ ಒಡ್ಡುವ ಮೂಲಕ ಬಡ ರೈತರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ . ಈ ಕುರಿತು ಜಿಲ್ಲಾಡಳಿತ ಜೂ . 30 ರೊಳಗೆ ಸ್ಪಷ್ಟನೆ ನೀಡದಿದ್ದರೆ ಸಹಕಾರಿ ಸಂಘಗಳ ಉನ್ನತ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದ್ದಾರೆ. ಪುತ್ತೂರಿನಲ್ಲಿ ಜೂ 23 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಾಲದ ಕಂತು ಕಟ್ಟಲು ಜೂ .30 ಇದ್ದ ಅವಧಿಯನ್ನು ಆ . 31 ರ ತನಕ ಮುಂದೂಡಲಾಗಿದ್ದು , ಆರ್‌ಬಿಐ ಈಗಾಗಲೆ ಈ ಕುರಿತ ಸುತ್ತೋಲೆಯನ್ನು ಪ್ರತಿ ಸಹಕಾರಿ ಸಂಘಗಳಿಗೆ ಕಳುಹಿಸಿದೆ . ಆದರೆ ಯಾವುದೇ ಬ್ಯಾಂಕ್ ಅಧಿಕಾರಿಗಳು ಈ ಸುತ್ತೋಲೆಯನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಿಲ್ಲ . ಇದೀಗ ಸಹಕಾರಿ ಸಂಘದ ಅಧಿಕಾರಿಗಳು ಒಟ್ಟು ಸೇರಿ ಸಹಕಾರಿ ಸಂಘಗಳ ಅಧ್ಯಕ್ಷರು , ನಿರ್ದೇಶಕರು ಹಾಗೂ ಜಾಮೀನುದಾರರ ಮೂಲಕ ಒತ್ತಡ ಹಾಕುತ್ತಿದ್ದಾರೆ . ಈಗಾಗಲೇ ಕೆಲವು ರೈತರು ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಅಡ ಇಟ್ಟು ಕಂತು ಕಟ್ಟುತ್ತಿದ್ದಾರೆ . ಇದು ಬಡ ರೈತರಿಗೆ ಕೊರೊನಾ ಸೋಂಕಿಗಿಂತಲೂ ಹೆಚ್ಚಿನ ಮಾನಸಿಕ ಹಿಂಸೆ ಆಗಿದೆ . ಈ ನಡುವೆ ಈ ವಿದ್ಯಮಾನವನ್ನು ಯಾವುದೇ ರಾಜಕಾರಣಿಗಳು , ಜನಪ್ರತಿನಿಧಿಗಳು , ರೈತ ಪರ ಸಂಘಟನೆಗಳು ಗಮನಿಸದಿರುವುದು ವಿಪರ್ಯಾಸ ಎಂದ ಅವರು , ಒಂದೆಡೆ ಕೊರೊನಾ ಸೋಂಕು ದೈಹಿಕ ಹಿಂಸೆ ಆದರೆ ಇನ್ನೊಂದೆಡೆ ಸಹಕಾರಿ ಸಂಘಗಳಿಂದ ಮಾನಸಿಕ ಹಿಂಸೆ ಆಗಿದೆ ಎಂದರು . ಇವೆಲ್ಲದರ ನಡುವೆ ರೈತರಿಂದ ಬೆಳೆ ವಿಮೆ ಯೋಜನೆಯನ್ನು 2 ಬಾರಿ ಸೊಸೈಟಿಗಳು ಕಟ್ಟಿಸಿ ಕೊಂಡಿವೆ . ಅಲ್ಲದೆ 2 ವರ್ಷ ಸಂದರೂ ಶೇ . 50 ರಷ್ಟು ಜನರಿಗೆ ಮಾತ್ರ ಸಾಲ ಮನ್ನಾ ಆಗಿದೆ ಎಂದರು . ವೇದಿಕೆ ಸದಸ್ಯರಾದ ಡಿ.ಆರ್ , ಬಾಲಕೃಷ್ಣ ಶಿರಾಡಿ , ಕೆ.ಪಿ. ವಿಜಯ ಶಿರಾಡಿ ಗೋಷ್ಠಿಯಲ್ಲಿದ್ದರು .
- Friday
- November 22nd, 2024